ಆ ಎರಡು ಕ್ಷಣ
ಆ ಎರಡು ಕ್ಷಣ
ನನ್ನ ಮನ
ಮೈಲುಗಲ್ಲುಗಳ ಬೆನ್ನಟ್ಟಿ
ಜಾರಿ ಬೀಳುವ ಭಯವಿರಲಿಲ್ಲ
ನಾಳಿನ ಸೋಲು, ಗೆಲುವಿನ
ಅಂಜಿಕೆ, ಆತಂಕವಿರಲಿಲ್ಲ
ಇಟ್ಟ ತಪ್ಪು ಹೆಜ್ಜೆಯ
ಅಪರಾಧ ಭಾವನೆಯಿರಲಿಲ್ಲ
ಗಳಿಸಲಿಡದ ಹಿಂಜರಿಕೆಯ ಹೆಜ್ಜೆಯ
ನೆನಪಿನ ನೋವಿರಲಿಲ್ಲ
ಆ ಎರಡು ಕ್ಷಣ
ನನ್ನ ಮನ
ಇರುವೆ ಸಾಧನೆಯ
ಹೆಮ್ಮೆ, ದುರಹಂಕಾರದ ಸುಳಿವಿರಲಿಲ್ಲ
ಕೂಡಿಟ್ಟ ನಾಲ್ಕು ಕಾಸಿನ
ಗರ್ವ,ಸೊಕ್ಕಿರಲಿಲ್ಲ
ನಾ ಬಯಸಿದಂತೆ ನಡೆಯದವರ
ಮೇಲಿನ ಕೋಪ, ದ್ವೇಷಗಳಿರಲಿಲ್ಲ
ಈಡೇರದ ಆಸೆಗಳಿಗೆ
ಕಾರಣಕರ್ತನ ಮೇಲೆ ಮುನಿಸಿರಲಿಲ್ಲ
ಆ ಎರಡು ಕ್ಷಣ
ನನ್ನ ಮನ
ಜೊತೆ ಜೊತೆಗೆ ಹುಟ್ಟಿ ಬೆಳೆದು ನಿಂತ
ಹೆಮ್ಮರದ ಮೇಲಿನ ಅಸೂಯೆಯಿರಲಿಲ್ಲ
ಮೂಲೆಯಲ್ಲಿನ ಜರಿ ಹರಿದು ಸೇರಿದ
ಸಮುದ್ರದ ಮೇಲಿನ ಹೊಟ್ಟೆಕಿಚ್ಚಿರಲಿಲ್ಲ
ಇರುವ ಪುಟ್ಟ ಚೀಲದಿ
ಬೆಟ್ಟ ತುಂಬುವ ದುರಾಸೆಯಿರಲಿಲ್ಲ
ತುಂಬಿಡಗಲಾಗದ ಗಾಳಿಯ
ಒಟ್ಟು ಹಾಕುವ ಲೋಭವಿರಲಿಲ್ಲ
ಆ ಎರಡು ಕ್ಷಣ
ನನ್ನ ಮನ!
Latest posts by rmakkithaya (see all)
- ಸ್ಪೂರ್ತಿ! - July 12, 2021
- ಛಲ! - May 9, 2021
- ಮೊಗ್ಗಾಗುವ ಆಸೆ! - April 11, 2021