ಹತ್ತಿ ತಾನೆಲ್ಲಿಯದೊ ಬಿತ್ತಿಬೆಳೆವವನಾರೊ
ಸುತ್ತಿ ಲಡಿ ಮಾಡಿ ನೀಡುವನಾರೊ ಕಾಣೆ !
ಅತ್ತ ನೇವನ ಕಾಣೆ ಬಟ್ಟೆಯಾಯ್ತೈ ಸ್ವಂತ !
ಸುತ್ತಿ ಎಸೆವರೊ ನವೆಯೆ ಜಾಣಮೂರ್ಖ //
ಇದು ಎಷ್ಟು ವಿಚಿತ್ರ ಆದರೂ ಸತ್ಯ ನೋಡಿ ! ನಾವು ಹಾಕಿರೋ ಬಟ್ಟೆ ಇದೆಯಲ್ಲಾ ಇದರಳಗಿರೋ ಹತ್ತಿಯನ್ನು ಬಿತ್ತಿ ಬೆಳೆದ ರೈತನು ಯಾರೋ ! ಎಳೆತೆಗೆದು ಸುತ್ತಿ ಲಡಿಗಳನ್ನಾಗಿ ಮಾಡಿ ಕಟ್ಟು ಮಾಡುವನಾರೋ ! ಮತ್ತೆ ಬಟ್ಟೆ ನೇಯುವ ನೇಕಾರನಾರೋ ಇದಾವುದೂ ನಮಗೆ ಗೊತ್ತಿಲ್ಲ ! ಆದರೆ ಬಟ್ಟೆಯನ್ನಂತೂ ಹಾಕಿಕೊಂಡು ಸುರಸುಂದರಾಂಗರಂತೆ ನಾಟಕವಾಡುತ್ತೇವೆ. ಬಟ್ಟೆ ಹಳೆಯದಾಗಿ ನವೆದರೆ ಸುತ್ತಿ ಮೂಲೆಗೆ ಎಸೆಯುತ್ತೇವೆ ! ಕೆಲವರು ಹಳೇ ಬಟ್ಟೆಗಳನ್ನೆಲ್ಲಾ ಸುಟ್ಟು ಬಿಡುತ್ತಾರೆ ! ಬಟ್ಟೆ ಏನಾಯ್ತೆಂಬುದರ ಬಗ್ಗೆ ತಲೆಕೆಡಿಸಿಕೊಳ್ಳೋದಿಲ್ಲ ! ಅಲ್ಲವೇ ? ಹಾಗೆಯೇ ಪಂಚಭೂತಗಳಿಂದಾದ ಈ ಶರೀರದ ಹುಟ್ಟನ್ನು ಸಮನ್ವಯಿಸಿ ನೋಡಿ ! ಹತ್ತಿ- ಬಟ್ಟೆ ಅದರ ಬದುಕಿಗೂ ನಮ್ಮ ಬದುಕಿಗೂ ಯಾವ ವ್ಯತ್ಯಾಸವೂ ಇಲ್ಲ ಕಣಯ್ಯ ಗೆಳೆಯ ! ಸುಮ್ಮನೇ ಏಕೆ ಹಾರಾಡಬೇಕು ! ಬಟ್ಟೆಯಂತೆ ಬದುಕಿ ಸಾಗುತ್ತಿರಬೇಕು. ಇದೇ ಜೀವನ. ಅಲ್ಲವೇ ಗೆಳೆಯರೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021