ಚಣದ ಸುಖಕೇಕಿಷ್ಟು ರಣಬದುಕು ಪೇಳ್ಕೆಳೆಯ
ಝಣಝಣಿಪ ಕಾಂಚಾಣಕೆಷ್ಟು ಹಪಹಪಿಕೆ !?
ಹಣಕೆ ಗುಣವೇ ಹಾರ ! ಮರಣ ನಿಶ್ಚಿತ ಬಾರ
ಒಣಜಂಭ ತೂರಿ ಬಾಳ್ ಜಾಣಮೂರ್ಖ//
ನಾವು ಎಷ್ಟೇ ಕಷ್ಟಪಟ್ಟು , ಏನೆಲ್ಲಾ ತಂತ್ರಗಾರಿಕೆ ಮಾಡಿ , ನ್ಯಾಯವಾಗೋ ಅಥವಾ ವಾಮಮಾರ್ಗದಿಂದಲೋ ಹಣ ಗಳಿಸಿದರೂ ಪಡೆವ ಸುಖ ಮಾತ್ರ ಚಣಕಾಲ ಮಾತ್ರ ! ಸುಖದ ಸುಪ್ಪತ್ತಿಗೆಯಲ್ಲಿರುವವರೂ ಸಹ ಇಂದು ನಿಜ ಸುಖದ ಅರಸುವಿಕೆಯಲ್ಲಿದ್ದಾರೆ ! ಅಬ್ಬಾ , ಅದೆಷ್ಟು ಹಪಹಪಿಸುತ್ತೇವೆ ಈ ಹಣಕ್ಕಾಗಿ ! ಹಣ ಬೇಕು ಅಷ್ಟೆ. ಆದರೆ ಅದನ್ನು ಸಂಗ್ರಹಿಸಿ ಕೊಳೆಸುವುದಲ್ಲ. ಸಂಗ್ರಹಿಸಿರುವುದು ಬಂಡವಾಳವಾಗಬೇಕೇ ಹೊರತು ಸತ್ತ ಬಂಡವಾಳವಾಗಬಾರದು. ಇಂದಾಗುತ್ತಿರುವುದು ಅದೆ ! ಅಂದಹಾಗೆ ಈ ಹಣಕ್ಕೆ ದೈವೀಕವಾದ ಗುಣವೇ ಬಲಿಯಾಗುತ್ತಿದೆ . ಎಂತಹಾ ವಿಪರ್ಯಾಸ !? ಎಷ್ಟು ಉದ್ದ ಗಾತ್ರಕ್ಕೆ ಬದುಕಿ ಆಳಿದವರೆಲ್ಲಾ ಕಾಲಗರ್ಭದಲ್ಲಿ ಸಿಕ್ಕಿ ಅಳಿದು ಹೋದರು. ಇದೇ ಭೂಮಿಯ ಮೇಲೆ ಹಿಟ್ಲರನ ಸ್ಥಾನ ಹಿಟ್ಲರನಿಗೆ ! ಬುದ್ಧನ ಸ್ಥಾನ ಬುದ್ಧನಿಗೆ ಅಲ್ಲವೇ ? ಯಾರೂ ಶಾಶ್ವತವಾಗಿ ಇಲ್ಲವೇ ಇಲ್ಲ. ಆದರೆ ಅವರ ಬದುಕಿನ ಗಾಥೆ ಶಾಶ್ವತ . ಮರಣವಂತೂ ಯಾರನ್ನೂ ಬಿಡದು. ಒಣಜಂಭವೇಕೆ !? ಬಡಿವಾರವೇಕೆ ? ಸರಳವಾಗಿ ಪ್ರೀತಿಯಿಂದ ಬದುಕೋಣ. ಅಲ್ಲವೇ ಗೆಳೆಯರೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021