ತನ್ನ ಕೋಳಿಯು ಕೂಗೆ ಬೆಳಕು ಕಾಣೆಂಬುವರು
ಮುನ್ನ ಬೆಳಗಾಗುವುದ ಕಂಡಿಲ್ಲವೇನು ?
ತನ್ನದೇ ಸರಿಯೆನುತ ಪರರ ನಿಂದಿಪ ಮರುಳೆ
ನಿನ್ನತನವೇನಾಯ್ತೊ ಜಾಣಮೂರ್ಖ //
‘Empty mind make more sound’ ಅನ್ನೋ ಮಾತನ್ನು ಕೇಳಿರಬೇಕಲ್ಲವೇ ನೀವು !? ಖಾಲಿ ತಲೆ ತುಂಬಾ ಶಬ್ದ ಮಾಡುತ್ತದೆ. ಅಜ್ಜಿಯೊಬ್ಬಳು ತನ್ನ ಕೋಳಿಯ ಕೂಗಿನಿಂದಲೇ ಬೆಳಗಾಗುತ್ತದೆ ಅಂತ ಭಾವಿಸಿ ಬೀಗಿದ ಹಾಗೆ. ( ಕಥೆಯಲ್ಲಿ ಹಾಗಿದೆ ಅಷ್ಟೆ. ಪಾಪ ಕೋಳಿ ಅಮಾಯಕ ಪಕ್ಷಿ .) ಬಹು ಅಪಾಯಕಾರಿ ಪ್ರಾಣಿ ಈ ಮನುಷ್ಯ ಮಾತ್ರ. ನಾನೇ ಸರಿ , ನನ್ನಿಂದಲೇ ಪ್ರಪಂಚ ನಡೀತಾ ಇದೆ ಅನ್ನೋ ಭ್ರಮೆಯಲ್ಲಿ ಮನುಷ್ಯ ತನ್ನತನವನ್ನೇ ಮರೆತು ಮೆರೆಯುತ್ತಾನೆ. ಇತರೆ ಸಾತ್ವಿಕರನ್ನು ನಿಂದಿಸಿ ಜರಿಯುತ್ತಾ ತನ್ನ ನ್ಯೂನತೆಗಳನ್ನು , ಕೊರತೆಗಳನ್ನು ತುಂಬಿಕೊಳ್ಳುತ್ತೇನೆ ಅಂತ ಭಾವಿಸುತ್ತಾನೆ ಅಷ್ಟೆ. ಕರಿಗೆ ಕುರಿ ಸಮವೇ !? ಕ್ಷಮಿಸಿ ಗೆಳೆಯರೇ ಎಲ್ಲರೂ ಹಾಗಲ್ಲ ! ಅನ್ಯಥಾ ಭಾವಿಸಬೇಡಿ. ಕೆಲವರು ಹೀಗಿರುತ್ತಾರೆ ಅಷ್ಟೆ. ಅವರಿಗೆ ಅವರತನವೇ ಮರೆತು ಹೋಗಿಬಿಟ್ಟಿರುತ್ತದೆ ! ಜಗತ್ತಿನಲ್ಲಿ ತನಗಿಲ್ಲದ ಗುಣ ಬೇರೆಯವರಲ್ಲಿರುವುದು ಕಂಡಾಗ ನಿಂದಿಸುತ್ತಾರೆ. ಅವರ ಬಾಯಿಗೆ ಅಳುಕಿ ಯಾರೂ ಅವರ ತಂಟೆಗೆ ಹೋಗುವುದಿಲ್ಲ ಅಷ್ಟೆ. ಅದನ್ನೇ ಅವರು ತನ್ನ ಹಿರಿಮೆ ಅಂತ ಭಾವಿಸಿ ಬೀಗೋದಂತೂ ಹಾಸ್ಯಾಸ್ಪದ ! ಕೆಲವರ ದುರ್ಬಲತೆ ಮತ್ತೆ ಕೆಲವರ ಅಸ್ತ್ರವಾಗುವುದು , ಆ ಅಸ್ತ್ರದಿಂದ ಶೋಷಣೆ, ನಿಂದನೆ ಇತ್ಯಾದಿಗಳಿಂದ ತಮ್ಮನ್ನು ಉನ್ನತೀಕರಿಸಿಕೊಳ್ಳುತ್ತಿರುವುದು ಈ ಜಗತ್ತಿನ ದೊಡ್ಡ ದುರಂತ ! ಕೆಲವರು ಮೌನವಾಗಿ ಸಹಿಸಿಕೊಳ್ಳುತ್ತಾರೆ. ಆದರೆ ಆ ಸಾತ್ವಿಕರ ನೋವಿನ ಜ್ವಾಲೆ ನಿಂದಕರನ್ನು ದಹಿಸದೇ ಬಿಡದು. ಇಂತಹಾ ನಿಂದಕರೂ ಸಹ ಇರಬೇಕು. ಹಂದಿಯಿದ್ದರೆ ಕೇರಿ ಹೇಗೆ ಶುದ್ಧಿಯೊ ಹಾಗೆ ಅಂತ ದಾಸವರೇಣ್ಯರಾದ ಕನಕದಾಸರೇ ಹೇಳಿಲ್ಲವೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021