Write to us : Contact.kshana@gmail.com

ಮೆರ್ವಾ ಮತ್ತು ಬಣ್ಣದ ಸ್ಕ್ಯಾರ್ಫ್

5
(2)

ಕೆಲವೊಮ್ಮೆ ಸುತ್ತ ಮುತ್ತ ಎಲ್ಲಾ ಚೆನ್ನಾಗಿದ್ದರೂ ಮನಸ್ಸಿನೊಳಗೆ ಏನೋ ಉಸಿರುಗಟ್ಟಿಸುವ ಅನುಭವ. ಬೇರೆಲ್ಲರೂ ಒಂದು ದಾರಿಯಲ್ಲಿ ನೆಡೆಯುತ್ತಿದ್ದರೆ, ಮನಸ್ಸಿಗೆ ಕಾಣುವುದು ಮತ್ತೊಂದು ದಾರಿಯೇ. ನಾವು ಸರಿಯೋ, ಉಳಿದವರು ಸರಿಯೋ ಗೊತ್ತಾಗದ ಪರಿಸ್ಥಿತಿ. ಮನಸ್ಸಿನೊಳಗೆ ಏನೋ ಜಂಜಾಟ. ಉಳಿದವರಂತೆ ನೆಡೆಯುವ ದಾರಿ ಸುಲಭ. ನಮ್ಮದೇ ದಾರಿ ತುಳಿದರೆ ಉಳಿದೆಲ್ಲರನ್ನು ನೋಯಿಸುವ ಸಂಭವ. ಇರುವುದೆಲ್ಲವನ್ನೂ ಕಳೆದುಕೊಳ್ಳುವ ಭಯ. ಆದರೂ ಮನಸ್ಸು ಕೇಳುವುದಿಲ್ಲ. ಕಷ್ಟ ಪಟ್ಟು ಅದನ್ನು ಒಲಿಸಿದರೆ, ಒಪ್ಪಿಸಿದರೆ, ಒಳಗೊಳಗೇ ಬದುಕಿಯೂ ಸತ್ತಂತಿರುವ ಅನುಭವ. ಯಾಕೆ ಹೀಗೆ? ಉತ್ತರ ಸಿಗುವುದಿಲ್ಲ. ಮನಸ್ಸಿನ ಎದುರು ಸೋತು ಹೊಸ ದಾರಿ ಹಿಡಿದಾಗ, ಆ ದಾರಿ ಎಷ್ಟೇ ಕಷ್ಟವಾದರೂ ಬಿಡಿಸಿಕೊಂಡ ಅನುಭವ. ಹಗುರಾದ ಅನುಭವ.

ಸಂಬಂಧಗಳು ಚೆನ್ನಾಗಿರಲು ಬೆಳೆಯಲು ಪ್ರೀತಿಗೆ ಹೆಚ್ಚು ಪ್ರಾಮುಖ್ಯತೆಯೋ, ಸ್ವಾತಂತ್ಯಕ್ಕೋ? ಈ ಪ್ರಶ್ನೆ ಎಷ್ಟೋ ಸಾರಿ ಕಾಡಿದ್ದಿದೆ. ಸ್ವಾತಂತ್ಯಕ್ಕೆ ಅಡ್ಡಿಯಾಗುವ ಸಂಬಂಧಗಳ ಅಡಿಪಾಯ ಸ್ವಾರ್ಥವಾಗಬಹುದೇ ಹೊರತು ಪ್ರೀತಿಯಾಗಲಾರದು ಎಂಬುದು ಕಂಡುಕೊಂಡ ಸತ್ಯ.
ಜರ್ಮನ್ ಕ್ಲಾಸ್ ಟೀಚರ್ ಗೆ ಆಕೆಯ ಗುರು ರಜನೀಶ್ ಕೊಟ್ಟ ಹೊಸ ಹೆಸರು “ಸರೋಜಾ”. ಆಕೆಯ ಕ್ಲಾಸಿನಲ್ಲಿ ಇದ್ದವರಲ್ಲಿ ಒಂದೇ ದೇಶದಿಂದ ಬಂದವರು ಒಬ್ಬರೂ ಇರಲಿಲ್ಲ. ಎಲ್ಲಾ ಪ್ರಪಂಚದ ಮೂಲೆಮೂಲೆಗಳಿಂದ ಬಂದು ಸೇರಿದವರೇ. ಸ್ವಲ್ಪ ಸ್ತೂಲಕಾಯದ ಆನಿ ಎಂಬಾಕೆ ವಿಮಾನದಲ್ಲಿ ಸಿಕ್ಕಿದ ಹುಡುಗನೊಬ್ಬನ ಪ್ರೀತಿಗೆ ಬಿದ್ದು ಜರ್ಮನಿ ಸೇರಿದಾಕೆ. ಜರ್ಮನಿಯ ನಾಟಕದ ಥಿಯೇಟರಿನಲ್ಲಿ ಕೆಲಸ ಮಾಡುವ ಆಸೆಯಿಂದ ಸೌತ್ ಅಮೇರಿಕಾದಿಂದ ಬಂದು ಸೇರಿಕೊಂಡ ಕ್ಲಾರಾ. ತುನೀಷಿಯಾ ದೇಶದಿಂದ ಬಂದ ಹುಡುಗ ಅಮೀನ್. ಟರ್ಕಿಯಿಂದ ಬಂದ ಖಾನ್. ರಷ್ಯಾದಿಂದ ಬಂದ ಅಲಿಯೋನಾ. ಇಸ್ರೇಲ್ನಿಂದ ಬಂದ ರೆಬೆಕ್ಕ. ತನ್ನೆಲ್ಲಾ ಕೂಡಿಟ್ಟ ಹಣವನ್ನು ಒಟ್ಟುಗೂಡಿಸಿಕೊಂಡು ಹೊಸ ಭವಿಷ್ಯವನ್ನರಸಿ ಚೀನಾದಿಂದ ಬಂದ ಯಾಂಗ್ ಯೇ , ಭಾರತದಿಂದ ಬಂದು ಸೇರಿದ್ದ ನಾನು. ಕ್ಲಾಸು ಶುರುವಾಗಿ ಒಂದು ವಾರವಾಗಿತ್ತಷ್ಟೆ. ಹಲೋ ಹಾಯ್ ಅಷ್ಟರಲ್ಲೇ ಇದ್ದ ಒಡನಾಟ.
ಬೆಳಿಗ್ಗೆ ೯ಕ್ಕೆ ಕ್ಲಾಸು ಶುರುವಾಗಿತ್ತಷ್ಟೆ. ಬಣ್ಣ ಬಣ್ಣದ ಹೂವುಗಳಿದ್ದ ಕಪ್ಪು ಸ್ಕ್ಯಾರ್ಫ್ ಕಟ್ಟಿಕೊಂಡ ಮುದ್ದಾದ ಹುಡುಗಿಯೊಬ್ಬಳನ್ನು ಟೀಚರ್ ಒಳಗೆ ಕರೆತಂದು ಈಕೆ ಮೆರ್ವಾ ಎಂದು ಪರಿಚಯಿಸಿದಾಗ ಎಲ್ಲರನ್ನೂ ನೋಡಿ ಆಕೆ ಮುಗುಳ್ನಕ್ಕಳು. ಮುದ್ದು ಮುಖ. ಬೊಗಸೆ ಕಣ್ಣುಗಳು. ಸಾಮಾನ್ಯವಾಗಿ ಟರ್ಕಿಯ ಹೆಂಗಸರು ನಮ್ಮಲ್ಲಿ ಬಾಣಂತಿಯರು ತಲೆಗೆ ಕಟ್ಟಿಕೊಂಡ ಹಾಗೆ ಸ್ಕ್ಯಾರ್ಫ್ ಕಟ್ಟಿಕೊಳ್ಳುತ್ತಾರೆ. ಉದ್ದವಾದ ಕೋಟ್ ಧರಿಸುತ್ತಾರೆ. ಈಕೆ ಉಳಿದವರಂತೆ ಇರಲಿಲ್ಲ. ಹಳೆಯ ಹಿಂದಿ ಫಿಲಂ ಹೀರೋಯಿನ್ಸ್ ತುರುಬು ಕಟ್ಟಿಕೊಂಡಂತೆ ತಲೆಯ ಹಿಂಬದಿ ಮೇಲೆ ತುರುಬು ಕಟ್ಟಿ ಸ್ಕ್ಯಾರ್ಫ್ ಗೋಪುರದಂತೆ ಕಾಣುತ್ತಿತ್ತು. ಕ್ಲಾಸು ಮುಗಿಯುವಷ್ಟರಲ್ಲಿ ಇನ್ನೂ ಹದಿನೆಂಟರ ಆಸುಪಾಸಿನ ಹುಡುಗ ಆಕೆಯನ್ನು ಕರೆದೊಯ್ಯಲು ಹೂಗುಚ್ಛದೊಂದಿಗೆ ಕಾಯುತ್ತಿದ್ದ. ಉಳಿದವರನ್ನು ನೋಡಿ ಒಮ್ಮೆ ಮುಗುಳ್ನಕ್ಕು ಆಕೆ ಆತನ ಜೊತೆ ಹೊರಟುಹೋದಳು.
ದಿನ ಹೋಗುತ್ತಾ ಭಾಷಾಜ್ಞಾನ ಹೆಚ್ಚುತ್ತಾ ಹೋದಂತೂ ಮಾತುಕತೆಗಳೂ ಜಾಸ್ತಿಯಾಗಿದ್ದವು. ಒಡನಾಟ ಸ್ನೇಹಕ್ಕೆ ತಿರುಗಿತ್ತು. ಒಟ್ಟಿಗೆ ಊಟಕ್ಕೆ ಹೋಗುವುದು, ಕ್ಲಾಸು ಬಿಟ್ಟು ಹೊರಗೆ ಇನ್ನೇನು ಮಾಡುತ್ತಾರೆ ಎಲ್ಲದರ ಬಗ್ಗೆ ಮಾತುಕಥೆ ಶುರುವಾಗಿತ್ತು. ಮೆರ್ವಾ ಸಹ ತನ್ನ ಬಗ್ಗೆ ಸ್ವಲ್ಪ ಸ್ವಲ್ಪ ಹೇಳಿಕೊಳ್ಳಲು ಶುರುಮಾಡಿದ್ದಳು. ಆಕೆಗೆ ೧೮ ವರ್ಷಗಳಾಗಿದ್ದವು ಅಷ್ಟೇ. ಟರ್ಕಿಯಿಂದ ಕೆಲವೇ ತಿಂಗಳುಗಳ ಹಿಂದೆ ಮದುವೆಯಾಗಿ ಜರ್ಮನಿಗೆ ಬಂದಿದ್ದಳು. ಗಣಿತ ಆಕೆಯ ಪ್ರೀತಿಯ ಸಬ್ಜೆಕ್ಟ್. ಆಕೆ ಯೂನಿವೆರ್ಸಿಟಿಯಲ್ಲಿ ಸೇರಿಕೊಳ್ಳಲು ತಯಾರಿ ನೆಡೆಸಿದ್ದಳು.
ಒಂದು ಬೆಳಿಗ್ಗೆ ಕ್ಲಾಸಿಗೆ ಬಂದವಳ ಮುಖದಲ್ಲಿ ನಗುವಿರಲಿಲ್ಲ. ಕ್ಲಾಸ್ ಮುಗಿದ ಮೇಲೆ ಹುಷಾರಿಲ್ಲವೇ ಎಂದು ಕೇಳಿದಾಗ ತನಗೆ ತಿಳಿದ ಶಬ್ಧಗಳಲ್ಲಿ ತನ್ನ ಹೊಟ್ಟೆಯನ್ನು ತೋರಿಸಿ ಪೀರಿಯೆಡ್ಸ್ ಮುಂದೆ ಹೋಗಿದೆಯೆಂದೂ, ಅಕಸ್ಮಾತ್ ಬಸುರಿಯಾಗಿದ್ದರೆ ತಮ್ಮಲ್ಲಿ ಅಬಾರ್ಶನ್ ಮಾಡಿಸುವುದು ನಿಷಿದ್ಧವಾದ ಕಾರಣ ತನ್ನ ಓದಿನ , ಯೂನಿವೆರ್ಸಿಟಿಯ ಕನಸು ಮುರಿದುಹೋಗುತ್ತದೆಂದೂ ತಿಳಿಸಿದ್ದಳು. ನಮಗೆ ಬರುತ್ತಿದ್ದ ಶಬ್ಧಗಳಲ್ಲಿ ಸಮಾಧಾನ ಪಡಿಸಿದ್ದವು.
ಕ್ಲಾಸಿನಲ್ಲಿ ಇದ್ದ ಅಷ್ಟೂ ಜನರಲ್ಲೂ ಸ್ನೇಹವಿದ್ದರೂ ಆನಿ ಮತ್ತು ಮೆರ್ವಾ ಹೆಚ್ಚು ಕ್ಲೋಸ್ ಆಗಿದ್ದರು. ಆನಿ ಅತೀ ಸ್ವತಂತ್ರವಿದ್ದ ಸಮಾಜದಿಂದ ಬಂದವಳು. ತನಗೆ ಇಷ್ಟಬಂದ ಬಟ್ಟೆ ಧರಿಸುವಳು. ತನ್ನೆಲ್ಲಾ ನಿರ್ಧಾರಗಳನ್ನೂ ತಾನೇ ಮಾಡುವವಳು. ಮೆರ್ವಾ ಅತೀ ಹೆಚ್ಚು ಕಟ್ಟುಪಾಡುಗಳಿದ್ದ ಸಮಾಜದಿಂದ ಬಂದವಳು. ಬುರ್ಖಾ ಹಾಕುತ್ತಿರದಿದ್ದರೂ ಆಕೆಯ ಧರಿಸಿನಲ್ಲಿ ಆಕೆಗಿದ್ದ ಕಟ್ಟುಪಾಡುಗಳು , ಕಣ್ಣುಗಳಲ್ಲಿ ಅವನ್ನು ಮೀರಿ ಬೆಳೆಯುವ ಕನಸು ತೋರುತ್ತಿತ್ತು. ಅವರಿಬ್ಬರ ನಡುವೆ ನಾನು ಮಧ್ಯಮ ಸ್ವಾತಂತ್ರ್ಯವುಳ್ಳ ಸಮಾಜದಿಂದ ಬಂದಂತೆ ಭಾಸವಾಗುತ್ತಿತ್ತು
ಒಂದು ದಿನ ಮೆರ್ವಾ ತನ್ನ ಮನೆಗೆ ನನ್ನನ್ನು ಆಹ್ವಾನಿಸಿದ್ದಳು. ಆಕೆ ಇದ್ದಿದ್ದು ಜಾಯಿಂಟ್ ಫ್ಯಾಮಿಲಿಯಲ್ಲಿ. ಅತ್ತೆ ಮಾವಂದಿರ ಜೊತೆಗೆ. ನಾನು ಆಕೆಯ ಮನೆ ಹುಡುಕಿಕೊಂಡು ಹೋಗುವಷ್ಟರಲ್ಲಿ ಆಕೆ ನನ್ನನ್ನು ಹುಡುಕಿಕೊಂಡು ರೈಲ್ವೆ ಸ್ಟೇಷನ್ನಿಗೆ ಬಂದಿದ್ದಳು. ಹಾಲಿನಲ್ಲಿ ದಪ್ಪಗಿದ್ದ ಆಕೆಯ ಅತ್ತೆ ಸೋಫಾದ ಮೇಲೆ ಕುಳಿತಿದ್ದರು. ನಾವು ಒಳಹೋದಾಗ ಕಷ್ಟಪಟ್ಟು ಎದ್ದು ನನ್ನ ಬಳಿ ಬಂದು ನನ್ನನ್ನು ಹಿಡಿದುಕೊಂಡು ಕೆನ್ನೆಯ ಎರಡೂ ಬದಿ ಮುತ್ತಿಕ್ಕಿ ಸ್ವಾಗತಿಸಿದರು. ನನಗಾಗಿ ತರತರದ ಅಡುಗೆಗಳು ತಯಾರಾಗಿದ್ದವು. ನಮ್ಮ ಅಂಬೊಡೆಯಂತೆಯೇ ಕಾಣುತ್ತಿದ್ದ, ಆದರೆ ಕರಿಯದೆ ಬೇಯಿಸಿದ ಫಲಾಫಲ್, ನಮ್ಮ ಆಲೂ ಪರಾಟದಂತೆ ಕಾಣುತ್ತಿದ್ದ ಗೋಲ್ಝೆಮೆ , ಮೈದಾ ಹಿಟ್ಟಿನ ಕರಿದ ಬೋಂಡಾ, ವಿನೇಗರಿನಲ್ಲಿ ಹಾಕ್ಕಿದ್ದ ಕೋಸು. ಕ್ರೀಮ್ ನಿಂದ ಅಲಂಕರಿಸಿದ ಕೇಕ್. ಊಟೋಪಚಾರದಲ್ಲಿ ಅವರು ನಮ್ಮಂತೆಯೇ ಎನ್ನಿಸಿತ್ತು.
ಉಳಿದವರಿಗೆಲ್ಲಾ ಮತ್ತೆ ಮತ್ತೆ ಉಪಚಾರ ಮಾಡಿ ಬಡಿಸಿದ ಆಕೆಯ ಅತ್ತೆ, ತಾವು ಮಾತ್ರ ಒಂದು ಗ್ಲಾಸಿನಲ್ಲಿ ಟೀ ತೆಗೆದುಕೊಂಡು ಕುಡಿಯಲು ಶುರು ಮಾಡಿದರು. ಅವರು ಊಟ ಮಾಡುವುದಿಲ್ಲವೇ ಎಂದು ಕೇಳಿದಾಗ, ಸನ್ನೆ ಮಾಡಿ “ನಾನು ಊಟ ಮಾಡಿದರೆ ಇನ್ನೂ ದಪ್ಪಗಾಗುತ್ತೇನೆ. ತೆಳ್ಳಗಾಗಬೇಕೆಂದು ಟೀ ಕುಡಿಯುತ್ತಿದ್ದೇನೆ ” ಎಂದು ನಗುತ್ತಾ ಹೇಳಿದರು.
ಊಟವಾದ ಮೇಲೆ ಮೆರ್ಮಾ ನನ್ನನ್ನು ಆಕೆಯ ರೂಮಿಗೆ ಕರೆದುಕೊಂಡು ಹೋದಳು. ಚಿಕ್ಕ ರೂಮಿನಲ್ಲಿ ಒಂದು ಡಬಲ್ ಬೆಡ್. ಒಂದೆರಡು ಸೂಟಕೇಸುಗಳು. ಕಿಟಕಿಯ ಬಳಿ ಎರಡು ಸ್ಟಡಿ ಟೇಬಲ್. ಒಂದು ತನ್ನದು, ಇನ್ನೊಂದು ತನ್ನ ಗಂಡನದು ಎಂದು ತೋರಿಸಿ, ಇಬ್ಬರೂ ಒಟ್ಟಿಗೆ ಓದುತ್ತೇವೆ. ನಾನು ಗಣಿತದಲ್ಲಿ ವಿಶೇಷ ಅಭ್ಯಾಸ ಮಾಡಬೇಕೆಂದುಕೊಂಡಿದ್ದೇನೆ. ಆತ ಇನ್ಫರ್ಮ್ಯಾಟಿಕ್ಸ್ ಅಭ್ಯಾಸ ಮಾಡುತ್ತಿದ್ದಾನೆ. ಇಬ್ಬರೂ ಓದಿ ಒಳ್ಳೆಯ ಜಾಬ್ ಹುಡುಕಿಕೊಂಡು ಬೇರೆ ಮನೆ ಮಾಡಬೇಕೆಂದಿದ್ದೇವೆ. ಎಲ್ಲರೂ ಆಸೆ ಮಾಡುತ್ತಾರೆ. ಆದರೂ ಯಾಕೋ ಒಂದು ರೀತಿಯ ಬೇಸರ. ಉಸಿರುಗಟ್ಟಿಸುವ ಅನುಭವ. ಏನು ಮಾಡಬೇಕಿದ್ದರೂ ಕೇಳಿ ಮಾಡಬೇಕು. ಅದು ನನಗೆ ಇಷ್ಟವಾಗುತ್ತಿಲ್ಲ ಎಂದು ಹೇಳಿದಳು.
ರೂಮಿಗೆ ಬಂದ ಕೂಡಲೇ ಸ್ಕ್ಯಾರ್ಫ್ ಬಿಚ್ಚಿಟ್ಟಿದ್ದ ಆಕೆ ಕಪ್ಪು ಕೂದಲಿನೊಂದಿಗೆ ಇನ್ನೂ ಸುಂದರವಾಗಿ ಕಾಣುತ್ತಿದ್ದಳು. ನೀನು ಸ್ಕ್ಯಾರ್ಫ್ ಇದ್ದರೂ ಚೆನ್ನಾಗಿ ಕಾಣುವೆ. ಇಲ್ಲದಿದ್ದರೆ ಇನ್ನೂ ಚೆನ್ನಾಗಿ ಕಾಣುವೆ ಎಂದು ಹೇಳಿದಾಗ. “ನಮ್ಮ ಸಮಾಜದಲ್ಲಿ ತಲೆಕೂದಲನ್ನು ಬೇರೆಯವರಿಗೆ ತೋರಿಸುವ ಹಾಗಿಲ್ಲ. ನಾನು ನನ್ನ ಗಂಡ ಇಬ್ಬರೂ ಕುರಾನಿನ ನೀತಿಗಳಂತೆ ನೆಡೆಯುತ್ತೇವೆ. ಹಾಗಾಗಿ ಸ್ಕ್ಯಾರ್ಫ್ ಧರಿಸುತ್ತೇನೆ.” ಮುಂದುವರೆಸಿದ್ದಳು ” ಅಶ್ವಿನಿ, ನೀನು ಬೇರೆ ದೇಶದವಳು, ನನ್ನ ಬಂದು-ಬಳಗದವಳಲ್ಲ. ನಮ್ಮ ಭಾಷೆಯೂ ಒಂದಲ್ಲ. ಇಬ್ಬರೂ ಕಷ್ಟ ಪಟ್ಟು ಜರ್ಮನ್ ಮಾತನಾಡುತ್ತೇವೆ. ನಮ್ಮ ರೀತಿ ನೀತಿಗಳಿಗೂ ನಿಮ್ಮ ರೀತಿ ನೀತಿಗಳಿಗೂ ವ್ಯತ್ಯಾಸಗಳಿವೆ. ಆದರೂ ನಾನು ನಿನ್ನನ್ನು ಮನಸಾರೆ ಪ್ರೀತಿಸುತ್ತೇನೆ.” ನಾನು ಹೇಳಿದ್ದೆ, “ನಾನೂ ಅಷ್ಟೇ”
ಬೆಂಗಳೂರಿಗೆ ಬಂದು ನಾಲ್ಕು ವರ್ಷ ಇದ್ದು ಪುನಃ ಜರ್ಮನಿಗೆ ಬರುವಾಗ ಆಕೆಗೆಂದು ಚೂಡಿದಾರ್ ತೆಗೆದುಕೊಂಡು ಬಂದಿದ್ದೆ. ಭೇಟಿಯಾಗಿ ಆಕೆಗ್ ಕೊಟ್ಟಾಗ ಸಂತೋಷ ಪಟ್ಟಿದ್ದಳು. ಗಂಡ ಹೆಂಡತಿ ಒಂದು ರೂಮಿನ ಅಪಾರ್ಟ್ಮೆಂಟ್ ಗೆ ಶಿಫ್ಟ್ ಆಗಿದ್ದರು. ಮನೆಯ ಕಾರ್ಪೆಟ್ ನಿಂದ ಹಿಡಿದು ಎಲ್ಲವೂ ಕೆಂಪು ಬಣ್ಣದ್ದು. ಪುಟ್ಟ ಮಕ್ಕಳು ಮನೆ ಆಟವಾಡುವಾಗ ಸಿಂಗರಿಸಿದಂತೆ ಮನೆಯನ್ನು ಸಿಂಗರಿಸಿದ್ದಳು. ತಾನು ಎರಡು ಮೂರು ಕಡೆ ಕೆಲಸ ಮಾಡುತ್ತಿರುವುದಾಗಿಯೂ, ಇನ್ನೆರಡು ವರ್ಷಗಳಲ್ಲಿ ಮಗು ಪ್ಲಾನ್ ಮಾಡಿರುವುದಾಗಿಯೂ, ಅಷ್ಟರೊಳಗೆ ಇಬ್ಬರೂ ಕಷ್ಟ ಪಟ್ಟು ದುಡಿದು ಒಳ್ಳೆಯ ಸ್ಥಿತಿಗೆ ಹೋಗಬೇಕೆಂದು ಬೆಳಿಗ್ಗೆ ೪ ಗಂಟೆಗೇ ದಿನ ಶುರು ಮಾಡಿ ರಾತ್ರಿಯವರೆಗೂ ಕೆಲಸ ಮಾಡುತ್ತಿವುದಾಗಿಯೂ ತಿಳಿಸಿದ್ದಳು. ನಾನು ಕೊಟ್ಟ ಚೂಡಿದಾರ್ ಹಾಕಿಕೊಂಡು ಫೋಟೋ ತೆಗೆದು ಕಳುಹಿಸಿದ್ದಳು. ಆ ನಂತರದಲ್ಲಿ ನನ್ನ ಕೆಲಸ ಕಾರ್ಯಗಳಲ್ಲಿ ನಾನು ಬ್ಯುಸಿಯಾಗಿದ್ದೆ. ಇಬ್ಬರೂ ಹತ್ತಿರದ ಊರಲ್ಲೇ ಇದ್ದರೂ ಮಾತನಾಡಿರಲಿಲ್ಲ.
ವಾಟ್ಸಪ್ಪ್ ಎಲ್ಲ ಬಂದ ಮೇಲೆ ಪುನಃ ಕಾಂಟಾಕ್ಟ್ ಶುರುವಾಯಿತು. ಆಕೆ ಪುನಃ ನಮ್ಮನ್ನು ಆಕೆಯ ಮನೆಗೆ ಆಹ್ವಾನಿಸಿದ್ದಳು. ಈ ಸಾರಿ ಆಕೆಯ ಅತ್ತೆ ಮಾವಂದಿರು ಆಕೆಯ ಮನೆಯಲ್ಲಿದ್ದರು. ಆಕೆಯ ಅತ್ತೆ ಎಂದಿನಂತೆ ಕೆನ್ನೆಯ ಎರಡೂ ಕಡೆ ಮುತ್ತಿಕ್ಕಿ ಅಪ್ಪಿಕೊಂಡು ಸ್ವಾಗತಿಸಿದ್ದರು. ಆಕೆಯ ಹತ್ತಿರ “ಅವಳನ್ನು ಕಂಡರೆ ನನಗೆ ಇಷ್ಟ ಎಂದು ಹೇಳು” ಎಂದು ಹೇಳಿಸಿದ್ದರು. ಆದರೆ ಈ ಬಾರಿ ಮೆರ್ವಾಳಲ್ಲಿ ಒಂದು ವ್ಯತ್ಯಾಸ ಕಾಣಿಸಿತ್ತು. ಆಕೆ ಸ್ಕ್ಯಾರ್ಫ್ ಧರಿಸಿರಲಿಲ್ಲ. ಎಲ್ಲರಂತೆ ಟಿ-ಶರ್ಟ್ ಹಾಕಿಕೊಂಡಿದ್ದಳು. ಆಕೆ ಮತ್ತು ಆಕೆಯ ಗಂಡ ಸೇರಿ ಕಂಪನಿ ಶುರು ಮಾಡಿರುವುದಾಗಿಯೂ, ಚೆನ್ನಾಗಿ ನೆಡೆಯುತ್ತಿದೆ ಎಂದೂ ಹೇಳಿದಳು.
ದಿನ ಕಳೆದಂತೆ ಆಕೆ ಏನೇನೋ ಹೊಸ ಫೋಟೋಗಳನ್ನು ಹಾಕುವುದು ನೋಡಿದಾಗ ಸಂತೋಷವಾಗುತ್ತಿತ್ತು. ಆಕೆಗೆ ಈಗ ಪುಟ್ಟ ಮಗಳಿದ್ದಳು. ಮಗುವಾದ ಮೇಲೆ ಸಾಮಾನ್ಯವಾಗಿ ಟರ್ಕಿಷ್ ಮಹಿಳೆಯರು ಒಂದರ ನಂತರ ಇನ್ನೊಂದಂತೆ ಮಕ್ಕಳು ಮಾಡಿಕೊಳ್ಳುತ್ತಲೇ ಹೋಗುತ್ತಾರೆ. ಮನೆ ಬಿಟ್ಟು ಹೊರ ಹೋಗುವುದು, ಕೆಲಸ ಮಾಡುವುದು ಕಡಿಮೆಯೇ. ಜರ್ಮನಿಯಲ್ಲಿ ಇದ್ದರೂ ಅವರದೇ ಏರಿಯಾ ಮಾಡಿಕೊಂಡು ಅಲ್ಲಿ ಅವರ ರೀತಿ ನೀತಿಗಳಂತೆಯೇ, ಅವರ ಕಟ್ಟುಪಾಡುಗಳಲ್ಲಿಯೇ ಬದುಕುತ್ತಾರೆ. ಆದರೆ ಈಕೆ ಥೀಟಾ ಹೀಲಿಂಗ್, IT ಗೆ ಸಂಬಂಧ ಪಟ್ಟ ಕೋರ್ಸ್ ಹೀಗೆ ಕಲಿಯಲು ಏನೇನು ಸಾಧ್ಯವೂ ಎಲ್ಲದರ ಕೋರ್ಸ್ ಮಾಡುತ್ತಿದ್ದಳು. ಫೋಟೋಗ್ರಾಫರ್ ಆಗಿ ಕೆಲಸವನ್ನೂ ಮಾಡುತ್ತಿದ್ದಳು. ಒಂದು ಸಂಜೆ ಫೋನ್ ಮಾಡಿ “ಏನೇನು ಮಾಡುತ್ತಿದ್ದಿಯೇ ? ನಿನ್ನನ್ನು ನೋಡಿದರೆ ಸಂತೋಷವಾಗುತ್ತದೆ. ಎಂದು ಹೇಳಿದಾಗ “ನನಗೆ ಕಲಿಯುವುದು ಎಂದರೆ ತುಂಬಾ ಇಷ್ಟ. ಜೀವನವಿಡೀ ಕಲಿಯುತ್ತಾ ಇರಬೇಕು ಎಂದು ಅಂದುಕೊಂಡಿದ್ದೇನೆ. ಈ ವಾರ ನನ್ನ ರೇಖಿ ಕೋರ್ಸ್ ಮುಗಿಯಿತು. ಇನ್ನು ಪ್ರಾಕ್ಟೀಸ್ ಶುರು ಮಾಡಬೇಕು. ” ಎಂದು ಹೇಳಿದಳು.
ಕುತೂಹಲ ತಡೆಯಲಾರದೆ, “ತಪ್ಪು ತಿಳಿಯಬೇಡ. ಅಷ್ಟು ಕನ್ಸರ್ವೇಟಿವ್ ಇದ್ದವಳು ಸ್ಕ್ಯಾರ್ಫ್ ಧರಿಸುವುದನ್ನು ಹೇಗೆ ನಿಲ್ಲಿಸಿದೆ? ಎಲ್ಲಿಂದ ನಿಂಗೆ ಅಷ್ಟು ಶಕ್ತಿ ಧೈರ್ಯ ಬಂತು? ಮನೆಯಲ್ಲಿ ಏನೂ ಹೇಳಲಿಲ್ಲವೇ?” ಪ್ರಶ್ನೆಗಳ ಮಳೆಗೆರೆದೆ.
“ನಾನು ಮದುವೆಗೆ ಮೊದಲು ಟರ್ಕಿಯಲ್ಲಿ ಇದ್ದಾಗ ಸ್ಕ್ಯಾರ್ಫ್ ಧರಿಸುತ್ತಿರಲಿಲ್ಲ. ನನ್ನ ಗಂಡನ ಮನೆಯಲ್ಲಿ ಎಲ್ಲರೂ ಸ್ಕ್ಯಾರ್ಫ್ ಧರಿಸುವುದನ್ನು ನೋಡಿ ಅವರಂತೆ ಇರಬೇಕೆಂದು ಪ್ರಯತ್ನಿಸಿದೆ. ನಾಲ್ಕು ವರ್ಷ ಸ್ಕ್ಯಾರ್ಫ್ ಧರಿಸಿದೆ. ಆದರೆ ಸ್ಕ್ಯಾರ್ಫಿನೊಂದಿಗೆ ನನ್ನನ್ನು ನಾನು ಕಳೆದುಕೊಂಡಿದ್ದೇನೆ ಎನ್ನಿಸಿತು. ಹೆಚ್ಚು ದಿನ ಬೇರೆಯವರಂತೆ ಇರಲು ಸಾಧ್ಯವಾಗಲಿಲ್ಲ. ಮನಸ್ಸಿನೊಳಗೆ ಉಸಿರು ಕಟ್ಟಿದಂತೆ ಎನ್ನಿಸುತ್ತಿತ್ತು. ನನ್ನ ಸ್ವಾತಂತ್ರ ಕಳೆದುಕೊಂಡಂತೆ ಭಾಸವಾಗುತ್ತಿತ್ತು. ಆ ಭಾವನೆ ದಿನೇ ದಿನೇ ಹೆಚ್ಚಾಗುತ್ತಲೇ ಹೋಯಿತು. ಎಂದು ನನ್ನ ಸ್ವಾತಂತ್ರ ನನಗೆ ಪ್ರಪಂಚದಲ್ಲಿ ಎಲ್ಲಕ್ಕಿಂತ ಹೆಚ್ಚು ಎಂದು ಅರಿವಾಯಿತೋ, ಅಂದು ನಿರ್ಧರಿಸಿದೆ. ಇನ್ನು ಮುಂದೆ ಉಳಿದವರಂತೆ ಇರುವ ನಾಟಕ ಮಾಡಲಾರೆ. ನಾನು ನನ್ನಂತೆಯೇ ಇರುವೆ ಎಂದು. ನನ್ನ ಗಂಡನಿಗೆ ಹೇಳಿದೆ. ಆತ ಸಪೋರ್ಟ್ ಮಾಡಿದ. ಅಕಸ್ಮಾತ್ ಮಾಡದಿದ್ದರೆ ಆತನನ್ನು ಬಿಡಲು ತಯಾರಾಗಿದ್ದೆ ಹೊರತು ನನ್ನ ಸ್ವಾತಂತ್ರ್ಯವನ್ನಲ್ಲ. ಮನೆಯಲ್ಲಿ ಯಾರೂ ಏನೂ ಹೇಳಲಿಲ್ಲ. “
“ಸ್ಕ್ಯಾರ್ಫ್ ಹಾಕಿಕೊಂಡು ಏನು ಮಾಡಿದರೂ ಜನ ನನ್ನನ್ನು ಗಮನಿಸುತ್ತಿದ್ದರು. ಸ್ಕ್ಯಾರ್ಫ್ ಧರಿಸಿದ ಹುಡುಗಿ ಸೈಕಲ್ ಹೊಡೆಯುತ್ತಿದ್ದಾಳೆ. ಸ್ಕ್ಯಾರ್ಫ್ ಧರಿಸಿದ ಹುಡುಗಿ ಕೆಲಸ ಮಾಡುತ್ತಿದ್ದಾಳೆ , ಹೀಗೆ ಏನು ಮಾಡಿದರೂ ನನಗಿಂತ ನನ್ನ ಐಡೆಂಟಿಟಿ ಸ್ಕ್ಯಾರ್ಫ್ ಆಗಿತ್ತು. ಸ್ಕ್ಯಾರ್ಫ್ ತೆಗೆದ ಮೇಲೆ ಅದೃಶ್ಯಳಾಗಿದ್ದೇನೆ. ಈಗ ಯಾರೂ ನನ್ನನ್ನು ವಿಶೇಷವಾಗಿ ನೋಡುವುದಿಲ್ಲ.”
ಆ ಅನುಭವ ನನಗೂ ಆಗಿತ್ತು. ಮೊದಮೊದಲು ಆಫೀಸಿಗೆ ಟಿ-ಶರ್ಟ್ ಹಾಕಿಕೊಂಡು ಹೋಗಲು ಮುಜುಗರವಾಗಿ ಚೂಡಿದಾರ್ ಹಾಕಿಕೊಂಡು ಹೋದರೆ, ಎಲ್ಲರೂ ಮೇಲಿಂದ ಕೆಳಗಿನವರೆಗೆ ನೋಡುತ್ತಿದ್ದರು. ಇನ್ನೂ ಹೆಚ್ಚು ಮುಜುಗರವಾಗುತ್ತಿತ್ತು. ಅದೇ ಎಲ್ಲರಂತೆ ಜೀನ್ಸ್ ಟಿ-ಶರ್ಟ್ ಹಾಕಿಕೊಂಡು ಹೋದರೆ ಯಾರೂ ಗಮನಿಸುತ್ತಲೇ ಇರಲಿಲ್ಲ. ಬಿ ಎ ರೋಮನ್ ಇನ್ ರೋಮ್ ಎನ್ನುವುದು ಇದಕ್ಕೆಯೇನೋ ಎಂದುಕೊಂಡಿದ್ದೆ
ನಾನು ಕೇಳಿದೆ “ನೀನೆ ಹೇಳಿದ್ದೆ , ನೀನು ನಿಮ್ಮ ಧರ್ಮಗಂಥದಂತೆ ನೆಡೆಯುವೆ ಎಂದು. ಅದರ ಬಗ್ಗೆ ನಿನ್ನ ಮನಸ್ಸಿನಲ್ಲಿ ಏನು ಭಾವನೆ ಬರುತ್ತದೆ?”
ಹೇಳಿದಳು. “ನಾನು ಸ್ಕ್ಯಾರ್ಫ್ ಧರಿಸುವುದು ನಿಲ್ಲಿಸಿದ ಮಾತ್ರಕ್ಕೆ, ಕೂದಲು ಬಿಟ್ಟು ಓಡಾಡಿದ ಮಾತ್ರಕ್ಕೆ ದೇವರು ನನ್ನಿಂದ ದೂರವಾಗಿಲ್ಲ. ದೇವರ ಮೇಲಿನ ನಂಬಿಕೆಯಾಗಲಿ, ಶ್ರದ್ಧೆಯಾಗಲೀ ನನ್ನಲ್ಲಿ ಕಡಿಮೆಯಾಗಿಲ್ಲ. ದೇವರು ಇನ್ನೂ ನನ್ನ ಜೊತೆಯಲ್ಲಿದ್ದಾನೆ. ನನ್ನನ್ನು ಪ್ರೀತಿಸುತ್ತಾನೆ ಎಂಬ ನಂಬಿಕೆ ಮೊದಲಿದ್ದಷ್ಟೇ ಇದೆ “
“ನೀನಾಡಿದ ಮಾತುಗಳು ನನ್ನ ಮನಸ್ಸಿನ ಮಾತುಗಳೇನೋ ಎನಿಸುತ್ತಿದೆ. ಇಚ್ಚಿಸಿದ ಕಾರ್ಯ ಮಾಡುವ, ಇಚ್ಚಿಸಿದಂತೆ ಬದುಕುವ ಸ್ವಾತಂತ್ರ್ಯಕ್ಕಿಂತ ಹೆಚ್ಚಿನದು ಏನೂ ಇರಲಾರದು. ಸ್ವಾತಂತ್ರವಿಲ್ಲದ ಪ್ರೀತಿ ಕೂಡ ಸ್ವಾರ್ಥವೇ ಅಲ್ಲವೇ? ನಿನ್ನನ್ನು ಮತ್ತು ನಿನ್ನ ಸಂಸಾರವನ್ನು ನೋಡುವಾಗ ಸಂತೋಷವಾಗುತ್ತದೆ. ಹೀಗೆ ಕಲಿಯುತ್ತಿರು. ಬೆಳೆಯುತ್ತಿರು. ಎಂದೆಂದಿಗೂ ಸ್ವತಂತ್ರವಾಗಿರು ” ಎಂದು ಹೇಳಿ ಮಾತು ಮುಗಿಸಿದ್ದೆ.

How do you like this post?

Click on a star to rate it!

Average rating 5 / 5. Vote count: 2

No votes so far! Be the first to rate this post.

We are sorry that this post was not useful for you!

Let us improve this post!

Tell us how we can improve this post?

ಅಶ್ವಿನಿ ಕೋಟೇಶ್ವರ

Subscribe to Blog via Email

Enter your email address to subscribe to this blog and receive notifications of new posts by email.

Join 1 other subscriber
More Stories
ಕ್ಷಮಿಸಿ ಬಿಡು ಅಮ್ಮ… ವಯಸ್ಸಾಗಿದ್ದು ಗೊತ್ತೇ ಆಗಲಿಲ್ಲ.