ಸತ್ಯದಾಲಯದೊಳಗೆ ಸತ್ಯದನ್ವೇಷಣೆಯೆ?
ಸತ್ಯಾತ್ಮ ತನ್ನತಾನರಸಿದಂತಲ್ತೆ ?
ಸತ್ಯವೇ ಸ್ಥಿರಮೇರು ಮಿಥ್ಯವೇ ಚಾಂಚಲ್ಯ
ನಿತ್ಯವೂ ಅಲೆದಾಟ ಜಾಣಮೂರ್ಖ//
ಓ, ಗೆಳೆಯರೇ ! ಒಮ್ಮೆ ಇಂದಿನ ಸ್ಥಿತಿಯನ್ನು ಹಾಗೇ ಸುಮ್ಮನೇ ಗಮನಿಸಿರಿ ! ಕೈಲಿ ಬೆಣ್ಣೆ ಹಿಡಿದು ತುಪ್ಪಕ್ಕಾಗಿ ಉರೆಲ್ಲಾ ಅಲೆಯುತ್ತಾ ಇದ್ದೀವಿ ನಾವು. ಸತ್ಯಸ್ವರೂಪನ ದಿವ್ಯವಾದ ಆಲಯವಾದ ಈ ಭವ್ಯ ಪ್ರಪಂಚದಲ್ಲಿ ಸತ್ಯವನ್ನು ಹುಡುಕುತ್ತಿದ್ದೇವೆ. ಸುಳುಹೇನಾದರೂ ಸಿಗಬಹುದೇ ಎಂದು ! ಗಾಳಿ ಅನುಭವಕ್ಕೆ ಸಿಗುತ್ತೆ ! ಅದಿಲ್ಲದ ಜಾಗವೇ ಇಲ್ಲ ! ಆದರೆ ನೋಡೋಕಾಗಲ್ಲ , ಹಿಡಿಯೋಕೂ ಆಗಲ್ಲ ! ಅಲ್ವೇ ! ಹಾಗೇನೇ ಪಂಚಭೂತಗಳೆಲ್ಲವೂ ! ಅನುಭವಿಸಬೇಕಷ್ಟೆ ! ಹುಡುಕುವ ವ್ಯರ್ಥ ಪ್ರಯತ್ನವೇಕೆ !? ಓ ಗೆಳೆಯ ಅದು ಹೇಗೆಂದರೆ ನನ್ನನ್ನು ನಾನೇ ಹುಡುಕಿದಂತೆ ! ಸತ್ಯವು ಮೇರುವಿನಂತೆ ಸ್ಥಿರವಾಗಿದೆ ಕಣಯ್ಯ ಗೆಳೆಯ ! ಮನಸ್ಸು ಈ ಸತ್ಯದಲ್ಲೇ ಮಿಥ್ಯವೆಂಬುದೊಂದನ್ನು ಸೃಷ್ಠಿಸಿ ! ಎಲ್ಲದರಲ್ಲೂ ಇರುವ ಸತ್ಯವನ್ನು ಕಾಣದೆ ಮಿಥ್ಯವನ್ನೇ ಗುರುತಿಸಿ ! ಸ್ವಯಂ ತಾನೇ ಮಿಥ್ಯನಂತಾಗಿ , ತೊಳಲಿ , ಬಳಲಿ , ಬೆಂಡಾಗಿ ಮತ್ತೆ ಸತ್ಯಕ್ಕಾಗಿ ಅರಸುವ ಪರಿ ವಿಚಿತ್ರವೆನಿಸೋದಿಲ್ಲವೇನಯ್ಯ ! ಕ್ಷಮಿಸಿ ಗೆಳೆಯರೇ ಅವರಲ್ಲಿ ನಾನೂ ಸೇರಿಕೊಂಡಿದ್ದೀನಿ ! ನಿತ್ಯವೂ ಬಿಡದ ಹುಡುಕಾಟ , ಅಲೆದಾಟ , ಹೋರಾಟ , ಹೊಡೆದಾಟ ! ಅಯ್ಯೋ ನನ್ನೊಳಗಿನ ನಾನು ಯಾರೆಂಬ ಸತ್ಯ ಮುಚ್ಚಿ ಹೋಗಿದೆಯಲ್ಲಾ ! ಇದನ್ನರಿತು ತೊಳಗಿ ಬೆಳಗಬೇಕಯ್ಯಾ ಗೆಳೆಯಾ. ಬದುಕು ಆಗ ನಿಜವಾಗಿ ಬೆಳಕಾಗುತ್ತದೆ ! ದೇದೀಪ್ಯಮಾನವಾಗಿ ಕಂಗೊಳಿಸುತ್ತದೆ. ಶಾಂತಿಯ ನೆಲೆಯಾಗುತ್ತದೆ. ಅಲ್ಲವೇ ಗೆಳೆಯರೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021