ಆ ದಾರಿಯಲ್ಲಿ ಓಡಾಡುವಾಗಲೆಲ್ಲಾ ನೋಡುತ್ತಿದ್ದೆವು. ತಲಗಟ್ಟು ಹಾಕುವುದು ಮತ್ತು ಗೋಡೆ ಕಟ್ಟುವುದು ಬಿಟ್ಟು ಉಳಿದೆಲ್ಲಾ ಕೆಲಸಗಳನ್ನು ಸುಮಾರಾಗಿ ಆ ಗಂಡ ಹೆಂಡತಿಯೇ ಮಾಡುತ್ತಿದ್ದರು. ಗಂಡ ಎಲೆಕ್ಟ್ರಿಷಿಯನ್ ಎನ್ನಿಸುತ್ತೆ. ಮನೆಯ ಕೆಲಸಗಳು ಇನ್ನೂ ಸಂಪೂರ್ಣವಾಗಿರಲಿಲ್ಲ ಆಗಲೇ ಆಕೆ ಎಲೆ ಇರದ ನಾಲ್ಕಿಂಚಿನ ಒಣಗಿದ ಕಡ್ಡಿಗಳನ್ನು ಕಾಂಪೌಂಡ್ ಮಾಡಬೇಕಾದ ಜಾಗದಲ್ಲಿ ನೆಟ್ಟಿದ್ದು ನೋಡಿದಾಗ ಆಶ್ಚರ್ಯವಾಗಿತ್ತು. ಆರೇ ತಿಂಗಳುಗಳಲ್ಲಿ ಮನೆಯ ಕೆಲಸವೂ ಮುಗಿದಿತ್ತು. ಜೊತೆಯಲ್ಲಿ ಒಣಗಿದ ಕಡ್ಡಿಗಳು ನಾಲ್ಕಿಂಚಿನಿಂದ ಎರಡು ಅಡಿ ಎತ್ತರವಾಗಿ ಗಿಳಿಹಸಿರು ಎಲೆಗಳಿಂದ ನಳನಳಿಸುತ್ತಿದ್ದವು. ಅವರ ಮನೆಯ ಗಾರ್ಡನ್ ಕೂಡ ತರತರದ ಗಿಡಗಳಿಂದ ಬಣ್ಣ ಬಣ್ಣವಾಗಿ ಕಾಣುತ್ತಿತ್ತು. ಓಡಾಡುವಾಗ ಎದುರು ಸಿಕ್ಕಿದರೆ ಪರಿಚಯದ ನಗೆ ಬೀರುತ್ತಿದ್ದರು.
ಒಂದು ದಿನ ಅದೇ ದಾರಿಯಲ್ಲಿ ಬರುವಾಗ ಬೇಲಿಯ ಒಳಗೆ ನಿಂತಿದ್ದ ಅವರು ಹಲೋ ಎಂದಾಗ, ಒಂದು ದಿನ ನಿಮ್ಮ ಮನೆಯ ಗಾರ್ಡನ್ ಒಳಗೆ ಬಂದು ಫೋಟೋ ತೆಗೆಯುತ್ತೇನೆ ಎಂದಾಗ ಈಗಲೇ ಬನ್ನಿ ಎಂದು ಗೇಟ್ ತೆಗೆದು ಒಳಗೆ ಕರೆದಿದ್ದರು. ಹೂವುಗಳ ಫೋಟೋ ತೆಗೆಯಲು ಸರಿಯಾದ ಲೆನ್ಸ ನನ್ನ ಬಳಿ ಇರಲಿಲ್ಲ. ಆದರೂ ಅವರಿಗೆ ನಿರಾಸೆ ಮಾಡಲು ಇಷ್ಟವಾಗದೇ ಒಂದೆರಡು ಫೋಟೋ ತೆಗೆದು ಹೊರಬಂದಿದ್ದೆ.
ಸ್ವಲ್ಪ ದಿನಗಳ ನಂತರ ಮನೆಯ ಹತ್ತಿರದಲ್ಲೇ ಇದ್ದ ಒಂದು ಕಾಲಿ ಸೈಟಿನಲ್ಲಿ ಅವರ ಗಾರ್ಡನಿಂಗ್ ಶುರುವಾಗಿತ್ತು. ಕೇವಲ ಒಂದು ವರ್ಷ, ಅವರ ಮನೆಯ ಗಾರ್ಡನ್ನಿಗಿಂತ ಹೆಚ್ಚು ವೈವಿಧ್ಯಮಯವಾಗಿ ಆ ಕಾಲಿ ಸೈಟು ಯಾವುದೊ ಬೊಟಾನಿಕ್ ಗಾರ್ಡೆನ್ನಿನಂತೆ ಕಾಣಲು ಶುರುವಾಗಿತ್ತು.
ಕೆಲವೊಮ್ಮೆ ಆ ಗಾರ್ಡನ್ನಿನಲ್ಲಿ ಟರ್ಕಿಷ್ ಮಹಿಳೆಯರಂತೆ ತಲೆಗೆ ಸ್ಕ್ಯಾರ್ಫ್ ಕಟ್ಟಿಕೊಂಡ ಜರ್ಮನ್ ಮಹಿಳೆಯೊಬ್ಬರು ಕೆಲಸ ಮಾಡುವುದು ನೋಡಿ, ಯಾರನ್ನೋ ಕೆಲಸಕ್ಕೆ ನೇಮಿಸಿರಬೇಕು ಎಂದುಕೊಂಡಿದ್ದೆವು. ಆಗಾಗ ಹಲೋ ಇಂದ ಶುರುವಾದ ಮಾತು ಕುಶಲೋಪಚಾರದವರೆಗೆ ಬೆಳೆದು ಮನೆಯಲ್ಲಿ ಕಾಫಿ ಕುಡಿಯಲು ಸೇರುವುದು ಎನ್ನುವವರೆಗೆ ಬಂದು ನಿಂತಿತ್ತು.
ಅವರ ಪುಟ್ಟ ನಾಯಿಯ ಜೊತೆಗೆ ಮನೆಗೆ ಬಂದವರು “ನಿಮ್ಮ ಊರು ಮನೆ ಬಿಟ್ಟು ಇಷ್ಟು ದೂರ ಬಂದು ಇರುವಾಗ ಹೇಗೆನ್ನಿಸುತ್ತದೆ?” ಎಂದು ಕೇಳಿದರು. “ಸಾಮ್ಯತೆಗಳನ್ನು ನೋಡುವಾಗ ಎಲ್ಲವೂ ನಮ್ಮದೇ ಎನ್ನಿಸುತ್ತೆ. ವ್ಯತ್ಯಾಸಗಳು ಎಲ್ಲೆಲ್ಲೂ ಇರುತ್ತವೆ ಅಲ್ಲವೇ?” ಎಂದು ಹೇಳಿದಾಗ “ನನ್ನ ಮಗಳು ಒಬ್ಬ ಈಜಿಪ್ಷಿಯನ್ ಜೊತೆ ಮದುವೆಯಾಗಿ ಅಲ್ಲಿಯೇ ನೆಲೆಸಿದ್ದಾಳೆ. ಮೊದಮೊದಲು ಒಪ್ಪಿಕೊಳ್ಳಲು ತುಂಬಾ ಕಷ್ಟವಾಯಿತು. ಅಂಟಿಕೊಳ್ಳದಿರಲು ಕಲಿಯಬೇಕಲ್ಲವೇ? ಮೊದಲೆಲ್ಲಾ ರಸ್ತೆಯಲ್ಲಿ ಆಕೆ ಸ್ಕ್ಯಾರ್ಫ್ ಧರಿಸಿ ನಮ್ಮ ಜೊತೆ ಬಂದರೆ ಬೇರೆಯವರು ನಮ್ಮನ್ನು ನೋಡುವಾಗ ಸಂಕೋಚವಾಗುತ್ತಿತ್ತು. ಕೆಲವು ನೆಂಟರ ಮನೆಯಲ್ಲಿ ಆಕೆಯನ್ನು ಸೇರಿಸಲೇ ಇಲ್ಲ. “….
“ಇಷ್ಟು ಸ್ವಾತಂತ್ರಯುಕ್ತ ಸಮಾಜದಲ್ಲಿ ಬೆಳೆದವಳು ಸ್ಕ್ಯಾರ್ಫ್ ಧರಿಸಲು ಹೇಗೆ ಒಪ್ಪಿದಳು? ಒತ್ತಾಯವಿಲ್ಲವಷ್ಟೇ ?” ಕೇಳಿದಾಗ “ಇಲ್ಲಾ, ಆಕೆ ಕುರಾನಿನಲ್ಲಿ ನನ್ನನ್ನು ನಾನು ಕಂಡುಕೊಂಡಿದ್ದೇನೆ ಎನ್ನುತ್ತಾಳೆ. ಸಂತೋಷವಾಗಿದ್ದಾಳೆ. ಮನೆಯವರೆಲ್ಲಾ ಪ್ರೀತಿಸುತ್ತಾರಂತೆ. ” ಬಹಳ ಆಶ್ಚರ್ಯವಾಯಿತು. ಜೊತೆಗೆ ಅರ್ಥವಾಯಿತು, ಅವರ ಗಾರ್ಡನ್ನಿನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಆಕೆಯ ಮಗಳೇ ಎಂದು.
ತಮ್ಮ ಜೀವನದ ಬಗ್ಗೆ ಹೇಳುತ್ತಾ “ಈಸ್ಟ್ ಜರ್ಮನಿಯಿಂದ ರೈಲಿನಲ್ಲಿ ಬರೀ ಒಂದು ಸೂಟಕೇಸ್ ಹಿಡಿದುಕೊಂಡು, ಒಂದು ಕೈಲಿ ಮಗಳನ್ನು ಎತ್ತಿಕೊಂಡು ಗಂಡ ಹೆಂಡತಿ ವೆಸ್ಟ್ ಜರ್ಮನಿಗೆ ಬಂದಿದ್ದೆವು. ಇಲ್ಲಿ ಬಂದು ಕೆಲಸಕ್ಕೆ ಸೇರಿ ಜೀವನ ರೂಪಿಸಿಕೊಂಡೆವು. ಈಸ್ಟ್ ಜರ್ಮನಿಯಲ್ಲಿ ಕೈಲಿ ಹಣವಿಲ್ಲದಿದ್ದರೂ ಜನ ಹೆಚ್ಚು ಪ್ರೀತಿಯಿಂದ ಇದ್ದರು. ಇಲ್ಲಿ ಅಂತಸ್ಥಿಗೆ ಬೆಲೆ ಹೆಚ್ಚು ..” ಹೇಳುವಾಗ ನಮಗೆ ಕಾಣದ ವಿಷಯಗಳನ್ನು ಅವರ ಕಣ್ಣಿನ ಮೂಲಕ ನೋಡುತ್ತಿದ್ದೆವು. ಎರಡನೇ ಮಹಾಯುದ್ದದ ಸಮಯದ ಬಗ್ಗೆ ಮಾತನಾಡುವುದು ಈ ಜನರಿಗೆ ಅಷ್ಟು ಇಷ್ಟವಾಗುವುದಿಲ್ಲ ಎಂದು ಗೊತ್ತಿದ್ದ ಕಾರಣ ಮಾತು ಬದಲಿಸಿದೆವು.
ಹಲವಾರು ತಿಂಗಳುಗಳು ಆಕೆ ಕಾಣದಿದ್ದಾಗ “ಹೇಗಿದ್ದೀರಿ” ಎಂದು ಮೆಸೇಜ್ ಮಾಡಿದ್ದೆ. “ನನ್ನ ಆರೋಗ್ಯ ಸರಿಯಿಲ್ಲ. ಮಾನಸಿಕಳಾಗಿ ಅಸ್ವಸ್ಥಳಾಗಿದ್ದೇನೆ. ಥೆರಪಿ ತೆಗೆದುಕೊಳ್ಳುತ್ತಿದ್ದೇನೆ. ” ಉತ್ತರ ಬಂದಿತ್ತು. “ನಿಮ್ಮ ನೇಚರ್ ಪ್ರೀತಿಯೋ ಏನೋ ನಿಮ್ಮನ್ನು ಆತ್ಮೀಯರು ಎನ್ನಿಸುವಂತೆ ಮಾಡಿದೆ. ಹಾಗಾಗಿ ವಿಚಾರಿಸಬೇಕೆನಿಸಿತು.” ಎಂದು ಹೇಳಿದಾಗ “ನಿನ್ನಲ್ಲಿ ಚೈತನ್ಯ ತುಂಬಿರುವುದು ಕಾಣುತ್ತದೆ. ಪ್ರಶಾಂತಿ ಕಾಣುತ್ತದೆ. ಅದೇ ಪ್ರಶಾಂತಿಯ್ನನು ನನ್ನ ಮನಸ್ಸಿನಲ್ಲಿಯೂ ತುಂಬಿಕೊಳ್ಳಬೇಕೆಂಬ ಆಸೆ. ಒಂದೆರಡು ದಿನ ಒಟ್ಟಿಗೆ ವಾಕಿಂಗ್ ಹೋಗೋಣವೇ “
ಎಂದು ಕೇಳಿದಾಗ ಇಲ್ಲವೆನ್ನಲಾಗಲಿಲ್ಲ.
ಮಾತನಾಡಿಕೊಂಡಂತೆ ಒಂದು ದಿನ ವಾಕಿಂಗ್ ಗೆ ಒಟ್ಟಿಗೆ ಹೊರಟಾಗ ನಾಲ್ಕು ಹೆಜ್ಜೆ ಹೋಗುವಷ್ಟರಲ್ಲಿ ಮನಸ್ಸನ್ನು ಬಿಚ್ಚಿಕೊಳ್ಳಲು ಶುರು ಮಾಡಿದ್ದರು. “ಯಾವುದರಲ್ಲಿಯೂ ಆಸಕ್ತಿಯಿಲ್ಲ. ಮನಸ್ಸಿನ ಒಳಗೆ ಬರೀ ಹಳೆಯ ಸಮಯಗಳ ಯೋಚನೆಗಳು. ಸಂಕಟ. ” ನಾನು ಕೇಳಿದೆ, “ನಿಮ್ಮ ಮಗಳ ಬಗ್ಗೆ ತುಂಬಾ ಯೋಚಿಸುತ್ತಿದ್ದೀರಾ?”
“ಇಲ್ಲ. ಆಕೆ ಸಂತೋಷವಾಗಿದ್ದಾಳೆ. ನನಗೆ ಆಕೆಯ ಬಗ್ಗೆ ಅಷ್ಟು ಚಿಂತೆಯಿಲ್ಲ.”
“ಹಾಗಿದ್ದರೆ ಬೇರೆ ಏನು ಯೋಚಿಸುತ್ತೀರಿ? ಏನು ಯೋಚನೆಗಳು ಭಾವನೆಗಳು ತಲೆಯಲ್ಲಿ ಬರುತ್ತದೆ?”
“ಏನೋ ಒಂದು ರೀತಿಯ ಹೆದರಿಕೆ. ಕೆಲವೊಮ್ಮೆ ಮೈ ನಡುಗಲು ಶುರುವಾಗುತ್ತದೆ. ಹೊಟ್ಟೆಯಲ್ಲಿ ಸಂಕಟ. ಚಿಕ್ಕಂದಿನಲ್ಲಿ ಎಪಿಲೆಫ್ಸಿ ಆಗಿತ್ತು ಮನೆಯಲ್ಲಿ ಆಗ ವೈದ್ಯರಿಗೆ ತೋರಿಸಿ ಚಿಕಿತ್ಸೆ ಕೊಡುವ ಬದಲು ಮುಚ್ಚಿಡುತ್ತಿದ್ದರು. ನನಗೆ ಸಹಾಯ ಸಿಗಲ್ಲ ಎನ್ನುವ ಭಾವನೆ ಉಳಿದಿದೆ. ಏನು ಮಾಡಲೂ ಮನಸ್ಸು ಬರುವುದಿಲ್ಲ. “
ನನ್ನ ತಾಯಿಯ ವಯಸ್ಸಿನ ಆಕೆಗೆ, ಆಕೆ ಪಟ್ಟ ಕಷ್ಟಗಳ ಅರಿವಿಲ್ಲದೆ, ಆ ವಯಸ್ಸಿನ ಅನುಭವವಿಲ್ಲದೆ ಏನು ತಾನೇ ಹೇಳಿಯೇನು? ಅಮ್ಮನ ವಯಸ್ಸಿನವಳಾದ್ದರಿಂದ ಅಮ್ಮನ ಅನುಭವಗಳಿಂದಲೇ ಆಕೆಗೆ ಉತ್ತರ ದೊರೆಯಬಹುದೇನೋ ಎಂದು ಅಮ್ಮನ ಬಗ್ಗೆಯೇ ಮಾತನಾಡಲು ಶುರು ಮಾಡಿದೆ. ಅಪ್ಪ ನೆಡೆಯುವ ಶಕ್ತಿ ಕಳೆದುಕೊಡಿದ್ದು. ಅಮ್ಮ ಶುಶ್ರೂಷೆ ಮಾಡಿದ್ದು. ಏನು ಮಾಡಬೇಕು ಎಂದು ಯೋಚಿಸುವುದು ಬಿಟ್ಟು ಬೇರೆಯವರ ಜೊತೆ ಹೋಲಿಸಿಕೊಳ್ಳದೇ ಬದುಕುವ ಪ್ರಯತ್ನ ಮಾಡಿದ್ದು. ಅಪ್ಪ ಮಾಡುತ್ತಿದ್ದ ಉಪದೇಶ. ಹೀಗೆ… ಹೇಳುತ್ತಾ… “ಅಪ್ಪ ಅಮ್ಮ ಪಟ್ಟ ಕಷ್ಟಗಳ ಎದುರು ನಮ್ಮ ಎದುರಿಗೆ ಬರುವ ಕಷ್ಟಗಳು ತುಂಬಾ ಚಿಕ್ಕವು ಎನ್ನಿಸುತ್ತದೆ. ಹಾಗಾಗಿ ಕೆಲವೊಮ್ಮೆ ನಮ್ಮೆದುರಿಗೆ ಕಷ್ಟಗಳು ಬಂದಾಗ ಕುಗ್ಗಿದರೂ ಅಪ್ಪ ಅಮ್ಮನನ್ನು ನೆನಪಿಸಿಕೊಂಡಾಗ ಧೈರ್ಯ ಬರುತ್ತದೆ. “
“ನಿನಗೆ ಸಿಕ್ಕ ಪಾಲನೆ ಪೋಷಣೆ ನನಗೆ ನನ್ನ ಚಿಕ್ಕಂದಿನಲ್ಲಿ ಸಿಗಲಿಲ್ಲ. ನಾನು ಹುಟ್ಟಿದ ಕೂಡಲೇ ಅಪ್ಪ ನಮ್ಮಿಂದ ದೂರವಾಗಿದ್ದ. ಅಮ್ಮ ಇನ್ನೊಂದು ವಿವಾಹವಾದಳು. ಮಲ ಅಪ್ಪನಿಗೆ ಇನ್ನೊಬ್ಬ ಮಗಳಿದ್ದಳು. ಅಮ್ಮ ಅಪ್ಪನಿಗೆ ಅವರದೇ ಕಷ್ಟಗಳಿದ್ದವು. ಹಾಗಾಗಿ ನಮಗೆಲ್ಲಿಂದ ಸಮಯ ಕೊಟ್ಟಾರು? ನನ್ನ ಬಾಲ್ಯದಿಂದ ನೆನಪಿಸಿಕೊಳ್ಳಲು ನನಗೆ ಸುಂದರವಾದ ಸಮಯಗಳ ನೆನಪುಗಳೇ ಇಲ್ಲ. ನಾನು ಯಾವುದಕ್ಕೂ ಉಪಯೋಗಕ್ಕಿಲ್ಲ ಎನ್ನುವ ಭಾವನೆ ಬರುತ್ತದೆ. “
“ನಿಮ್ಮ ಮನೆ, ನಿಮ್ಮ ಗಾರ್ಡನ್ ನೋಡುವಾಗ ನಿಮ್ಮಿಬ್ಬರಂತೆ ನಾವೂ ಇರಬೇಕು. ನಿಮ್ಮಂತೆಯೇ ಕೆಲಸ ಮಾಡಬೇಕು ಎಂದು ಅದೆಷ್ಟು ಸಾರಿ ಮಾತನಾಡಿಕೊಂಡಿದ್ದೇವೆ ಗೊತ್ತೇ?” ಹೇಳಿದೆ.
ಆಕೆಯ ಕಣ್ಣಲ್ಲಿ ಮಿಂಚಿನ ಸಂಚಾರವಾಯಿತು. “ಹೌದೇ? ನಮ್ಮ ಮನೆಯ ಎಲ್ಲಾ ಕೆಲಸವನ್ನೂ ನಾವೇ ಶ್ರದ್ಧೆಯಿಂದ ಮಾಡಿದ್ದೀವಿ.” ಆಕೆಯ ಹೆಮ್ಮೆ ಕಾಣುತ್ತಿತ್ತು.
“ಅಪ್ಪ ಕಾಲು ಕಳೆದುಕೊಂಡ ಮೇಲೆ ನನ್ನಿಂದ ಏನು ಉಪಯೋಗ ಎಂದು ಯೋಚಿಸಿರಬಹುದು. ಆದರೆ ಅವರು ನಮ್ಮ ಮನಸ್ಸುಗಳಲ್ಲಿ ಬಿಟ್ಟು ಹೋದ ಸ್ಫೂರ್ತಿ ನಮ್ಮ ಜೀವನಕ್ಕೆ ಸಾಕು. ಜೀವನ ಎಷ್ಟು ಕಾಲ ಎಂದು ಯಾರಿಗೂ ಗೊತ್ತಿಲ್ಲ. ಆದರೆ ಇರುವಷ್ಟು ದಿನ ನಮ್ಮ ಇಷ್ಟದ ಕೆಲಸ ಮಾಡುತ್ತಾ, ಅದರಿಂದ ಬೇರೆಯವರಿಗೆ ಸ್ಪೂರ್ತಿಯಾದರೆ ಅದಕ್ಕಿಂತ ಬೇರೆ ಸಾರ್ಥಕತೆ ಇಲ್ಲ ಅಲ್ಲವೇ? ನಿನ್ನಿಂದ ನಿನ್ನ ಗಂಡನಿಂದ ಸ್ವಾವಲಂಬನೆಯ ಸ್ಫೂರ್ತಿ ಪಡೆದಿದ್ದೇವೆ. ನಿಮ್ಮಂತೆ ಕೆಲಸ ಮಾಡಲು ಇಚ್ಚಿಸುತ್ತೇವೆ. “
“ಅಪ್ಪ ತೀರಿಕೊಂಡ ನಂತರ ಅಮ್ಮ ಸಂಸ್ಕೃತ ಕಲಿಯಲು ಶುರು ಮಾಡಿದಳು. ಇಂಗ್ಲಿಷ್ ಸ್ಪೀಕಿಂಗ್ ಕೋರ್ಸ್, ಸಂಗೀತ, ಭಜನೆ ಹೀಗೆ ಒಂದಲ್ಲ ಒಂದು. ಆಗ ಆಕೆಗೆ 52 ವರ್ಷ. ಆ ವಯಸ್ಸಿನಲ್ಲಿ ಕಲಿತು ಏನು ಮಾಡಬೇಕು ಎಂದು ಜನ ಯೋಚಿಸಬಹುದು. ಆದರೆ ಕಲಿಕೆಯೇ ಜೀವನದ ದಾರಿ ಎಂದು ಅಮ್ಮನಿಗೆ ಮಾತ್ರ ಗೊತ್ತಿತ್ತು. ಆಕೆ ಕೊರಗಿದ್ದೇ ಇಲ್ಲ, ಯಾಕೆಂದರೆ ಆಕೆ ಚಿಂತಿಸಲು ಸಮಯವನ್ನೇ ಇಟ್ಟುಕೊಳ್ಳುವುದಿಲ್ಲ. “
“ನಿನ್ನ ತಾಯಿಗೆ ಸಂಸ್ಕೃತ ಬರುತ್ತದೆಯೇ? ನನ್ನ ಯೋಗ ಗುರು ನನಗೆ ತ್ರಯಂಬಕಂ ಯಜಾಮಹೇ ಮಂತ್ರ ಹೇಳಿಕೊಟ್ಟಿದ್ದಾನೆ. ನಾನು ಯೋಗ ಮಾಡುತ್ತೇನೆ. … ” ಮಾತು ಇನ್ನೆಲ್ಲಿಗೋ ತಿರುಗಿತ್ತು.
ಮನೆ ಹತ್ತಿರ ಬಂದಾಗ ಕೋರೋನಾ ಸಮಯವಾದರೂ ಶೇಕ್ ಹ್ಯಾಂಡ್ ಮಾಡದೆ ಇರಲು ಮನಸ್ಸಾಗಲಿಲ್ಲ. ಕೈ ಚಾಚಿದಾಗ “ಒಮ್ಮೆ ನಿನ್ನನ್ನು ಅಪ್ಪಿಕೊಳ್ಳಲೇ?” ಕೇಳಿದಳು . ಇಲ್ಲ ಎನ್ನವಾಗಲಿಲ್ಲ.ಅಪ್ಪಿಕೊಂಡು ಹೇಳಿದೆ “ನನ್ನ ಅಮ್ಮನಂತೆ ಸದಾ ಏನಾದರೂ ಕಾರ್ಯದಲ್ಲಿ ತೊಡಗಿಸಿಕೊ. ಮನಸ್ಸಿರಲಿ ಇಲ್ಲದಿರಲಿ ಮಾಡುತ್ತಿರು. ತಾನಾಗೇ ಮನಸ್ಸು ಹಗುರವಾಗಬಹುದು. ನೀನು ಸದಾ ನಗುನಗುತ್ತಾ ಇರುವುದನ್ನು ನೋಡಬಯಸುವೆ. ನಿನ್ನಿಂದ ನನ್ನ ಜೀವನಕ್ಕೆ ಸ್ಫೂರ್ತಿ ತೆಗೆದುಕೊಳ್ಳಬಯಸುವೆ. ” ಪುನಃ ಇನ್ನೊಂದು ದಿನ ವಾಕಿಂಗ್ ಹೋಗೋಣವೆಂದು ಮಾತನಾಡಿಕೊಂಡೆವು.
.
ಮನೆಗೆ ಬಂದು ಓದುತ್ತಿದ್ದ “mans search for meaning ” ಪುಸ್ತಕ ತೆರೆದರೆ, ವಿಕ್ಟರ್ ಹೇಳುತ್ತಿದ್ದ.
“ಜೀವನದಲ್ಲಿ ಸಂತೋಷ ಹುಡುಕಿಕೊಳ್ಳಲಾಗದಿರಬಹುದು. . ಆದರೆ ಸಾರ್ಥಕತೆ ಖಂಡಿತಾ ಕಂಡುಕೊಳ್ಳಬಹುದು. ದಾರಿಗಳು ೩.
೧. ಸದಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದರಿಂದ
೨. ಹೊಸ ಅನುಭವಗಳಿಂದ,( ಹೊಸ ಜನರನ್ನು ಬೇಟಿಯಾಗುವುದೋ, ಹೊಸ ಜಾಗಗಳಿಗೆ ಹೋಗುವುದೋ ಮುಂತಾದವುಗಳಿಂದ. ಹೊಸ ಕಲಿಕೆಗಳಿಂದ..)
೩. ಕಷ್ಟಗಳನ್ನು ಎದುರಿಸುವಾಗ ಅದರಲ್ಲಿ ತ್ಯಾಗವನ್ನೂ ಅಥವಾ ಯಾವುದೋ ಗುರಿಯನ್ನು ಕಾಣುವುದರಿಂದ, ಅದರಲ್ಲೇ ಸಾರ್ಥಕತೆಯನ್ನು ಕಾಣುವುದರಿಂದ.
Latest posts by ಅಶ್ವಿನಿ ಕೋಟೇಶ್ವರ (see all)
- ಸಂಸ್ಕಾರ ಮನದಲ್ಲಿಚಿಗುರಲು ಸಮಯ ಬೇಕು - December 12, 2020
- ಮೋಡ ಮುಚ್ಚಿದ ಆಕಾಶದಲ್ಲಿ ಸೂರ್ಯನನ್ನು ಕಾಣುವುದ್ಹೇಗೆ? - December 12, 2020
- ಮೆರ್ವಾ ಮತ್ತು ಬಣ್ಣದ ಸ್ಕ್ಯಾರ್ಫ್ - December 12, 2020