ಹಗುರವಾಗದೆ ಹಗುರವಾಗಿ ಬದುಕೀ ಜಗದಿ !
ಸಿಗದಿರೆಲ್ಲರ ಬಾಯ್ಗೆ ಸಿಕ್ಕು ಬದುಕಯ್ಯ !
ಹಗುರನೈ ಗುರುರಾಯ ಸಿಗುವನೆಲ್ಲರಿಗಂತೆ
ಹಗುರಾಗಿ ಬದುಕೇಳೊ ಜಾಣಮೂರ್ಖ //
ಇವತ್ತು ನಾವು ಹಗುರವಾಗೋದು ಹೇಗೆಂಬುದರ ಬಗ್ಗೆ ಸ್ವಲ್ಪ ಚಿಂತಿಸೋಣ. ಮನೆಯಲ್ಲಿ ಹಿರಿಯರು ಹೇಳೋದನ್ನು ಕೇಳಿದ್ದೀವಿ. ಹಗುರವಾಗಬೇಡ್ರಯ್ಯ , ಘನತರವಾಗಿ ಬದುಕಿರಿ ಅಂತ ! ಗುರುಗಳು ಸಂತರು ಹೇಳೋದನ್ನೂ ಗಮನಿಸಿದ್ದೀವಿ ಮನಸ್ಸಿನಲ್ಲಿರೋ ಭಾರವನ್ನೆಲ್ಲಾ ಇಳಿಸಿ ಹಗುರವಾಗ್ರಯ್ಯಾ ಅಂತ ! ಇತ್ತೀಚೆಗೆ ಇನ್ನೂ ಜಾಗರೂಕರಾಗಿ ಜನ ದೈಹಿಕವಾಗೂ ಹಗುರವಾದರೆ ಆರೋಗ್ಯಯುತ ಜೀವನ ನಡೆಸಬಹುದೆಂದು ಆ ನಿಟ್ಟಿನಲ್ಲಿಯೇ ಪ್ರಯತ್ನ ಮಾಡೋದನ್ನು ನೋಡಿದ್ದೇವೆ. ಈಗ ಯೋಚಿಸೋಣ ಹೇಗೆ ಹಗುರವಾಗಬೇಕೆಂದು ! ಸಮಾಜದ ಜನರ ಬಾಯಿಗೆ ಸಿಗದೇ ,ಅವರ ದೃಷ್ಟಿಯಲ್ಲಿ ಹಗುರವಾಗದೇ ತೂಕ ತಪ್ಪದಂತೆ ಬದುಕಬೇಕು. ಮಾನಸಿಕವಾಗಿ ಹಗುರವಾದರೆ ದೇಹವು ಹಾರುವ ಹಕ್ಕಿಯಂತಾಗುತ್ತದೆ. ಇದರಲ್ಲಿ ಸಂದೇಹವಿಲ್ಲ. ಮಾತು ಮತ್ತು ಚಿಂತನೆಗಳು ಅಧ್ಯಾತ್ಮಿಕವಾಗಿ ಶ್ರೀಮಂತವಾಗಿ ಗುರುತೋರಿದ ದಾರಿಯಲ್ಲಿ ನಡೆದು ಗುರುರಾಯನಂತೆಯೇ ಹಗುರಾಗಬೇಕು ! ಎಲ್ಲರ ಕೈಗೆಟುಕಿ ಎಟುಕದಂತಿರಬೇಕು ! ಕಮಲಪತ್ರದಂತೆ ! ತುಷಾರ ಮಣಿಯಂತೆ , ಇಬ್ಬನಿಯ ಬಿಂದುವಿನಂತೆ ಅಂಟಿಯೂ ಅಂಟದಂತಿರಬೇಕು ! ಇದೆಲ್ಲವೂ ಹಗುರವಾದಾಗ ತಂತಾನೇ ಸಾಧ್ಯವಾಗುತ್ತವೆ. ಅಲ್ಲವೇ ಗೆಳೆಯರೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021