ಬಲುಭಾರವೆಳನೀರು ತೊನೆವುದಯ್ಯಯ್ಯೋ
ಬಲುಹಗುರ ಹಣ್ಗಾಯಿ ಸೃಷ್ಟಿವೈಚಿತ್ರ್ಯ
ಸುಲಿಗಿಟುಕು ಬಲುಗಟ್ಟಿ ಅಂತೆ ಬಲು ಸವಿಕಾಣು
ಕಲೆಗಾರಗೊಂದಿಸೇಳ್ ಜಾಣಮೂರ್ಖ//
ನಮ್ಮ ಕಣ್ಣೆದುರಿಗೇನೇ ಜೀವನದ ಸತ್ಯಗಳು ಗೋಚರವಾಗುತ್ತಿರುತ್ತವೆ. ಅರಿಯಬೇಕಷ್ಟೆ. ಎಳನೀರು ತುಂಬಾ ಭಾರ. ನೀರು ತುಂಬಿದ್ದರೂ ಚಿಳಿಚಿಳಿಯ ಸದ್ದಿಲ್ಲ ! ಅದರೆ ಹಣ್ಣುಗಾಯಿ ತುಂಬಾ ಹಗುರ ! ಅಷ್ಟೇ ಸಿಹಿ ! ಬಳಕೆಗೆ ಯೋಗ್ಯ ! ಇನ್ನೊಂದು ಹೆಜ್ಜೆ ಮುಂದೆ ಸಾಗಿ ನೋಡಿದರೆ ಕೊಬ್ಬರಿಯ ಗಿಟುಕು ! ಚಿಪ್ಪಿನಿಂದ ಬಿಡುಗಡೆ ಹೊಂದಿರುತ್ತೆ ! ನೀರಿರದ ಸ್ಥಿತಿ ! ಅತ್ಯಂತ ಸಿಹಿ ! ಬಾಳ ಸಾರವೆಲ್ಲಾ ಘನೀಭವಿಸಿ ಮುಪ್ಪುರಿಗೊಂಡು ನಿಂತ ಸ್ಥಿತಿ ! ಅಬ್ಬಾ ಸಾರ್ಥಕ ಜೀವನ. ನಮ್ಮ ಬದುಕೂ ಸಹ ಹೀಗೇನೇ ಗೆಳೆಯರೇ ! ಬಾಲ್ಯ , ಯೌವನ, ಮುಪ್ಪು ! ಅನುಭವಗಳು ಗಟ್ಟಿಯಾದಾಗ ಬದುಕಿನ ಜಾಢ್ಯಗಳೆಂಬ ಚಿಪ್ಪಿನಿಂದ ಬಿಡುಗಡೆ ಸಿಕ್ಕು ಗಿಟುಕಾಗಬೇಕಯ್ಯ ಗೆಳೆಯ ! ಆಗ ಜನ್ಮ ಸಾರ್ಥಕ ! ಬನ್ನಿ ಗೆಳೆಯರೇ ಇಂತಹಾ ಜೀವನ ತತ್ತ್ವವನ್ನು ಪ್ರಕೃತಿಯಲ್ಲಿ ಅಡಗಿಸಿಟ್ಟ ಆ ಕಲೆಗಾರನಿಗೆ ಅನಂತ ನಮಸ್ಕಾರ ಗಳನ್ನು ಅರ್ಪಿಸಿ ಧನ್ಯರಾಗೋಣ !
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021