ಬರಿದೆ ಕೆರಳಿಸುವೇಕೆ ಅರಳಬಿಡು ಮನಸನ್ನು
ಅರಿತರಿತು ದುರಿತಗಳನಾಚರಿಸುವೇಕೆ ?ಸಿರಿಯರಿವ ಹೃದಯದೊಳ್ಮೆರೆಸು ಮರೆವೇತಕ್ಕೆ ?
ಅರಿವ ಹಣತೆಯ ಬೆಳಗೊ ಜಾಣಮೂರ್ಖ //
ನಮ್ಮ ಮನೋವ್ಯಾಪಾರವನ್ನೊಮ್ಮೆ ಹಾಗೇ ಗಮನಿಸಿ ! ನಾವು ಮನಸ್ಸನ್ನು ಅರಳಿಸುತ್ತಿಲ್ಲ, ಬದಲಿಗೆ ಕೆರಳಿಸುತ್ತಿದ್ದೇವೆ. ಕೆರಳಿದರೆ ಮನಸಿಗೆ ಹಾನಿಯಷ್ಟೆ ! ಅದಕ್ಕೆ ಆದಷ್ಟೂ ಶಾಂತವಾಗಿರಿ. ತಿಳಿದೂ ತಿಳಿದೂ ಕೆಟ್ಟ ಮಾರ್ಗವನ್ನೇ ತುಳಿಯುವುದು ಒಂದು ದೊಡ್ಡ ವಿಪರ್ಯಾಸ ! ಆದರೂ ಸತ್ಯ ! ಹೃದಯದಲ್ಲಿ ನಿರ್ಮಲವಾದ ಪ್ರೀತಿಯೇನೋ ಇದೆ. ಆದರೆ ಅದು ಯಾಕೋ ಮುಚ್ಚಿಬಿಟ್ಟಿದೆ . ಯಾವುದರಿಂದ ಮುಚ್ಚಲ್ಪಟ್ಟಿದೆ ಅಂತ ನಿಮಗೇ ಗೊತ್ತು ! ನಾನತ್ವ , ಈರ್ಷೆ , ಅಹಂಕಾರ, ಮತ್ಸರ , ಲೋಭ ಅಯ್ಯೋ ಹೇಳುತ್ತಾ ಹೋದರೆ ಒಂದೇ ಎರಡೇ ಇವುಗಳಿಂದ ಮನಸ್ಸು ತುಂಬಿ ಹೃದಯವಂತಿಕೆ ಅನ್ನೋದು ಮುಚ್ಚಿಹೋಗಿಬಿಟ್ಟಿದೆ. ಆಗೊಮ್ಮೆ ಈಗೊಮ್ಮೆ ಜಾಗೃತಗೊಂಡು ಹೃದಯವಂತಿಕೆಯ ಬಗ್ಗೆ ಮಾತುಗಳು ಬರುತ್ತವಾದರೂ ಕೆಲವು ಕ್ಷಣಗಳಷ್ಟೆ ! ಮತ್ತೆ ಕಾರ್ಮೋಡ ಕವಿದು , ಮತ್ತದೇ ಅಂಧಕಾರ ! ಏನು ಹೇಳಬೇಕು ಈ ವರ್ತನೆಗೆ !? ಏಕಿಂತಹಾ ಮಾನಸಿಕ ವಿಕಲ್ಪ! ಮನೋ ವಿಕಲತೆ ! ಏಳಯ್ಯಾ ಗೆಳೆಯಾ, ಇನ್ನಾದರೂ ಎಚ್ಚೆತ್ತುಕೋ !? ಅರಿವಿನ ಹಣತೆಯನ್ನು ಬೆಳಗು ಏಳಯ್ಯಾ ! ಬದುಕಿನ ನಶ್ವರತೆಯನ್ನು ಅರಿಯದೇ ಅಂಧಕಾರದಲ್ಲೇ ಕೊಳೆವ ಪರಿಯಾದರೂ ಏಕೆ ? ಬುದ್ಧಿಜೀವಿಗೆ ಈ ಪರಿ ತರವೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021