ಇಂದಿಗಿಲ್ಲದ ಧನಮದಿರ್ದೊಡೇಂ ಪೋದೊಡೇಂ
ಮಂದಿ ಮಕ್ಕಳ ನೊಂದ ಒಡಲೊಳಗೆ ಬೆಂಕಿ
ತಿಂದು ತೇಗುವ ಮುಂದೆ ಸಂಬಂಧವಿಲ್ಲದವ
ಚಂದವಿರಲಿಂದು ಬಾಳ್ ಜಾಣಮೂರ್ಖ //
ಇದೊಂದು ದೊಡ್ಡ ವಿಪರ್ಯಾಸ ! ನಾವೆಲ್ಲರೂ ವಿಮರ್ಶಿಸಿಕೊಳ್ಳಲೇಬೇಕಾದ ಒಂದು ಸಂಗತಿ. ನಮ್ಮ ಬಳಿ ಬೇಕಾದಷ್ಟು ಹಣವೇನೋ ಇರುತ್ತದೆ. ಆದರೆ ಅದನ್ನು ನಾಳೆಗೆಂದು ಯಾರಿಗೂ ತಿಳಿಯದಂತೆ ಮುಚ್ಚಿಡುತ್ತೇವೆ. ಇಂದು ಕಷ್ಟ ಪಡುತ್ತೇವೆ. ನಮ್ಮ ಜನ , ನಮ್ಮ ಮಕ್ಕಳು ಕಷ್ಟ ಪಡುತ್ತಿದ್ದರೂ ಕೂಡ ಕೊಡದೇ ಸಂರಕ್ಷಿಸುತ್ತೇವೆ. ಆದರೆ ಮುಂದೆ ಅದು ನಮಗೆ ಸಂಬಂಧವಿಲ್ಲದವನ ಪಾಲಾಗಿಬಿಡುತ್ತದೆ. ಕೊಟ್ಟದ್ದು ತನಗೆ ಬಚ್ಚಿಟ್ಟದ್ದು ಪರರಿಂಗೆ ಅಲ್ಲವೇ !? ಮುಂದಿಗೆಂದು ಇಟ್ಟದ್ದು ಇಂದಿನ ಕಷ್ಟಕ್ಕಾದರೆ ಪ್ರೀತಿ ವಿಶ್ವಾಸವೂ ಉಳಿಯುತ್ತದೆ ! ನಮ್ಮವರ ಬದುಕಿಗೊಂದು ದಾರಿಯೂ ಸಿಕ್ಕಂತಾಗುತ್ತದೆ ಅಲ್ಲವೇ !? ಇಲ್ಲದಿದ್ದರೆ ಜೀನನೊಡವೆಯನ್ನು ಜಾಣ ತಿಂದನೆಂಬಂತೆ ಮೂರನೆಯವರ ಪಾಲಾದರೆ ಪ್ರಯೋಜನವೇನು !? ಅಲ್ಲವೇ ? ಇಂದು ನಾವಿದನ್ನು ಸಾಕ್ಷೀಭೂತವಾಗಿ ನೋಡುತ್ತಲೇ ಇದ್ದೇವೆ. ಆದರೆ ಅನುಭವಕ್ಕೆ ಬಂದ ಮೇಲೇನೇ ಮಾನವನಿಗೆ ಅರಿವಾಗೋದು. ಆದರೇನು ಜ್ಞಾನೋದಯವಾಗುವ ವೇಳೆಗೆ ಎಲ್ಲವೂ ಪರರ ಪಾಲಾಗಿರುತ್ತದೆ ! ಅದಕ್ಕೇನೇ ಕನಕದಾಸರು ತಮ್ಮ ಒಂದು ಕೀರ್ತನೆಯಲ್ಲಿ -” ತಾನೂ ಉಣ್ಣದ ಪರರಿಗಿಕ್ಕದ ಧನವಿದ್ಯಾತಕೆ” ಎಂದು ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ. ಆದ್ದರಿಂದ ವರ್ತಮಾನದಲ್ಲಿ ಬದುಕಬೇಕು. ಇದು ಭಗವಂತ ಕೊಟ್ಟದ್ದು ! ಕರ್ಮವೀರರಾಗಿ ಕಾಯಕತತ್ತ್ವದಲ್ಲಿ ತಿಳಿದು ಬದುಕಿದರೆ ಇಂದಿಗೂ , ಮುಂದಿಗೂ ಸಂತಸವು ಮನೆ ಮಾಡುತ್ತದೆ. ಬದುಕು ಸಾರ್ಥಕವಾಗುತ್ತದೆ. ಇರುವುದನ್ನು ಅರುಹಿದ್ದೇನೆ. ಯಾರಿಗಾದರೂ ನೋವಾಗಿದ್ದರೆ ಕ್ಷಮಿಸಿಬಿಡಿ. ಸತ್ಯವೆಂದಿಗೂ ಕಹಿ ! ಅಲ್ಲವೇ ಗೆಳೆಯರೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021