ಇರಬೇಕೆ
ಮೂಲೆ ಮೂಲೆಯು
ಅದೇ ಗಾತ್ರವ?
ಅದೇ ಕೋನವ?
ನಜ್ಜು ಗುಜ್ಜಾದ
ರೂಪ ಕಳಕೊಂಡ
ಕೊಡಪಾನ
ತರದೆ ನೀರನ!?
ಬಣ್ಣ ಮಾಸಿದ
ಸವೆದು ತೆಳ್ಳಗಾದ
ಚಾಪೆ
ತರದೆ ಸವಿ ನಿದ್ದೆಯ!?
ಇರಬೇಕೆ
ಎಲ್ಲವೂ
ಅಳೆದು ಕಳೆದಂತೆ?
ಹೇಳಿ ಮಾಡಿಸಿದಂತೆ?
ಸುಟ್ಟು ಕರಕಾದ
ಎಣ್ಣೆ ಕಮಟಿನ
ಹಣತೆ
ತರದೆ ಬೆಳಕನ!?
ಮೊನೆಯ ಮಾಡಿ
ಕುಬ್ಜವಾದ
ಕಡ್ಡಿ
ಬರೆಯದೇ ಅದೇ ಅಕ್ಷರವ!?
ಇರಬೇಕೆ
ಪರಿಪೂರ್ಣತೆ
ಇಡುವ ಪ್ರತಿ ಹೆಜ್ಜೆಯಲಿ?
ಮಾಡುವ ಪ್ರತಿ ಕಾಯಕದಲಿ?
Latest posts by rmakkithaya (see all)
- ಸ್ಪೂರ್ತಿ! - July 12, 2021
- ಛಲ! - May 9, 2021
- ಮೊಗ್ಗಾಗುವ ಆಸೆ! - April 11, 2021