ಸಿರಿ ಸೇರ್ದ ಸಿರಿವಂತಗಿಹುದೆ ನಿಜ ಸಂತಸವು ?
ಸಿರಿ ಸರಿದ ಬರಿಗೈಗಗಿದೆಯೇನು ಹಿಗ್ಗು !?
ಕರೆ ಎದೆಯೊಳೆಡೆಬಿಡದೆ ಪ್ರೇಮಾಮೃತವ ನಿಜದಿ
ಸಿರಿಯೊಡೆಯ ನೀನಾಗ ಜಾಣಮೂರ್ಖ//
ಗೆಳೆಯರೇ , ಹಾಗೇ ನಮ್ಮ ಸುತ್ತಲಿನ ಪ್ರಪಂಚವನ್ನೊಮ್ಮೆ ನೋಡಿ ! ಯಾರು ಸಿರಿವಂತರಿದ್ದಾರೋ ಅವರಾರೂ ನಿಜವಾದ ಸಂತೋಷವನ್ನು ಅನುಭವಿಸುತ್ತಿಲ್ಲ ! ಸಿರಿ ಎಂದರೆ ಬರೀ ಹಣವಷ್ಟೇ ಅಲ್ಲ ! ಹೋಗಲಿ ಬಿಡಿ. ಬಡವನೆಂಬುವನಾದರೂ ಸಂತಸದಿಂದಿರುವನೇ ಅಂತ ನೋಡಿದರೆ, ಅವನೂ ಸಂತೋಷವಾಗಿಲ್ಲ ! ಇಲ್ಲ ಎಂಬ ಅಪೂರ್ಣತೆಯ ಕೊರಗು ಅವನಿಗೆ. ಆದರೆ ನಿಜವಾಗಿ ಸಂತೋಷದಿಂದ ಇರುವವರು ಯಾರೆಂದು ನೋಡಿದರೆ ಯಾರು ನಿರ್ಮಲವಾದ ಪ್ರೇಮವನ್ನು ತನ್ನೆದೆಯಲ್ಲಿ ಸ್ಫರಿಸುತ್ತಾ ಭಗವನ್ನಿರ್ಮಿತವಾದ ಈ ಜಗತ್ತನ್ನು ಅತ್ಯಂತ ಪ್ರೇಮದಿಂದ ನೋಡುವನೋ ಅವನೇ ನಿಜವಾದ ಆನಂದವನ್ನು ಅನುಭವಿಸುವವನಾಗಿದ್ದಾನೆ. ಲೌಕಿಕ ಉಪಾದಿಗಳಿಗೆ ಅಂಟಿಕೊಂಡವರು ಬದುಕಿನ ತುಂಬ ದ್ವೇಷ , ಮತ್ಸರ , ಈರ್ಷೆ , ಲೋಭ ಇತ್ಯಾದಿ ಉಪಾದಿಗಳಲ್ಲಿಯೇ ಸಿಲುಕಿ ಸಿಂಬಳದ ನೊಣದಂತೆ ಬದುಕ ಸಾಗಿಸುತ್ತಾರೆ ! ಸ್ವಲ್ಪ ಅರ್ಥ ಮಾಡಿಕೊಂಡು ಬದುಕಿದರೆ ಬದುಕು ಅರ್ಥಪೂರ್ಣವಾಗಿರುತ್ತದೆ. ಒಂದು ವಿಷಯ ಗೊತ್ತಿರಲಿ. ಬದುಕಿಗೆ ಇದೇ ಕೊನೆಯಲ್ಲ ! ಇದೊಂದು ನಿಲ್ದಾಣವಷ್ಟೆ ! ನಂತರವೂ ಪಯಣವಿದೆ ! ನಿರಂತರ ಪಯಣ ! ಪಯಣದ ಮೇಲೆ ಪಯಣ ! ಒಳ್ಳೆಯ ಬದುಕಿನಿಂದ ಒಳ್ಳೆಯ ಬುತ್ತಿಯನ್ನು ಕಟ್ಟಿಕೋಬೇಕಯ್ಯ ಗೆಳೆಯ ! ಅಲ್ಲವೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021