ಶರಣಂಗೆ ಶರಣನಿಹ ಬಾಳ ಸಾಗರವೀಸೆ
ಗುರುವಿಹನು ಧರಣಿಯಾ ಕಷ್ಟಗಳ ಕಳೆಯೆ
ಅರಿ ಆತ್ಮಸಖನಿಹನು ಆತ್ಮಸಂಗಾತಕ್ಕೆ
ಮುರಣದೊಳು ದೇವನಿಹ ಜಾಣಮೂರ್ಖ//
ಭಗವಂತನು ಮನುಷ್ಯನಿಗೆ ಏನುಬೇಕೋ ಎಲ್ಲವನ್ನೂ ಕೊಟ್ಟೇ ಕಳಿಸಿದ್ದಾನೆ. ಜೊತೆಗೆ ಅರಿಷಡ್ವರ್ಗ , ಅಷ್ಟಮದ ಹೀಗೆ ಏನೇನನ್ನೋ ಕಳಿಸಿದ್ದಾನೆ. ನಾಟಕದ ಓಘಕ್ಕೆ ಒಂದಿಷ್ಟು ರಂಜನೆ , ದುಃಖ ಸಂತಸ ಹೀಗೇ ಏನೇನೋ ಬೇಕಲ್ಲಾ ಅದಕ್ಕೆ. ಈ ಬದುಕನ್ನು ಸಾಗಿಸೋದಕ್ಕೆ ಒಬ್ಬ ಶರಣನಿಗೆ ಮತ್ತೊಬ್ಬ ಶರಣನಿದ್ದಾನೆ. ಧರಣಿಯ ಕಷ್ಟಗಳ ನಿವಾರಣೆಗೆ ಗುರುಗಳಿದ್ದಾರೆ. ಆತ್ಮಸಂಗಾತಕ್ಕೆ ಯಾರುಯಾರನ್ನೋ ಹುಡುಕುತ್ತೇವೆ. ಒಳಗಣ್ಣ ತೆರೆಯಿರಿ ! ಹೊರಗಣ್ಣ ಮುಚ್ಚಿ ! ಒಂದು ಕಡೆ ಶಾಂತವಾಗಿ ಕೂರಿ ! ನಮ್ಮ ಆತ್ಮಸಖನು ನಮ್ಮೊಡನಿದ್ದಾನೆ. ಮನಬಿಚ್ಚಿ ಮಾತಾಡಿ. ಎದೆಯ ಹೊರೆಯನ್ನು ಕಳಚಿ ತೂರಿಬಿಡಿ ! ಇನ್ನು ಮರಣದ ನಂತರ ಏನೋ ಎಂಬ ಭಯವೇ !? ಅದಕ್ಕೊಂದು ಸುಂದರ ವ್ಯವಸ್ಥೆಯನ್ನು ಭಗವಂತ ಆಗಲೇ ಮಾಡಿಯಾಗಿದೆ. ಎಲ್ಲವೂ ಪೂರ್ವನಿಶ್ಚಿತ ! ಪೂರ್ವನಿರ್ಧಾರಿತ ! ನಾವು ಸುಮ್ಮನೇ ಜಗದ ನಾಟಕವನ್ನು ವೀಕ್ಷಿಸುತ್ತಾ , ನಮ್ಮ ಪಾತ್ರವನ್ನು ಸರಿಯಾಗಿ ನಿರ್ವಹಿಸುತ್ತಾ ಕಾಲ ಕಳೆಯಬೇಕಷ್ಟೆ ! ಪಾತ್ರನಿರ್ವಹಣೆ ಮುಗಿದ ಮೇಲೆ ಬೇರೆ ಪಾತ್ರಗಳಿಗೆ ರಂಗಸಜ್ಜಿಕೆಯನ್ನೊಪ್ಪಿಸಿ ನೇಪಥ್ಯಕ್ಕೆ ಸರಿಯಬೇಕು. ಸ್ನೇಹಿತರೇ ಈ ಜೀವನ ನಾಟಕದಲ್ಲಿ ನಿಮ್ಮ ಪಾತ್ರ ಹೇಗಿದೆ ಒಮ್ಮೆ ನೋಡಿಕೊಳ್ಳಿ ! ಚನ್ನಾಗಿದೆಯೇ !? ಹಾಗಿದ್ದರೆ ಸರಿ. ಇಲ್ಲದಿದ್ದರೆ ಇನ್ನಾದರೂ ಚಂದವಾಗಿಸಿಕೊಳ್ಳಬೇಕು. ಅಲ್ಲವೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021