ಸಲಿಲ ತೀರ್ಥವನೆಲ್ಲ ಮಲಿನಗೈಯ್ಯುತ ಮತ್ತೆ
ನೆಲೆಯಿತ್ತ ಇಳೆ ಗಾಳಿಯೆಲ್ಲ ಹಾಳ್ಗೈದು
ಒಲವಿನಿಂ ಶುದ್ಧ ನೀರ್ಗಾಳಿ ನೆಲೆಯರಸುತ್ತ
ಅಲೆವ ಪರಿ ಸೋಜಿಗವೊ ಜಾಣಮೂರ್ಖ//
ಪವಿತ್ರ ತೀರ್ಥ ‘ನೀರು’ ನಮಗೆಲ್ಲ ಜೀವನಾಧಾರವಾದುದು. ಪಂಚ ಭೂತಗಳಲ್ಲಿ ಒಂದು. ಭಗವಂತನಿಂದ ಜೀವಿಗಳಿಗೆ ನೀಡಲ್ಪಟ್ಟ ಅಪೂರ್ವ ಕೊಡುಗೆ ! ಆದರೆ ಇಂದು ನಾವೆಂತಹಾ ಕೆಲಸ ಮಾಡುತ್ತಿದ್ದೇವೆ ಅಂತ ನಿಮಗೇ ಗೊತ್ತು. ಅಂತಹಾ ನೀರನ್ನು ಮಲಿನ ಮಾಡುತ್ತಿದ್ದೇವೆ. ಇಡೀ ಜೀವಿಸಂಕುಲಕ್ಕೇ ಸಾಕಾಗಿ ಜೀವನಾಧಾರವಾಗಿದ್ದು, ಮನಸ್ಸಿಗೆ ಆಹ್ಲಾದಮಯಿಯಾಗಿರುವ ನೀರು ಇಂದು ಅಕ್ಷರಶಃ ಮಲಿನವಾಗಿದೆ, ಮಲಿನವಾಗುತ್ತಿದೆ. ಅದನ್ನು ಮಲಿನಗೊಳಿಸಿ ಶುದ್ಧನೀರೆಂಬ ಭ್ರಮೆಯಲ್ಲಿ ನೀರನ್ನು ಬಾಟಲಿಗಳಲ್ಲಿ ಲೀಟರಿಗಿಷ್ಟೆಂದು ದುಡ್ಡು ಕೊಟ್ಟು ಕುಡಿಯುವ ದಯನೀಯ ಸ್ಥಿತಿ ನಮಗೆ ಬಂದಿರೋದು ತುಂಬಾ ಶೋಚನೀಯ ಸ್ಥಿತಿಯೇ ಸರಿ. ಇದು ನೀರಿನ ಸ್ಥಿತಿಯಾದರೆ ಭೂಮಿಯ ಕತೆ ಹೇಳತೀರದು ! ಸಹನಾಮಯಿ ಭೂತಾಯಿಯ ಸಹನೆಯನ್ನು ನಾವು ಪರೀಕ್ಷಿಸುತ್ತಿದ್ದೇವೆ. ಇನ್ನು ಗಾಳಿಯಂತೂ ಸಿಗದೇ ಮಲಿನಗೊಳ್ಳುತ್ತಿರೋ ಗಾಳಿಯನ್ನೇ ಉಸಿರಾಡುತ್ತಿದ್ದೇವೆ. ಅಲ್ಲದೇ ಭೂಮಿಯನ್ನೂ , ಗಾಳಿಯನ್ನೂ ಸಹ ಮಾರಾಟಕ್ಕಿಟ್ಟಿದ್ದೇವೆ. ನಮ್ಮ ಈ ಪರಿ ಸೋಜಿಗವಲ್ಲವೇ !? ಸ್ವಲ್ಪ ಯೋಚಿಸಿ ಗೆಳೆಯರೇ ಇರುವುದನ್ನು ಉಳಿಸಿಕೊಳ್ಳುವುದು ಒಳಿತೋ ಅಥವಾ ದೈವ ಕೊಟ್ಟ ಶುದ್ಧವಾದುದನ್ನೆಲ್ಲಾ ಮಲಿನಗೊಳಿಸಿ ಮತ್ತೆ ಹಣ ತೆತ್ತು ಶುದ್ಧವಾದುದೆಂಬ ಭ್ರಮೆಯಲ್ಲಿ ಕೊಂಡು ಪಡೆವುದು ಒಳಿತೋ !? ನಾವು ಮಾನವರು. ಪ್ರಾಣಿಗಳಲ್ಲೆಲ್ಲಾ ಬುದ್ಧಿಜೀವಿಯ ಪಟ್ಟ ನಮಗೆ ! ನಾವೇ ಹೀಗಾದರೆ ಗತಿಯೇನು !? ಅಲ್ಲವೇ ಗೆಳೆಯರೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021