ವಿಷಯ ಕೂಪವ ತೋಡಿ ಸುಖಜಲವನರಸುತಲಿ
ವಿಷವನಮೃತದ ತೆರದಿ ಕೊಂಡಾಡಿ ಕುಡಿದು
ನಿಶೆಯೊಳೀ ಬಾಳ್ಗಳೆದು ಬೈಗಾಗೆ ತಪಿಸಿದೊಡೆ
ಯಶ ಬರ್ಪುದೇಂ ಪೇಳು ಜಾಣಮೂರ್ಖ //
ಇದೊಂದು ತರಹೆ ಭ್ರಮನಿರಸನಗೊಂಡ ಬದುಕಾಗಿಬಿಟ್ಟಿದೆ ನಮ್ಮದು. ಸುಖಜಲವನ್ನು ಅರಸುತ್ತಾ ವಿಷಯದ ಭಾವಿಗಳನ್ನು ತೋಡುತ್ತಲೇ ಹೋಗುತ್ತೇವೆ. ಹೇಗೆ ಸಿಕ್ಕೀತು ಸುಖದ ಜಲ !? ವಿಷವನ್ನೇ ಅಮೃತವೆಂದು ಭಾವಿಸಿ ಆಮೋದದಿಂದ ಕುಡಿಯುತ್ತಿದ್ದೇವೆ. ಸುಖದ ಸೆಲೆ ಸಿಗು ಎಂದರೆ ಹೇಗಾದರೂ ಸಿಕ್ಕೀತು !? ವಿಷಯಗಳ ನಿಶೆಯಲ್ಲೇ ಇಡೀ ಬದುಕನ್ನು ಕಳೆದು ಬದುಕಿನ ಸಂಧ್ಯಾಕಾಲದಲ್ಲಿ ಅಯ್ಯಯ್ಯೋ ನಾನೆಂತಹಾ ಕೆಲಸ ಮಾಡಿಬಿಟ್ಟೆ !? ಬರೀ ವಿಷಯಗಳೇ ಸುಖವೆಂದು ಭಾವಿಸಿ ಶಾಶ್ವತ ಸುಖವನ್ನೇ ಮರೆತು , ಕಳೆದುಕೊಂಡುಬಿಟ್ಟೆನಲ್ಲಾ ಎಂದು ಪರಿತಪಿಸಿ ಪಶ್ಚಾತ್ತಾಪ ಪಟ್ಟರೆ ಬದುಕಿನಲ್ಲಿ ಯಶಸ್ಸು ಸಿಗುವುದಾದರೂ ಹೇಗಯ್ಯಾ ಗೆಳೆಯ ! ಮನಸ್ಸೆಂಬ ಹುಚ್ಚು ಕುದುರೆಗೆ ಹೆಂಡ ಕುಡಿಸಿ ಬಿಟ್ಟರೆ ಹೇಗೆ !? ಮನಬಂದಂತೆ ಓಡುತ್ತದೆ ! ಹಳಿ ತಪ್ಪಿದ ರೈಲಿನಂತಾಗುತ್ತದೆ ಬದುಕು ಅಷ್ಟೆ ! ಯಶಸ್ಸೆಂದರೆ ಬದುಕಿನಲ್ಲಿ ನಾವಂದುಕೊಳ್ಳೋ ಯಶಸ್ಸಲ್ಲ ! ಶಬರಿಯ ಬದುಕಲ್ಲಿ ಶ್ರೀರಾಮನೊದಗಿ ಬಂದ ಯಶಸ್ಸು ! ಅನಂತ ಕಷ್ಟಂಗಳನನುಭವಿಸಿ ವರನಾರಸಿಂಹನ ಕಂಡ ಪ್ರಹ್ಲಾದನ ಯಶಸ್ಸು ! ಪರಮಹಂಸರ ಯಶಸ್ಸು ! ಉದಾಹರಿಸುತ್ತಾ ಸಾಗಿದರೆ ಒಂದೇ ….ಎರಡೇ…. ! ಅಲ್ಲವೇ ಗೆಳೆಯರೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021