ಬೆಂಗಳೂರು ಮತ್ತು ಮೈಸೂರು ರಸ್ತೆಯಲ್ಲಿನ ಅರವತ್ತು ಮೈಲು ದೂರದಲ್ಲಿನ ’ಆಶ್ರಯ’ ಕಲಾಮಂದಿರದಲ್ಲಿ ಎಂದಿಗಿಂತ ಹೆಚ್ಚಿನ ಜನಜಂಗುಳಿ ಆ ದಿನ ಇದ್ದಿತ್ತು. ಪ್ರತಿ ದಿನವೂ ಅದು ಹಲವಾರು ಕಾರ್ಯಕ್ರಮಗಳಿಂದ ಕಾರ್ಯನಿರತ ಸ್ಥಳವಾಗಿರುತ್ತಿತ್ತು. ಒಂದು ಕಡೆ ಮಕ್ಕಳ ತರಬೇತಿ ಶಿಬಿರ, ಇನ್ನೊಂದು ಕಡೆ ಮನೆಯ ಶ್ರಂಗಾರದ ವಸ್ಸ್ತುಗಳು ತಯಾರಾಗುತ್ತಿತ್ತು. ಅಲ್ಲಿನವರಿನ ಕೈಚಳಕದಿಂದ ತಯಾರಾದ ಆಟಿಕೆಗಳು, ತೋರಣದ ವಸ್ಸ್ತುಗಳು ಪಕ್ಕದಲ್ಲಿ ಇದ್ದ ಖಾಲಿ ಜಾಗದಲ್ಲಿ ಪ್ರದರ್ಶನ ಮತ್ತು ಮಾರಟಿಕೆ ಆಗುತ್ತಿತ್ತು. ಬೆಳಿಗ್ಗೆಯಿಂದ ಸಂಜೆಯ ತನಕ ಹೀಗೆ ಒಂದಲ್ಲ ಒಂದು ವಿಷಯದಿಂದ ಕ್ರಿಯಾಶೀಲವಾದ ಪ್ರದೇಶ ’ಆಶ್ರಯ’ ವಾಗಿತ್ತು. ಸುಮಾರು ಮುವತ್ತು ವರ್ಷಗಳ ಹಿಂದೆ ಐದು ಸೆಂಟ್ಸ್ ಜಾಗದಲ್ಲಿ ಪ್ರಾರಂಭವಾದ ಅದು ಎರಡು ಎಕರೆ ಜಾಗದಲ್ಲಿ ವಿಸ್ತಾರವಾಗಿ ಬೆಳೆದಿತ್ತು! ಹೆಸರಿಗೆ ಸರಿಯಾಗಿ ನೂರಾರು ಜನರಿಗೆ ಅಶ್ರಯವನ್ನು ಅದು ನೀಡಿತ್ತು ಕೂಡ.
ಆಶ್ರಯದಲ್ಲಿ ಇಂದು ದೈನಂದಿನ ಚಟುವಟಿಕೆಗಳಿಗಿಂತ ಹತ್ತು ಪಟ್ಟು ಹೆಚ್ಚಿನ ಚಟುವಟಿಕೆಗಳು, ಜನರ ಗುಂಪು ನೆರೆದಿತ್ತು. ಚೆನ್ನಾಗಿ ಇಸ್ತ್ರಿ ಮಾಡಿದ ಹಸಿರು ಕಾಟನ್ ಸೀರೆಯಲ್ಲಿ ದ್ರೌಪದಿ ಎಂದಿಗಿಂತ ಕಾಂತಿಯುತಳಾಗಿ ಕಾಣಿಸುತ್ತಿದ್ದರು. ಸಂತೋಷ, ಉತ್ಸಾಹ ಹಾಗೂ ಗುರಿ ತಲುಪಿದ ಸಾಧಕತೆಯ ಭಾವನೆ ಮುಖದ ಮೇಲೆಲ್ಲಾ ಹರಿದಾಡುತ್ತಿತ್ತು. ಇನ್ನೂ ವಿಶೇಷ ಎಂದರೆ ಇಂದು ಆ ಜಾಗ ಇನ್ನೂ ಪ್ರಕಾಶಮಾನವಗಿತ್ತು. ನಾಲ್ಕು ಕಡೆಯಲ್ಲಿ ನೆಟ್ಟ ಹೊಳಪು ಬೆಳಕುಗಳೇ ಅದಕ್ಕೆ ಕಾರಣವಾಗಿತ್ತು.
ಆ ಜಾಗದಲ್ಲಿ ಅಷ್ಟೊಂದು ಸಂಭ್ರಮ ಎದ್ದು ಕಾಣಲು ಒಂದು ಬಹು ದೊಡ್ಡ ಕಾರಣವೇ ಇದ್ದಿತ್ತು. ಆ ದಿನ ದ್ರೌಪದಿಯ ಹಟ, ಸತತ ಹಾಗೂ ಕಠಿಣ ಪ್ರಯತ್ನ, ಛಲವನ್ನು ಪ್ರತಿಬಿಂಬಿಸಿದ ದಿನ. ದ್ರೌಪದಿಯ ಹೆಸರಿಗೆ ದೇಶದ ಉನ್ನತ ಪ್ರಶಸ್ತಿಯಾದ ಪಧ್ಮಶ್ರಿ ಪ್ರಶಸ್ತಿಯು ಪ್ರಕಟವಾಗಿತ್ತು! ಸತತ ಮೂವತ್ತು ವರ್ಷಗಳ ಸಾಧನೆಗೆ ದ್ರೌಪದಿಗೆ ದೊರಕಿದ ರಾಷ್ಟ್ರದ ಉನ್ನತ ಪ್ರಶಸ್ತಿ ಅದಾಗಿತ್ತು.
“ದ್ರೌಪದಿ ಅವರೆ. ಈ ದಿನ ನಿಮಗೆ ಅದೆಷ್ಟು ಮಹತ್ವಾಗಿದೆ ಎಂದು ವಿವರಿಸುತ್ತೀರ? … ” ರಾಜ್ಯದ ಒಂದು ಮುಖ್ಯ ಟಿ.ವಿ ಚಾನಲ್ ವರದಿಗಾರನು ದ್ರೌಪದಿಗೆ ಪ್ರಶ್ನಿಸಿದ್ದನು.
” … … … ಈ ದಿನ ನನಗೆ … … …” ದ್ರೌಪದಿ ಉತ್ತರಿಸುವ ಪ್ರಯತ್ನದಲ್ಲಿರುವಾಗಲೆ ಕಣ್ಣಿನಿಂದ ಎರಡು ಹನಿ ಕಣ್ಣೀರು ಜಾರಿ ಕೆಳಗಡೆ ಬಿದ್ದಿತ್ತು. ದ್ರೌಪದಿ ಹಳೆಯ ನಿನಪಿನ ಸುಳಿಯಲ್ಲಿ ಸಿಕ್ಕಿಹಾಕಿಕೊಂಡಿದ್ದಳು.
*****
” ಇವತ್ತು ಮತ್ತೆ ಕುಡ್ಕಂಡು ಬಂದ್ರ್ಯಾ? ಯಾಕೆ ಈ ರೀತಿ ಮಾಡ್ತಿದ್ರಿ? ಇಷ್ಟು ವರ್ಷ ಸರಿ ಇದ್ರಿ ಅಲ್ಲಾ? ಈಗ ಎರಡು ವರ್ಷದಿಂದ ಎಂತಾ ಆಯ್ತು ನಿಮಗೆ? ಈ ಕೆಟ್ಟ ಚಟ ಯಾಕೆ ಹಚ್ಚಿ ಕೊಂಡ್ರಿ?ಒಂದು ಎಲೆ, ಅಡಿಕೆ ಸಹ ತಿಂತಿರಲಿಲ್ಲೆ ಅಲ್ಲ ನೀವು?ಈಗ ಯಾಕೆ ಹೀಂಗೆ ? ರಾತ್ರಿ ನಿದ್ದೆ ಬಿಡುದು ಕಷ್ಟ ಆಪುದಾದ್ರೆ ಬಣ್ಣ ಹಾಕುದು ಬಿಡ್ಲಕ್ಕಲ್ಲ ನೀವು? ಬಣ್ಣ ಹಾಕಿ ರಾತ್ರಿ ನಿದ್ದೆ ಬಿಟ್ಟು ಕೆಲ್ಸ ಮಾಡುಕು ಅಂತಾ ಏನು ಇಲ್ಲೆ ಅಲ್ಲ? ನೀವು ಮಾಡಿಟ್ಟುದ್ದು ಏನು ಕಡಿಮೆ ಇಲ್ಲೆ ಅಲ್ಲ? ನಾವು ಸಂಸಾರ ನೆಡಿಸಿಕೊಂಡು ಹೋಯ್ಲಕ್ಕು … … …” ಬೆಳಿಗ್ಗೆ ಕುಡಿದು ಬಂದ ಗಂಡನ ಮೇಲೆ ಹೆಂಡತಿ ಗೌರಿ ಸ್ವಲ್ಪ ಹರಿದಾಯ್ದಿದ್ದರು. ಇಷ್ಟು ಹೇಳುವಷ್ಟರಲ್ಲೇ ಉಬ್ಬಸದಿಂದ ಸುಸ್ತಾದ ಗೌರಿ ಅಲ್ಲೇ ಇದ್ದ ಮಂಚದ ಮೇಲೆ ತಮ್ಮ ಧಡೂತಿ ದೇಹವನ್ನು ಕುಕ್ಕರಿಸಿದ್ದರು.
” ಈ ಕೆಟ್ಟ ರೋಗವನ್ನು ನೀನು ಎಲ್ಲಿಂದ ಅಂಟಿಸಿಕೊಂಡಿಯೋ? ನಾನು ಯಾವ ಜನ್ಮದಲ್ಲಿ ಮಾಡಿದ ತಪ್ಪಿಗೋಸ್ಕರ ಈ ಶಿಕ್ಷೆಯೋ? ನಿನ್ನನ್ನು ಕಟ್ಟಿಕೊಳ್ಳುವ ಹಾಗೆ ಆಯಿತು” ಗೋಪಾಲ ನಾಯ್ಕರೂ ಆ ದಿನ ತಮ್ಮಲ್ಲಿದ್ದ ಸಿಟ್ಟನ್ನು ಹಾರಿಸಿಬಿಟ್ಟಿದ್ದರು.
ಆರು ವರ್ಷದ ಕಂದ , ಆಗಷ್ಟೆ ಹಾಸಿಗೆಯಿಂದ ಏಳುತ್ತಿದ್ದ ದ್ರೌಪದಿಗೆ ಈ ಜಗಳ ಅದೇನೂ ಹೊಸದಾಗಿರಲಿಲ್ಲ. ಅದು ಪ್ರತಿದಿನದ ಮಾಮೂಲು ದಿನಚರಿಯಾಗಿತ್ತು. ಮೊದ ಮೊದಲು ಈ ಗಲಾಟೆಗೆ ಹೆದರಿ ಎದ್ದು ಕುಳಿತುಕೊಳ್ಳುತ್ತಿದ್ದಳು. ಆದರೆ ಒಂದೆರಡು ವರ್ಷಗಳಿಂದ ಇದನ್ನು ನೋಡಿ, ನೋಡಿ ಅವಳೂ ಸುಸ್ತಾಗಿ ಬಿಟ್ಟಿದ್ದಳು. ಏನು ಮಾಡುವುದು ಎಂದು ಅವಳಿಗೂ ಅರಿಯದು. ಆರು ವರ್ಷದ ಕಂದನಿಗೆ ಅದು ಹೇಗೆ ತಿಳಿಯುವುದು? ಆದರೂ ಇಂದಿನ ಇಬ್ಬರ ಜಗಳವನ್ನು ಬೆಳಿಗ್ಗೆ ಏಳುತ್ತಲೇ ಕೇಳಿದ ಅವಳು ಸುಮ್ಮನೆ ಕಣ್ಣನ್ನು ಪಿಳಿ ಪಿಳಿ ಮಾಡಿ ನೋಡತೊಡಗಿದಳು.
ಗೋಪಾಲ ನಾಯ್ಕರು ’ಕಡಲ ತೀರ ಭಾರ್ಗವ’ ಶಿವರಾಮ ಕಾರಂತರ ಹುಟ್ಟೂರಾದ ಕೋಟದವರು. ಕರಾವಳಿ ಪ್ರದೇಶದಲ್ಲಿ ಅವರ ಹೆಸರು ಕೇಳದ ಜನರಿರಲಿಲ್ಲ. ಪ್ರತಿಭಾವಂತ ಹಾಗು ಜನಪ್ರಿಯ ಯಕ್ಷಗಾನ ಕಲಾವಿದರು. ಈಗ ಸುಮಾರು ಐವತ್ತು ವರ್ಷದವರಾದ ಅವರು ಅದಾಗಲೇ ಒಂದು ಮುವತ್ತು ವರ್ಷ ಕಲಾರಾಧನೆ ಮಾಡಿದ ಯಕ್ಷಗಾನ ಕಲಾವಿದರು. ಅವರು ಮಾಡದ ಪಾತ್ರಗಳಿರಲಿಲ್ಲ. ಅವರ ಸ್ತ್ರೀ ವೇಷವನ್ನು ಮೆಚ್ಚದ ಯಕ್ಷಗಾನ ಪ್ರೇಮಿಗಳಿರಲಿಲ್ಲ.
ಮುವತ್ತು ವರ್ಷಗಳ ಅವರ ಕಲಾರಾಧನೆಯಲ್ಲಿ ಹಲವಾರು ಹೊಸ ಪ್ರಯೋಗಗಳನ್ನು ಮಾಡಿದ ಹೆಮ್ಮೆ ಗೋಪಾಲ ನಾಯ್ಕರದ್ದು. ಸ್ತ್ರೀ ವೇಷ ಧರಿಸಿ ರಂಗಸ್ಥಳಕ್ಕೆ ಗೋಪಾಲ ನಾಯ್ಕರು ಕಾಲಿಟ್ಟರೆ ಆ ವೇಷದೊಳಗೆ ಇರುವುದು ಪುರುಷ ದೇಹ ಎಂದು ಗೊತ್ತಿರದವರಿಗೆ ಊಹಿಸುವುದು ಬಹಳ ಕಷ್ಟವೇ. ಹಾಕುವ ಹೆಜ್ಜೆ, ಮಾಡುವ ನ್ರತ್ಯ, ತಿರುಗಿಸುವ ಕುತ್ತಿಗೆಯನ್ನು ಸರಿಸಾಟಿಸುವ ಇನ್ನೊಬ್ಬ ಕಲಾವಿದರು ಇರಲಿಕ್ಕಿಲ್ಲ. ಜೋಡು ಮೇಳ ಪ್ರದರ್ಶನದಲ್ಲಿ ನಾಯ್ಕರ ಮೇಳಕ್ಕೆ ಬೀಳುವ ಸೀಟಿ, ಚಪ್ಪಾಳೆ ಬೇರೆ ಮೇಳಕ್ಕೆ ಸಿಗುವುದಕ್ಕೂ ಅಜಗಜಾಂತರ ವ್ಯತ್ಯಾಸ.
ಇಪ್ಪತ್ತು ವರ್ಷಗಳ ಹಿಂದೆ ಅವರು ಮಾಡಿದ ಪ್ರಥಮ ಪ್ರಯೋಗ ’ದ್ರೌಪದಿ ಪ್ರತಾಪ’ ವಂತೂ ಇನ್ನೂ ಜನಪ್ರಿಯವಾಗಿತ್ತು. ಆ ಪ್ರಸಂಗ ಅಧ್ಬುತ ಜನಮಣ್ಣನೆಯನ್ನು ಪಡೆದಿತ್ತು. ಅರ್ಜುನನನ್ನು ಯುದ್ಧಕ್ಕೆ ಕರೆಯುವ ದ್ರಶ್ಯದಲ್ಲಿ ಅವರ ನ್ರತ್ಯವನ್ನು ಆನಂದಿಸದ ಯಕ್ಷಗಾನ ಪ್ರೇಮಿಗಳಿರಲಿಲ್ಲ. ಸಂಭಾಷಣೆಯ ಮಧ್ಯೆ ಅವರು ಹಾರಿಸುವ ಹಾಸ್ಯ ಚಟಾಕಿ ಭಾಗವತರನ್ನೂ ಬಿಡುತ್ತಿರಲಿಲ್ಲ. ಪ್ರೇಕ್ಷಕರನ್ನು ಅಷ್ಟೇ ಅಲ್ಲ , ಭಾಗವತರನ್ನೂ ನಗೆಗಡಲಲ್ಲಿ ಬೀಳಿಸಿ ಬಿಡುತ್ತಿತ್ತು. ಕ್ರಷ್ಣನ ಜೊತೆ ಮಾಡುವ ಸಂವಾದದಲ್ಲಿ ದಶಾವತಾರವನ್ನು ಬಿಂಭಿಸುವ ಅವರ ನ್ರತ್ಯವನ್ನು ಹಿಂದಿಕ್ಕುವ ಇನ್ನೊಬ್ಬ ಕಲವಿದ ಹುಟ್ಟಿ ಬಂದಿಲ್ಲ ಎನ್ನುವುದು ಯಕ್ಷಗಾನ ಪ್ರೇಮಿಗಳ ನಂಬಿಕೆ. ಈ ದ್ರಶ್ಯಕ್ಕೆ ಮೊದಲು ಚಂಡೆ ವಾದಕರು ಚಂಡೆಯ ಹಗ್ಗವನ್ನು ಇನ್ನೂ ಗಟ್ಟಿ ಮಾಡಿಕೊಂಡು ಎರಡು ದ್ರಶ್ಯಗಳ ಮೊದಲೇ ತಯಾರಾಗಿರುತ್ತಿದ್ದರು. ಏಕೆಂದರೆ ನಾಯ್ಕರು ಆ ದ್ರಶ್ಯದಲ್ಲಿ ಎಷ್ಟು ಕುಣಿಯುವರು ಎಂದು ಯಾರಿಗೂ ಮೊದಲೆ ತಿಳಿಯದು!
ಯಕ್ಷಗಾನದಲ್ಲಿ ಬಹಳ ಹೆಗ್ಗಳಿಕೆ ಪಡೆದುಕೊಂಡ ನಾಯ್ಕರು ಸಂಸಾರ ಸಾಗರದಲ್ಲಿ ಇಳಿದಿದ್ದು ಸ್ವಲ್ಪ ತಡವಾಗಿಯೆ. ತಮ್ಮದೇ ಊರಿನ ಮತ್ತು ನಾಯ್ಕರ ಪರಿಚಯದ ಕುಟುಂಬದಿಂದಲೆ ಬಂದ ಗೌರಿಯನ್ನು ಅವರು ಬಾಳಸಂಗಾತಿಯಾಗಿ ಆರಿಸಿಕೊಂಡಿದ್ದರು. ತಡವಾಗಿ ಮದುವೆ ಆದಂತೆ ಅವರ ಕುಟುಂಬ ಬೆಳೆಯುವುದೂ ಸ್ವಲ್ಪ ತಡವಾಗಿಯೆ ಆಗಿತ್ತು. ಹಲವಾರು ದೇವರಿಗೆ ಗೌರಿ ಹರಕೆ ಹೇಳಿಕೊಂಡ ಮೇಲೆಯೆ ಮದುವೆಯಾಗಿ ಹತ್ತು ವರ್ಷಗಳ ನಂತರ ದ್ರೌಪದಿಯ ಆಗಮನ ಅವರ ಸಂಸಾರದಲ್ಲಿ ಆಗಿತ್ತು. ಅವರ ಪ್ರೀತಿಯ ಪ್ರಸಂಗ, ತುಂಬಾ ಹೆಗ್ಗಳಿಕೆ ತಂದುಕೊಟ್ಟ ಪ್ರಸಂಗದಲ್ಲಿ ತಮ್ಮನ್ನೇ ತೊಡಗಿಸಿಕೊಂಡ ಪಾತ್ರವಾದ ’ದ್ರೌಪದಿ’ ಯನ್ನೇ ಅವರು ಮಗಳ ಹೆಸರಾಗಿ ಆಯ್ಕೆ ಮಾಡಿಕೊಂಡಿದ್ದರು.
ದ್ರೌಪದಿ ಅವರ ಸಂಸಾರದಲ್ಲಿ ಬಂದು ಮೂರು,ನಾಲ್ಕು ವರ್ಷಗಳು ಎಲ್ಲವೂ ತುಂಬಾ ಚೆನ್ನಾಗಿಯೆ ನಡೆದಿತ್ತು. ಆದರೆ ಅದೇಕೊ ಒಂದು ಕೆಟ್ಟ ರೋಗವೊಂದು ಗೌರಿಯ ದೇಹವನ್ನು ಹೊಕ್ಕಿತ್ತು. ಒಂದೇ ಸಮನೆ ಕೆಮ್ಮು, ಉಬ್ಬಸದಿಂದ ತಳಮಳಿಸಿದ್ದರು ನಾಯ್ಕರ ಹೆಂಡತಿ ಗೌರಿ. ಒಂದು ಹತ್ತು ನಿಮಿಷ ಕೆಲಸ ಮಾಡಿದರೆ ಸುಸ್ತಾಗಿ ಬಿಡುತ್ತಿದ್ದರು. ಒಂದು ಅನ್ನ, ಸಾರು ಮಾಡಿ ಇಡುವುದೇ ಕಷ್ಟವಾಗುತ್ತಿತ್ತು. ದ್ರೌಪದಿಯನ್ನು ನೋಡಿಕೊಂಡು, ಮನೆ ಕೆಲಸವನ್ನು ಮಾಡುವಷ್ಟರಲ್ಲಿ ಹಣ್ಣುಗಾಯಿ, ನೀರುಗಾಯಿ ಆಗಿ ಬಿಡುತ್ತಿದ್ದರು. ಗೋಪಾಲ ನಾಯ್ಕರಿಗೂ ವರ್ಷವಾಗಿತ್ತು. ಮೊದಲಿನ ಮುದವಿರಲಿಲ್ಲ. ಮೊದಲಿನ ರೀತಿಯಲ್ಲಿ ನ್ರತ್ಯ ಮಾಡುವ ಹುಮ್ಮಸ್ಸು ಇರುತ್ತಿರಲಿಲ್ಲ. ತಮ್ಮದೇ ಮೇಳ ಕಟ್ಟಿಕೊಂಡು ಬೆಂಗಳೂರಿಗೆ, ಹೊರ ದೇಶಗಳಿಗೆ ಹೋಗುವ ನಾಯ್ಕರ ಮಹಾತ್ವಾಕಂಕ್ಷೆ ಅವರಿಗೆ ಮುಳುವಾಗಿತ್ತು. ಸಾಲದ ಹೊರೆಯಲ್ಲಿ ಸಿಲುಕಿ ಹಾಕಿಕೊಂಡಿದ್ದರು. ಹೆಂಡತಿಯ ಆರೋಗ್ಯ, ತಮ್ಮ ವ್ಯವಹಾರದಲ್ಲಿನ ಸಾಲ ಹಾಗೂ ತಮ್ಮ ಯಕ್ಷಗಾನ ಪ್ರದರ್ಶದಲ್ಲಿನ ಇಳಿಕೆ ಎಲ್ಲವೂ ಒಂದೇ ಕಾಲದಲ್ಲಿ ನಾಯ್ಕರನ್ನು ಅಪ್ಪಚ್ಚಿ ಮಾಡಿಬಿಟ್ಟಿತ್ತು. ದುಡ್ಡಿನ ಕಷ್ಟವನ್ನು ಅವರು ಹೆಂಡತಿ ಗೌರಿಗಾಗಲಿ ಬೇರೆ ಯಾರಿಗಾಗಲಿ ಹೇಳಿಕೊಂಡಿರಲಿಲ್ಲ. ಆದರೆ ಈ ಎಲ್ಲಾ ಕಷ್ಟವನ್ನು ಎದುರಿಸಲು ಮತ್ತು ರಾತ್ರಿ ಇಡಿ ನಿದ್ರೆ ಬಿಟ್ಟು ಪ್ರದರ್ಶನವನ್ನು ಕೊಡುವುದಕ್ಕೊಸ್ಕರ ಅವರು ಕುಡಿತಕ್ಕೆ ಮೊರೆ ಹೋಗಿ ಬಿಟ್ಟಿದ್ದರು. ಮೊದ ಮೊದಲು ರಾತ್ರಿ ನಿದ್ದೆಯಿಂದ ತಪ್ಪಿಸಿಕೊಳ್ಳುವ ನೆಪ ಇಟ್ಟುಕೊಂಡು ಪ್ರಾರಂಭಿಸಿದ ಆ ಕೆಟ್ಟ ಚಾಳಿ ಹೆಮ್ಮರದಂತೆ ಅವರನ್ನು ಸುತ್ತುವರಿಸಿ ಬಿಟ್ಟಿತ್ತು. ಕುಡಿದು ಬಂದ ನಾಯ್ಕರನ್ನು ನೋಡುತ್ತಿದ್ದ ಗೌರಿ, ಮೊದ ಮದಲು ಸುಮ್ಮನಿದ್ದರೂ ಬರ ಬರುತ್ತಾ ಸಿಟ್ಟು ನೆತ್ತಿಗೇರಿ ಬಯ್ಗುಳ ಮಾಲೆಯನ್ನೇ ನಾಯ್ಕರಿಗೆ ಏರಿಸುತ್ತಿದ್ದರು. ಗಂಡ ಹೆಂಡಿರ ಜಗಳದಲ್ಲಿ ಬಡವಾಗಿದ್ದು ಕೂಸು ಎಂಬಂತೆ ದ್ರೌಪದಿ ಕಂಗಾಲಾಗಿದ್ದಳು. ಅವುಗಳೆಲ್ಲವನ್ನು ಅರಿಯುವ ವಯಸ್ಸು ಅವಳದ್ದಾಗಿರಲಿಲ್ಲ. ಬರ ಬರುತ್ತಾ ಮನೆಯ ಕೆಲಸಕ್ಕೆ ಅಮ್ಮನನ್ನು ಸೇರಿಕೊಂಡಿದ್ದಳು. ಆರೇಳು ವರ್ಷದಲ್ಲಿ ಸ್ನೇಹಿತರೊಂದಿಗೆ ಆಡುವ ಸಮಯದಲ್ಲಿ ಮನೆ ಕೆಲಸ ಎಂದು ಸಮಯ ಸರಿಸುವ ಪರಿ ದ್ರೌಪದಿಯದಾಯಿತು.
ಮುಂದಿನ ಕೆಲವು ವರ್ಷಗಳಲ್ಲಿ ಮನೆಯ ಮರಿಸ್ಥಿತಿ ಇನ್ನೂ ಬಿಗಡಾಯಿಸಿ ಬಿಟ್ಟಿತ್ತು. ಅಮ್ಮನ ಆರೋಗ್ಯ ಇನ್ನೂ ಹಾಳಾಗಿತ್ತು. ನಾಯ್ಕರ ಹಣಕಾಸಿನ ಪರಿಸ್ಥಿತಿ ಇನ್ನೂ ಇಳಿಕೆಯನ್ನು ನೋಡಿತ್ತು. ಹತ್ತನೇ ವರ್ಷದಲ್ಲಿಯೇ ದ್ರೌಪದಿ ಮನೆ ಕೆಲಸದ ಸಂಪೂರ್ಣ ಹೊರೆಯನ್ನು ಹೊರುವಂತಾಗಿತ್ತು.
ಹೆಸರಿಗೆ ಸರಿಯಾಗಿ ಬಾಲ್ಯದ ಸಂತೋಷವನ್ನು ಅನುಭವಿಸುವ ಭಾಗ್ಯ ದ್ರೌಪದಿಗೆ ಇಲ್ಲದಂತಾಗಿತ್ತು. ಬೆಂಕಿಯ ಜ್ವಾಲೆಯಿಂದ ಧ್ರುಪದನ ಇಷ್ಟಕ್ಕೆ ವಿರುಧ್ಧವಾಗಿ ಯುವತಿಯಾಗಿಯೆ ಎದ್ದು ಬಂದ ಮಹಾಭಾರತದ ದ್ರೌಪದಿ ತನ್ನ ಬಾಲ್ಯವನ್ನು ನೋಡಿರಲೆ ಇಲ್ಲ. ಮಹಾಭಾರತದ ದ್ರೌಪದಿಯಂತೆ ನಾಯ್ಕರ ದ್ರೌಪದಿಯೂ ತನ್ನ ಬಾಲ್ಯದ ಆನಂದವನ್ನು ಅನುಭವಿಸುವ ಭಾಗ್ಯವನ್ನು ಪಡೆದು ಬಂದಿರಲಿಲ್ಲ!
ಇದರೆಲ್ಲದರ ನಡುವೆ ನಾಯ್ಕರ ಹೆಂಡತಿ ಗೌರಿ ವಿಧಿವಶರಾಗಿದ್ದರು. ಅಮ್ಮನ ಅಗುಲುವಿಕೆಯ ನೋವಿಗಿಂತ ದೊಡ್ಡದಾದ ಕಷ್ಟ ದ್ರೌಪದಿಯ ಎದುರಿಗೆ ಬಂದಿತ್ತು! ನಾಯ್ಕರಿಗೆ ಹಣಕಾಸಿನ ಕಷ್ಟವನ್ನು ಎದುರಿಸುವುದು ಇನ್ನೂ ಕಷ್ಟವಾಗಿತ್ತು. ಐವತ್ತು ವರ್ಷಗಳ ಜೀವನದಲ್ಲಿ ಒಮ್ಮೆಯೂ ಬೇರೆಯವರ ಎದುರು ಕೈ ಚಾಚದ ಜೀವಿ. ಈಗ ಸಾಲದ ಸುಳಿಯಲ್ಲಿ ಸಿಲುಕ್ಕಿದ್ದರು. ಹದಿನಾಲ್ಕು ವರ್ಷದ ಮಗಳನ್ನು ನೋಡಿಕೊಳ್ಳುವುದೂ ಅವರಿಗೆ ಸುಲಭವಾಗಿರಲಿಲ್ಲ. ಈ ಕಷ್ಟಗಳಿಂದ ತಪ್ಪಿಸಿಕೊಳ್ಳುವ ಒಂದೇ ಒಂದು ಉಪಾಯ ಅವರಿಗೆ ತಿಳಿಸಿದ್ದು ಅವರ ಭಾಗವತರು. ನಾಯ್ಕರ ಸಮವಯಸ್ಕರಾದ ಭಾಗವತರು ದ್ರೌಪದಿಯನ್ನು ಅವರಿಗೆ ಮದುವೆ ಮಾಡಿಕೊಡುವಂತೆ ಕೇಳಿಕೊಂಡಿದ್ದರು! ಅದರ ಪ್ರತಿಫಲವಾಗಿ ನಾಯ್ಕರ ಸಾಲದ ಹೊರೆಯನ್ನು ತೀರಿಸುವ ಸಹಾಯ ಹಸ್ತವನ್ನು ಅವರು ಚಾಚಿದ್ದರು. ಬೇರೆ ಉಪಾಯ ತಿಳಿಯದ ನಾಯ್ಕರು ಭಾಗವತರ ಸಲಹೆಗೆ ಹೂಂಗುಟ್ಟಿದ್ದರು.
ಹಣಕಾಸಿನ ಸಮಸ್ಸೆಯ ಸುಳಿಯಲ್ಲಿ ಸಿಲುಕಿದ ನಾಯ್ಕರಿಗೆ ಅದು ಮಾತ್ರವೇ ಒಂದು ದಾರಿಯಾಗಿ ತೋರಿತ್ತು. ಕಷ್ಟಗಳ ಹೊಳೆಯನ್ನೇ ನೋಡಿದ್ದ, ಸಣ್ಣ ಪ್ರಾಯದಲ್ಲೆ ಪ್ರೌಢತೆಯನ್ನು ಪಡೆದುಕೊಂಡ ದ್ರೌಪದಿಗೆ ಅದು ಹೇಗೆ ಸರಿಯಾದ ಉತ್ತರವಾಗಿ ಕಾಣಿಸೀತು?
*****
” … … … ಮ್ಯಾಡಮ್ … ಮ್ಯಾಡಮ್ … ಆರ್ ಯು ಆಲ್ ರೈಟ್ ? … … … ಏಕೆ ಕಣ್ಣು ಮುಚ್ಚಿಕೊಂಡಿದ್ದೀರಾ? ಏನಾಗ್ತ ಇದೆ? ಏಕೆ ಉತ್ತರಿಸುತ್ತಿಲ್ಲ? … … … ” ವರದಿಗಾರನು ದ್ರೌಪದಿಯನ್ನು ಸ್ವಲ್ಪ ಜೋರಿನ ಸ್ವರದಲ್ಲೇ ಕೇಳಿದ್ದನು.
ಒಮ್ಮೆಗೆ ನೆನಪಿನ ಸುಳಿಯಿಂದ ಹೊರಗಡೆ ಬಂದಿದ್ದಳು ದ್ರೌಪದಿ. ಏನಾಗುತ್ತಿದೆ ಎಂದು ಅರಿತುಕೊಳ್ಳಲು ಸ್ವಲ್ಪ ಸಮಯವೇ ಬೇಕಾಯಿತು ಅವಳಿಗೆ.
“… … … ಸ್ಸಾರಿ. ಏಕೋ ಸ್ವಲ್ಪ ತಲೆ ಸುತ್ತುತ್ತಿದೆ. ನನಗೆ ಸ್ವಲ್ಪ ಸಮಯ ಕೊಡಿ … … …” ಅಲ್ಲೇ ಇದ್ದ ನೀರಿನ ಲೋಟದಿಂದ ನೀರು ಕುಡಿಯುತ್ತಾ ದ್ರೌಪದಿ ಹೇಳಿದಳು. ತನ್ನ ಕೊಟಡಿಯತ್ತ ತಡೆಯುತ್ತಿದ್ದ ದ್ರೌಪದಿ ಮತ್ತೆ ನೆನಪಿನಂಗಳಕ್ಕೆ ಜಾರಿದಳು.
*****
ಚಿಕ್ಕ ವಯಸ್ಸಿನಲ್ಲೇ ಅಪಾರ ಪ್ರೌಢತೆಯನ್ನು ಹೊಂದಿದ ದ್ರೌಪದಿಗೆ ಆ ವಯಸ್ಸಿನಲ್ಲಿ ಮದುವೆಯ ಭಾರವನ್ನು ಹೊರುವುದು ಸರಿ ಅನ್ನಿಸಲ್ಲಿಲ್ಲ. ಸರಿ ಅನ್ನಿಸದೆ ಇರುವುದಷ್ಟೇ ಅಲ್ಲ. ಅದನ್ನು ಅನುವರಿಸುವುದನ್ನು ವಿರೋಧಿಸುವ ಛಲ ಮತ್ತು ಮನೋಭಲ ಕೂಡ ಅವಳಲ್ಲಿ ಬೆಳೆದು ಬಂದಿತ್ತು. ಆದರೆ ಅಪ್ಪನ ತೀರ್ಮಾನವನ್ನು ವಿರೋಧಿಸಿ ಅವರ ಎದುರೇ ಎದ್ದು ನಿಲ್ಲುವ ಧೈರ್ಯ ಮಾತ್ರ ಇರಲಿಲ್ಲ. ಅದಕ್ಕೆ ಅವಳು ಬೇರೆ ಉಪಾಯವೊಂದನ್ನು ಯೋಚಿಸಿದಳು.
ಒಂದು ರಾತ್ರಿ ನಾಯ್ಕರು ಯಕ್ಷಗಾನವೆಂದು ಊರ ದೇವಸ್ಥಾನದ ಬಳಿಯ ರಂಗಸ್ಥಳಕ್ಕೆ ಹೋಗಿದ್ದರು. ಆ ದಿನ ಅವರ ಮನಸ್ಸಿಗೆ ಇಷ್ಟವಾದ ಪ್ರಸಂಗ ದ್ರೌಪದಿ ಪ್ರತಾಪವಾಗಿತ್ತು. ತನ್ನ ಹಲವು ಬಟ್ಟೆಗಳನ್ನು ಒಂದು ಪೆಟ್ಟಿಗೆಗೆ ಹಾಕಿಕೊಂಡು, ಮನೆಯಲ್ಲಿದ್ದ ಸ್ವಲ್ಪ ಹಣವನ್ನು ತೆಗೆದುಕೊಂಡು ಹಾಗು ಮನೆಯಲ್ಲಿದ್ದ ಕೆಲವು ಚಿನ್ನದ ಒಡವೆಗಳನ್ನು ಹೊಂದಿಸಿಕೊಂಡು ದ್ರೌಪದಿ ತನ್ನ ಕಾಲನ್ನು ಹೊರಗಡೆ ಇಟ್ಟಿದ್ದಳು!
ಮಾಡುವ ಕೆಲಸದಲ್ಲಿ ಧೈರ್ಯ, ಸರಿಯಾದ ಉದ್ದೇಶ ಎರಡೂ ಇದ್ದಲ್ಲಿ ದೇವರು ಸಹಾಯಕ್ಕೆ ಬಂದೆ ಬರುತ್ತಾನೆ ಅಂತೆ ಅಲ್ಲವೆ? ದ್ರೌಪದಿಯ ವಿಷಯದಲ್ಲೂ ಹಾಗೆಯೆ ಆಯಿತು.
ಉಡುಪಿಯಿಂದ ಮೈಸೂರಿಗೆ ಹೋಗುವ ಬಸ್ಸು ಹತ್ತಿದ ದ್ರೌಪದಿ ಮೈಸೂರಲ್ಲಿ ಇಳಿಯುವಷ್ಟರಲ್ಲಿ ಆ ಬಸ್ಸಿನಲ್ಲಿದ್ದ ದಂಪತಿಗಳಿಗೆ ಇವಳು ಮನೆ ಬಿಟ್ಟು ಬಂದಿರುವವಳು ಎಂದು ಅರಿವಾಗಿಬಿಟ್ಟಿತ್ತು. ಯಾವುದೇ ಪ್ರಶ್ನೆಯನ್ನು ಕೇಳದೆ ಅವರು ಅವಳಿಗೆ ತಮ್ಮ ಮನೆಗೆ ಬರುವಂತೆ ಕೇಳಿಕೊಂಡಿದ್ದರು. ದ್ರೌಪದಿಗೂ ಬೇರೆ ಮಾರ್ಗವೇನೂ ಇರಲಿಲ್ಲ. ಅವಳಿಗೂ ಒಂದು ಆಶ್ರಯ ಬೇಕಿತ್ತು. ಅವರು ಹೇಳಿದಂತೆ ಅವರ ಮನೆಯಲ್ಲಿರಲು ಒಪ್ಪಿದಳು ಕೂಡ.
ಮುಂದಿನ ಮುವತ್ತು ವರ್ಷಗಳು ದ್ರೌಪದಿಯ ಜೀವನದಲ್ಲಿ ನಿದ್ದೆಯಲ್ಲಿ ನೋಡಿದ್ದ ಕನಿಸನ ಹಾಗೆ ನಡೆದು ಹೋಗಿತ್ತು. ಮಕ್ಕಳಿಲ್ಲದ ದಂಪತಿಗಳ ಮುದ್ದಿನ ಮಗಳಾಗಿ ದ್ರೌಪದಿ ಬೆಳೆದಿದ್ದಳು. ಡಿಗ್ರಿ ಮುಗಿಸಿದ ದ್ರೌಪದಿಯ ಗುರಿ ಬೇರೆಯೇ ಇದ್ದಿತ್ತು. ಅವಳ ಮಹಾತ್ವಾಕಾಂಕ್ಷೆ, ಅವಳ ಹಟಕ್ಕೆ ಅವಳ ದತ್ತು ಅಪ್ಪ, ಅಮ್ಮ ಕೂಡ ನೀರೆರದಿದ್ದರು.
*****
ಬೆಂಗಳೂರಿನ ಎಪ್ಪತ್ತು ಕಿಲೋ ಮೀಟರ್ ದೂರದಲ್ಲಿ ಇದ್ದ ದತ್ತು ಪೋಷಕರ ಐದು ಸೆಂಟ್ಸ್ ಜಗದಲ್ಲಿ ದ್ರೌಪದಿಯ ಮಹಾತ್ವಾಕಾಂಕ್ಷೆಯ ಪ್ರತಿಬಿಂಬದಂತೆ ’ಆಶ್ರಯ’ ಹುಟ್ಟಿ ನಿಂತಿತ್ತು. ತಾನು ಪಟ್ಟ ಕಷ್ಟ ಉಳಿದವರು ಪಡೆಯಬಾರದು. ಪ್ರಪಂಚದಲ್ಲಿ ಎಲ್ಲರಿಗೂ ತನ್ನ ರೀತಿಯ ದತ್ತು ಪೋಷಕರು ದೊರೆಯುವುದಿಲ್ಲ. ಅದಕ್ಕೋಸ್ಕರವೆ ತನ್ನ ಕೈಯಲ್ಲಿ ಆದಸ್ಟು ಸಹಾಯ ನೊಂದವರಿಗೆ ನೀಡಬೇಕು ಎಂಬ ಮಹಾತ್ವಾಕಾಂಕ್ಷೆಯಿಂದ ಆಶ್ರಯವನ್ನು ಪ್ರಾರಂಭಿಸಿದಳು. ನೊಂದವರ ಜೀವನಕ್ಕೆ ಊರುಗೋಲಾಗುವುದು, ಅವರ ಜೀವನೋದ್ಧಾರಕ್ಕೆ ಸ್ಪೂರ್ಥಿಯಾಗುವುದು ಅವಳ ಗುರಿಯಾಗಿತ್ತು. ಬಾಲ್ಯ ವಿವಾಹ ಮತ್ತು ಬಾಲ್ಯ ಕಾರ್ಮಿಕತನದ ನಿರ್ಮೂಲನೆಯ ಗುರಿಯನ್ನು ಇಟ್ಟುಕೊಂಡು ದ್ರೌಪದಿ ಆಶ್ರಯವನ್ನು ಪ್ರಾರಂಭಿಸಿದ್ದಳು.
ಮೊದ ಮೊದಲು ಬರೇ ಕೌಂಸಿಲಿಂಗ್‍ನ್ನು ಆಶ್ರಯದಲ್ಲಿ ದ್ರೌಪದಿ ಕೊಡುತ್ತಿದ್ದಳು. ಆದರೆ ಸ್ವಲ್ಪ ಸಮಯದಲ್ಲೇ ಚಿಕ್ಕ ಗಿಡ ಮರವಾಗಿ ಬೆಳೆಯುವಂತೆ ಅದು ದೊಡ್ಡ ಸಂಸ್ಥೆಯಾಗಿ ಬೆಳೆದಿತ್ತು. ಬಾಲ್ಯ ವಿವಾಹ ಅಥವ ಬಾಲ್ಯ ಕಾರ್ಮಿಕ ಸಮಸ್ಯೆಯಲ್ಲಿ ಮುಳುಗಿದ್ದ ಮಕ್ಕಳನ್ನು ಹುಡುಕಿ ಅವರಿಗೆ ಇರಲು ಬೇಕಾದ ವಸತಿ ವ್ಯವಸ್ತೆಯನ್ನು ಸಹ ಪ್ರಾರಂಭಿಸಿದ್ದಳು. ಜನರು ಕೊಟ್ಟ ದೇಣಿಗೆ, ದ್ರೌಪದಿಯ ದತ್ತು ಪೋಷಕರ ಉಳಿತಾಯದ ಹಣವನ್ನು ಉಪಯೋಗಿಸಿ ಒಂದು ಎರಡು ಎಕರೆಯಷ್ಟು ದೊಡ್ಡ ಜಮೀನನ್ನೆ ದ್ರೌಪದಿ ಆಶ್ರಯಕ್ಕಾಗಿ ಪಡೆದಿದ್ದಳು.
ಒಂದು ಭಾಗದಲ್ಲಿ ವಸತಿ ವ್ಯವಸ್ಥೆ. ಅದರ ಪಕ್ಕದಲ್ಲಿ ಒಂದು ದೊಡ್ಡ ಸಭಾಂಗಣವನ್ನು ನಿರ್ಮಾಣಿಸಿ ಅದರಲ್ಲಿ ಹತ್ತು ಹಲವಾರು ತರದ ವಿದ್ಯೆಯನ್ನು ಹೇಳಿ ಕೊಡುವ ವ್ಯವಸ್ಥೆಯನ್ನು ಮಾಡಲಾಗಿತ್ತು. ಆಶ್ರಯವನ್ನು ಸೇರಿದ ಮಕ್ಕಳು ಬೆಳಿಗ್ಗೆಯ ಹೊತ್ತು ಶಾಲೆಗೆ ಹೋಗುತ್ತಿದ್ದರೆ ಸಂಜೆಯ ಒಂದೆರಡು ಗಂಟೆಯ ಸಮಯ ನಾನಾ ರೀತಿಯ ಕಸೂತಿ ಕೆಲಸದಲ್ಲಿ ತರಬೇತಿ ಪಡೆಯುತ್ತಿದ್ದರು. ಹೊಲಿಗೆ, ಪೊಟರಿ, ಗ್ರೀಟಿಂಗ್ ಕಾರ್ಡ್, ಆಟಿಕೆ ತಯಾರಿಕೆ ಎಂದು ಅವರವರ ಇಷ್ಟಕ್ಕೆ ಸರಿಯಾಗಿ ವಿದ್ಯೆಯನ್ನು ಕಲಿಸಲಾಗುತ್ತಿತ್ತು. ಅವರು ಕಲಿತು ತಯಾರಿಸಿದ ವಸ್ತುಗಳನ್ನು ಮಾರಲು ಪಕ್ಕದಲ್ಲೇ ಒಂದು ಮಾರಾಟದ ಅಂಗಡಿಯನ್ನು ಕೂಡ ತೆರೆಯಲಾಗಿತ್ತು. ಆಶ್ರಯ ಸೇರಿದ ಮಕ್ಕಳು ಶಾಲಾ ವಿದ್ಯೆಯ ಜೊತೆ ಇತರ ವಿದ್ಯೆಯನ್ನೂ ಕಲಿತು ಬಿಡುತ್ತಿದ್ದರು.
ಚಿಕ್ಕ ಬೀಜ ಮೊಳೆಕೆ ಒಡೆದು ಸಸಿಯಾಗಿ, ಕೊನೆಗೆ ಹೆಮ್ಮರವಾಗಿ ದಾರಿಯಲ್ಲಿ ಹೋಗುವ ಸಾವಿರಾರು ಜನರಿಗೆ ನೆರಳು ನೀಡುವುದಿಲ್ಲವೆ? ಹಕ್ಕಿಗಳಿಗೆ ಅದರ ಹಣ್ಣು ಆಹಾರವಾಗುವುದಿಲ್ಲವೆ? ಬೇಸಿಗೆಯಲ್ಲಿ ತಂಗಾಳಿ ನೀಡಿ ಜನರಿಗೆ ಅನಂದವನ್ನು ನೀಡುವುದಿಲ್ಲವೆ? ಹಾಗೆಯೆ ಆಶ್ರಯ ಕೂಡ ಹೆಮ್ಮರವಾಗಿ ಬೆಳೆದಿತ್ತು. ಬರ ಬರುತ್ತ ಅಲ್ಲಿ ಕಲಿತ ಮಕ್ಕಳಿಂದಲೆ ಅದು ಇನ್ನೂ ಮುಂದೆ ಮುಂದೆ ಬೆಳೆದಿತ್ತು. ರಾಜ್ಯದ ಹಲವಾರು ನಗರಗಳಲ್ಲಿ ತನ್ನ ಶಾಖೆಗಳನ್ನು ತೆರೆದಿತ್ತು ಕೂಡ. ಮೂವತ್ತು ವರ್ಷಗಳಲ್ಲಿ ಆಶ್ರಯದಿಂದ ಸಹಾಯ ಪಡೆದ ಮಕ್ಕಳ ಸಂಖ್ಯೆ ಲೆಕ್ಕಕ್ಕೆ ಸಿಗದಷ್ಟಾಗಿತ್ತು. ದ್ರೌಪದಿಯ ಈ ಲಾಭಾಪೆಕ್ಷೆರಹಿತ ಕೆಲಸ ಮೊದಲಿಗೆ ರಾಜ್ಯದಲ್ಲಿ ಆಮೇಲೆ ಇಡೀ ದೇಶದಲ್ಲಿ ಗುರುತಿಸಲ್ಪಟ್ಟಿತು. ದ್ರೌಪದಿಯ ಬಗೆಗೆ ಹಲವಾರು ದಿನಪತ್ರಿಕೆಗಳು ಅಂಕಣಗಳನ್ನು ಬರೆದವು. ಹತ್ತು ಹಲವಾರು ಪ್ರಶಸ್ತಿಗಳು ಆಶ್ರಯದ ಪಾಲಾಯಿತು.
*****
ದ್ರೌಪದಿಯ ಭಗೀರಥ ಪ್ರಯತ್ನಕ್ಕೆ ಸಾಕ್ಷಿ ಎಂಬತ್ತೆ ಅವಳ ಕೆಲಸಕ್ಕೆ ದೇಶದ ಉನ್ನತ ಪ್ರಶಸ್ತಿಯಾದ ಪಧ್ಮಶ್ರಿ ಪ್ರಶಸ್ತಿ ಕೂಡ ಇಂದು ದೊರೆತಿತ್ತು!
” … …. … ನಾನು ನನ್ನ ಬಾಲ್ಯವನ್ನು ಸುಂದರವಾಗಿ ಕಳೆಯಲಿಲ್ಲ. ಬಾಲ್ಯವನ್ನು ಸಂಪೂರ್ಣವಾಗಿ ಕಳೆದುಕೊಂಡೆ. ಆದರೆ ನನ್ನಂತೆ ಬೇರೆಯವರು ಬಾಲ್ಯವನ್ನು ಕಳೆದುಕೊಳ್ಳಬಾರದು. ಬಂಗಾರದ ಸಮಯವಾದ ಬಾಲ್ಯವನ್ನು ಪ್ರತಿಯೊಂದು ಮಗುವೂ ಅನುಭವುಸಬೇಕು. ಬಾಲ್ಯವನ್ನೇ ನೋಡದ ದ್ರೌಪದಿಯಂತೆ ಯಾವ ಮಗುವೂ ಇರಬಾರದು. ಅದುವೆ ಈ ನಮ್ಮ ಆಶ್ರಯದ ಗುರಿ. ನನಗೆ ಇಂದು ದೊರೆತ ಪ್ರಶಸ್ತಿ ನನಗೊಬ್ಬಳಿಗೆ ಸೇರಿದ್ದಲ್ಲ. ಇದರ ಹಿಂದೆ ದುಡಿದ ಸಾವಿರಾರು ಜನರ ಶ್ರಮಕ್ಕೆ ದೊರೆತ ಪ್ರತಿಫಲ ಇದು … … …” ದ್ರೌಪದಿ ನಿಧಾನವಾಗಿ ಮತ್ತೆ ವರದಿಗಾರರ ಪ್ರಶ್ನೆಗಳಿಗೆ ಉತ್ತರಿಸತೊಡಗಿದಳು.
ಆಶ್ರಯದ ಎದುರುಗಡೆ ಇದ್ದ ಮಾವಿನ ಮರದಲ್ಲಿ ಇದ್ದ ಮಾವಿನ ಹಣ್ಣನ್ನು ಕಾಗೆಯೊಂದು ಕಚ್ಚಿಕೊಂಡು ದೂರಕ್ಕೆ ಹಾರಿಹೋಗಿತ್ತು. ದೂರದಲ್ಲಿ ಹೋಗಿ ಬಿದ್ದ ಆ ಮಾವಿನ ಗೊರಟೆ ಮರವಾಗಿ ಬೆಳೆದು ಅದೆಷ್ಟು ಹಕ್ಕಿಗಳಿಗೆ ಆಶ್ರಯ ನೀಡುವುದೊ?
(featured image from Internet)
- ಸ್ಪೂರ್ತಿ! - July 12, 2021
- ಛಲ! - May 9, 2021
- ಮೊಗ್ಗಾಗುವ ಆಸೆ! - April 11, 2021