ಪೇಳ್ವುದತಿ ಸುಲಭವೈ ವೇದಾಂತ ತತ್ತ್ವಗಳ
ತಾಳ್ವುದೆಂತಜ್ಞಾತ ಮನಸಿನುಪಟಳವ ?
ಪೇಳ್ದಂತೆ ಕುಣಿವರನು ಹಣ್ಣಾಗಿಸುತ ಕುಣಿವ
ಕಳ್ಮನವ ಕಟ್ಟೇಳೊ ಜಾಣಮೂರ್ಖ //
ವೇದಾಂತ , ನೀತಿ ಇತ್ಯಾದಿಗಳನ್ನು ಹೇಳುವುದು ಸುಲಭ. ಆದರೆ ಪಾಲಿಸುವುದು ಬಹಳ ಕಷ್ಟ. ಆದರೆ ನಮ್ಮೊಂದಿಗೇ ಇದ್ದು , ನಮಗೇ ತಿಳಿಯದಂತೆ ಅಜ್ಞಾತವಾಗಿದ್ದು ನಮ್ಮನ್ನು ಕುಣಿಸಿ ಕಷ್ಟಗಳಿಗೀಡುಮಾಡಿ , ತನ್ನನ್ನು ಕಂಡು ತಾನೇ ನಕ್ಕು , ಅತ್ತು, ಕೆಲವೊಮ್ಮೆ ಹಾರಾಡಿ ಮತ್ತೆ ಕೆಲವೊಮ್ಮೆ ಶಾಂತವಾಗಿ ಹೀಗೆ ಹೇಗೇಗೋ ವರ್ತಿಸುವ ಈ ಮನಸ್ಸಿನ ಉಪಟಳವನ್ನು ತಡೆಯುವುದು ಮಾತ್ರ ಬಹಳ ಕಷ್ಟ . ಅದಕ್ಕೆ ಹಿರಿಯರು ಹೇಳುತ್ತಾರೆ. ಮನಸ್ಸು ಹೇಳಿದಂತೆ ಕುಣಿಯಬೇಡ, ನೀ ಹೇಳಿದಂತೆ ಮನಸ್ಸು ಕೇಳುವಂತೆ ನಡೆ ಅಂತ . ಎಷ್ಟು ಸತ್ಯ ಈ ಮಾತು ! ಅದರಿಂದ ಈ ಮನಸ್ಸು ಹೇಳಿದಂತೆಲ್ಲಾ ಕುಣಿಯುವುದು ಬೇಡ. ಇದಕ್ಕೆ ಸ್ವಲ್ಪ ಕಡಿವಾಣ ಹಾಕೋಣ. ನಿರ್ಬಂಧ ಹೇರೋಣ. ನಾವು ಹೇಳಿದಂತೆ ಕೇಳಬೇಕು ಇದು. ಆ ರೀತಿಯಲ್ಲಿ ಮನಸ್ಸನ್ನು ಅಣಿಗೊಳಿಸೋಣ. ಆಗ ನೋಡಿ ಬದುಕು ಒಂದು ಹಿಡಿತಕ್ಕೆ ಬರುತ್ತದೆ. ಅಲ್ಲವೇ ಗೆಳೆಯರೇ!?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021