ಜಗದಗಲ ಮುಗಿಲಗಲ ಮನದಗಲಕುಂ ಮೀರಿ
ಸೊಗಯಿಸುವ ಆಗಸದ ಆಚೆಗಿಹುದೇನು ?!
ಮಿಗೆ ಮೀರೆ ಕಣ್ಣೀರು ಅಳವಿಗೆಟುಕನೊ ದೈವ
ಸಿಗದಂತೆ ಸಿಗುವುದದೊ ಜಾಣಮೂರ್ಖ //
ನಮ್ಮ ನಿಮ್ಮಗಳ ಮನಸ್ಸಿಗೂ ಈ ಯೋಚನೆ ಒಂದಲ್ಲಾ ಒಂದು ಸಾರಿಯಾದರೂ ಬಂದೇ ಇರುತ್ತದೆ. ಆದರೆ ಉತ್ತರ ಸಿಗದೆ ಸುಮ್ಮನಾಗಿರುತ್ತೇವೆ ಅಷ್ಟೆ ! ಆ ಪ್ರಶ್ನೆ ಏನೆಂದರೆ ಆಕಾಶದಾಚೆಗೆ ಏನಿರಬಹುದು ಅಂತ ! ಚಿಕ್ಕ ವಯಸ್ಸಿನಲ್ಲಿ ಒಂದು ಕಲ್ಪನೆ ಇತ್ತು. ನಿಮಗೂ ಇದ್ದಿರಬಹುದು. ಆಕಾಶದ ಮೇಲೆ ಸ್ವರ್ಗ , ನರಕ ಎಲ್ಲವೂ ಇವೆ. ಸಕಲ ದೇವತೆಗಳೂ ಇರುತ್ತಾರೆ…. ಹೀಗೆ ಏನೇನೋ…. ಆದರೆ ಹೀಗೇ ಮನಸ್ಸು ಹಣ್ಣಾದ ಹಾಗೆ ಚಿಂತನೆಗಳೂ ಹಣ್ಣಾದವು ! ಆಕಾಶದ ಕಲ್ಪನೆಯಲ್ಲಿ ತನ್ಮಯರಾದಾಗ ಕಣ್ಣೀರು ಧಾರಾಕಾರವಾಗಿ ಬಂತು ! ನಮ್ಮ ಊಹೆಗೂ ಮೀರಿರುವ ಅನಂತ ವ್ಯಾಪ್ತಿಯನ್ನು ಹೊಂದಿರುವ ಪಂಚಭೂತಗಳಲ್ಲಿ ಒಂದಾದ ಆಕಾಶವನ್ನು ಗಮಿಸಲಾದೀತೆ !? ಅದು ಅಗಮ್ಯ ! ನಮ್ಮ ಸಾಮರ್ಥಕ್ಕೆ ನಿಲುಕದದು ! ಅದೇ ದೈವ. ಅದ್ಹೇಗೆ ಅಂದ್ರೆ ನೋಡಿ ನಮ್ಮ ಕೈಗೆ ಸಿಗುತ್ತೆ ! ಅನುಭವಕ್ಕೆ ಸಿಗುತ್ತೆ ! ಆದರೆ ಹಿಡಿಯೋಕಾಗಲ್ಲ. ಪಂಚಭೂತಗಳೆಲ್ಲವೂ ಅಷ್ಟೇ ಅಲ್ಲವೇ !? ಎಲ್ಲವೂ ಅನುಭವಕ್ಕೆ ಎಟುಕುತ್ತವೆ ಆದರೆ ಕೈಗೆ ಸಿಗವುದಿಲ್ಲ ! ಅಬ್ಬಾ ಇಂತಹಾ ದೈವ ವಿಸ್ಮಯಕ್ಕೊಮ್ಮೆ ಮನದಣಿಯೆ ಮಣಿದು ಜನ್ಮ ಸಾರ್ಥಕ ಮಾಡಿಕೊಳ್ಳೋಣವೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021