ಜೆಕ್ ಗಣರಾಜ್ಯದ ರಾಜಧಾನಿ ಪ್ರಾಗ್ ಪ್ರವಾಸಿಗರಿಗೆ ಅಚ್ಚು ಮೆಚ್ಚು. ಸಾಮಾನ್ಯವಾಗಿ ಯೂರೋಪ್ ಪ್ರವಾಸ ಮಾಡುವವರು ಪ್ರಾಗ್ ವೀಕ್ಷಿಸದೇ ವಾಪಸು ಹೋಗುವುದು ವಿರಳ. ಆದರೂ ಯಾಕೋ ಇಷ್ಟು ವರ್ಷಗಳಾದರೂ ಪ್ರಾಗ್ ನೋಡುವ ಮನಸ್ಸಾಗಿರಲಿಲ್ಲ. ಈ ವರ್ಷ ಕೂಡ ಆಸ್ಟ್ರಿಯಾ ದೇಶದ ವಿಯೆನ್ನಾ ಹೋಗುವುದೋ ಅಥವಾ ಬೇರೆಲ್ಲಾದರೂ ಹೋಗುವುದೋ ಎಂದು ಕ್ರಿಸ್ಮಸ್ ರಜೆಯವರೆಗೂ ಯೋಚಿಸುತ್ತಲೇ ಕಳೆದು ಕೊನೆಯಲ್ಲಿ ೫ ದಿನಗಳಿಗಾಗಿ ಪ್ರಾಗ್ ಹೋಗಿ ಬರುವುದೆಂದು ನಿರ್ಧಾರವಾಯಿತು. ಪ್ರವಾಸ ಎಂದರೆ ಯಾವುದೊ ಗುಡ್ಡಗಾಡು ಪ್ರದೇಶ ಅರಸುವ ನಾವು, ನಮ್ಮ ಆಸಕ್ತಿಯ ದೆಸೆಯಿಂದ ಮಕ್ಕಳಿಗೆ ಪಟ್ಟಣಗಳನ್ನು ವೀಕ್ಷಿಸುವ ಅವಕಾಶ ದೊರೆಯದಂತಾಗಬಾರದೆಂದು ಯೋಚಿಸಿ ಪ್ರಾಗ್ ಪ್ರವಾಸ ಕೈಗೊಂಡೆವು.
ಬೊಹೆಮಿಯಾ ರಾಜ್ಯದ ರಾಜಧಾನಿಯಾಗಿ ಹಲವಾರು ಪ್ರಸಿದ್ಧ ರೋಮನ್ ರಾಜರ ನಿವಾಸವಾಗಿದ್ದ ಪ್ರಾಗ್ vltava ನದಿಯ ತೀರದಲ್ಲಿರುವ ಐತಿಹಾಸಿಕ ಸ್ಥಳವೂ ಹೌದು.
ಜರ್ಮನಿಯ ಲೀವರ್ಕುಸೆನ್ ನಿಂದ ಪ್ರಾಗಿಗೆ ಸುಮಾರು ೬ ಗಂಟೆಯ ದಾರಿ. ಬೆಳಿಗ್ಗೆಯೇ ಹೊರಟರೂ ಮಧ್ಯೆ ಮಧ್ಯೆ ವಿರಾಮ ತೆಗೆದುಕೊಂಡು, ಟ್ರಾಫಿಕ್ಕನ್ನು ದಾಟಿ ಪ್ರಾಗ್ ತಲುಪುವಾಗ ಸಂಜೆ ೫:೩೦ ಆಗಿತ್ತು. ಮೊದಲೇ ಗೊತ್ತಿದ್ದಂತೆ ಕಾರನ್ನು ಪಾರ್ಕ್ ಮಾಡಲು ಪಾರ್ಕಿಂಗ್ ನಾವು ಬುಕ್ ಮಾಡಿದ ಅಪಾರ್ಟ್ಮೆಂಟ್ ಹತ್ತಿರದಲ್ಲಿ ಸಿಗಲಿಲ್ಲ. ತೆಗೆದುಕೊಂಡು ಹೋದ ಲಗೇಜನ್ನೆಲ್ಲಾ ಅಪಾರ್ಟ್ಮೆಂಟ್ ಹತ್ತಿರದಲ್ಲಿ ಇಳಿಸಿಕೊಂಡು, ಪಾರ್ಕಿಂಗ್ ಹುಡುಕಲು ಹೋದೆವು. ನದಿಯ ಪಕ್ಕದಲ್ಲಿದ್ದ ಪಾರ್ಕಿಂಗ್ ಲಾಟಿನಲ್ಲಿ ಕಾರನ್ನು ನಿಲ್ಲಿಸಿ, ಇನ್ನು ವಾಪಸು ಹೋಗುವ ದಿನವೇ ಹೊರತೆಗೆಯುವುದು ಎಂದು ನಿರ್ಧರಿಸಿ ಅಪಾರ್ಟ್ಮೆಂಟಿಗೆ ವಾಪಸಾಗಿ, ಮಧ್ಯಾಹ್ನ ಊಟವಾಗಿರಲಿಲ್ಲದ ಕಾರಣ, ಉಪ್ಪಿಟ್ಟನ್ನು ಮಾಡಿಕೊಂಡು ತಿಂದು ಸುಮಾರು ೬:೩೦ ಹೊತ್ತಿಗೆ ಪ್ರಾಗ್ ವೀಕ್ಷಣೆಗೆ ಹೊರಟೆವು. ಡಿಸೆಂಬರ್ ತಿಂಗಳಾದ ಕಾರಣ ಸಂಜೆ ೫ಕ್ಕೇ ಸೂರ್ಯಾಸ್ತ. ಹಾಗಾಗಿ ಆಗಲೇ ಕತ್ತಲೆಯಾಗಿತ್ತು.
ಮೊದಲನೆಯದಾಗಿ ಅಪಾರ್ಟ್ಮೆಂಟ್ ಹತ್ತಿರದಲ್ಲಿಯೇ ಇದ್ದ ಸೇತುವೆ ಮೇಲೆ ಹೋಗಿ ಅಲ್ಲಿಂದ ದೂರದಲ್ಲಿ ಮಿನುಗುವಂತೆ ಕಾಣುತ್ತಿದ್ದ ಕ್ಯಾಸೆಲ್, ನೀರಿನಲ್ಲಿ ನಿಲ್ಲಿಸಿದ್ದ ಶಿಪ್ಪುಗಳನ್ನು ಫೋಟೋ ತೆಗೆದುಕೊಂಡು ಪ್ರಾಗ್ ನ ಪ್ರಸಿದ್ಧ ಕ್ರಿಸ್ಮಸ್ ಮಾರ್ಕೆಟ್ ಕಡೆಗೆ ನೆಡೆದೆವು. ಫೋನಿನಲ್ಲಿ ಡೈರೆಕ್ಷನ್ ನೋಡಿಕೊಳ್ಳುತ್ತಾ ಗಲ್ಲಿಗಲ್ಲಿಗಳಲ್ಲಿ ನುಗ್ಗುತ್ತಾ ಮುನ್ನೆಡೆಯುತ್ತಿದ್ದಂತೆಯೇ ಪ್ರಾಗಿನ ಪ್ರಾಚೀನ ಕಟ್ಟಡಗಳ ಸೌಂದರ್ಯ ಕ್ರಿಸ್ಮಸ್ ಲೈಟುಗಳಲ್ಲಿ ಇನ್ನೂ ಸುಂದರವಾಗಿ ಕಾಣಿಸುತ್ತಿತ್ತು. ಮುಂದೆ ಹೋದಂತೆ ಜಾತ್ರೆಯಲ್ಲಿರುವಂತೆ ಜನಜಂಗುಳಿ. ನಮ್ಮ ಜೊತೆಯಲ್ಲಿ ನಮ್ಮ ನಾಯಿಮರಿ ಕೂಡ ಇದ್ದುದರಿಂದ, ಅದನ್ನು ಆ ಜನಜಂಗುಳಿಯ ನಡುವೆ ನೆಡೆಯಲು ಬಿಡಲು ಧೈರ್ಯವಾಗದೆ, ಮಕ್ಕಳನ್ನು ಎತ್ತುಕೊಂಡು ಹೋಗುವಂತೆ ಸ್ವಲ್ಪ ಸ್ವಲ್ಪ ದೂರ ಒಬ್ಬೊಬ್ಬರು ಎತ್ತುಕೊಂಡು ಹೋಗತೊಡಗಿದೆವು. ನಮ್ಮ ನಾಯಿಮರಿಗೋ, ಅದರ ದೆಸೆಯವರನ್ನು ಕಂಡರೆ ಸಾಕು, ಎಷ್ಟು ದೂರದಲ್ಲಿದ್ದರೂ ಸುಳಿವು ಸಿಕ್ಕಿ ನಮ್ಮ ಕೈಯಿಂದ ನುಣುಚಿಕೊಂಡು ಇಳಿದು ಓದುವ ತವಕ. ಜೊತೆಗೆ ಜೋರಾಗಿ ಬೌ ಬೌ ಎಂದು ಕೂಗುವುದು ಬೇರೆ. ಅದರ ಗಮನ ಬೇರೆಡೆ ಸೆಳೆಯುವ ಪ್ರಯತ್ನದಲ್ಲಿ, ಕ್ರಿಸ್ಮಸ್ ಮಾರ್ಕೆಟ್ ತಲುಪುವ ಮೊದಲೇ ಎಲ್ಲರ ಶಕ್ತಿ ಅರ್ಧಕ್ಕರ್ಧಕ್ಕೆ ಇಳಿದಿತ್ತು.
ಕ್ರಿಸ್ಮಸ್ ಮಾರ್ಕೆಟ್ಟಿನಲ್ಲಿ ಕಾಲಿಡಲೂ ಸಾಧ್ಯವಾಗದಷ್ಟು ಜನಜಂಗುಳಿ. ಮೂಲೆಯಲ್ಲೇ ನಿತ್ತುಕೊಂಡು ಮುಂದೆಲ್ಲಿ ಹೋಗುವುದು ಎಂದು ಚರ್ಚಿಸತೊಡಗಿದರೆ, ನಮ್ಮ ನಾಯಿ ಆರಾಮಾಗಿ ತನ್ನ ದೆಸೆಯವರನ್ನು ಹುಡುಕತೊಡಗಿತ್ತು. ಬಿಸಿ ಬಿಸಿ ಹಬೆಯಾಡುತ್ತಿದ್ದ ಗ್ಲುಹ್ ವೈನ್, ಆಲ್ಕೋಹಾಲ್ ರಹಿತ ಕಿಂಡರ್ ಪುಂಶ್ ಗಳ ಸಿಹಿ ಸುವಾಸನೆ ಡಿಸೆಂಬರಿನ ಚಳಿಗಾಳಿಯಲ್ಲಿ ಹಿತವಾಗಿತ್ತು. ಜೊತೆಯಲ್ಲಿ ಕೆಂಡದಲ್ಲಿ ಕಾಯಿಸುತ್ತಿದ್ದ ಟ್ರೇಡ್ಲ್ನಿಕ್ ಎಂಬ ಹೆಸರಿನ ಕೇಕಿನ ಪರಿಮಳ.
ಆಗಿನ್ನೂ ಉಪ್ಪಿಟ್ಟು ತಿಂದು ಬಂದಿದ್ದರಿಂದ ಕ್ರಿಸ್ಮಸ್ ಮಾರ್ಕೆಟ್ಟಿನಲ್ಲಿ ಏನನ್ನೂ ತಿನ್ನಬೇಕೆನಿಸಲಿಲ್ಲ. ಆ ಜನಜಂಗುಳಿಯಲ್ಲಿ ಮುಂದೆ ಹೋಗುವ ಧೈರ್ಯವೂ ಆಗಲಿಲ್ಲ. ವಾಪಸು ಅಪಾರ್ಟ್ಮೆಂಟಿಗೆ ಹೋಗಿ ರೆಸ್ಟ್ ತೆಗೆದುಕೊಂಡು ಮರುದಿನ ಬೆಳಿಗ್ಗೆ ಬೇಗ ಹೊರಡುವುದೆಂದು ನಿರ್ಧರಿಸಿ ವಾಪಸು ಹೊರಟೆವು.
ಮರುದಿನ ಬೆಳಿಗ್ಗೆ ಎದ್ದು ಹೊರಟರೆ ಪ್ರಾಗ್ ಇನ್ನೂ ಎದ್ದಿರಲಿಲ್ಲ. ಅಂಗಡಿಗಳೆಲ್ಲಾ ಇನ್ನೂ ತೆರೆದಿರಲಿಲ್ಲ. ಮುನಿಸಿಪಾಲಿಟಿಯವರು ರೋಡನ್ನು ಕ್ಲೀನ್ ಮಾಡುತ್ತಿದ್ದರು.
ಮುನ್ನೆಡೆದಂತೆ ಹಳೆ ಕಾಲದ ಕಾರುಗಳು ಲೈನಾಗಿ ನಿಲ್ಲಿಸಿದ್ದರು. ಮೊದಲಿಗೆ ಆಶ್ಚರ್ಯವಾಗಿ ಫೋಟೋ ತೆಗೆಯಲು ಶುರುಮಾಡಿದರೆ ಮುನ್ನೆಡೆದಂತೆ ಒಂದಲ್ಲಾ ಎರಡಲ್ಲಾ, ಪ್ರಾಗಿನ ಗಲ್ಲಿ ಗಲ್ಲಿಗಳಲ್ಲಿ ತಿರುಗಲು ಟೂರಿಸ್ಟ್ ವೆಹಿಕಲ್ ಆಗಿ ಆ ಕಾರುಗಳನ್ನೇ ಉಪಯೋಗಿಸುವುದು ಎಂದು ತಿಳಿಯಿತು. ನೆಡೆದುಕೊಂಡೇ ಊರು ನೋಡಬೇಕು ಎಂದು ನಿರ್ಧರಿಸಿದ್ದ ನಮಗೆ ಕಾರ್ ಹತ್ತಲು ಮನಸ್ಸಾಗಲಿಲ್ಲ.
ನಾಯಿಯನ್ನು ಬಿಟ್ಟು ಎಲ್ಲರೂ ಯಾವುದೇ ಕಟ್ಟಡಗಳ ಒಳಗೆ ಹೋಗಲಾರದ ಕಾರಣ, ವಸ್ತುಸಂಗ್ರಹಾಲಯಗಳ ಹಾಗೂ ಚರ್ಚುಗಳು ಎಲ್ಲದರ ಒಳಹೋಗುವ ಪ್ಲಾನ್ ಇರಲಿಲ್ಲ. ಆದರೂ ಸಂತ ನಿಕೋಲಾಸ್ ಚರ್ಚಿನ ಒಳಗೆ ಒಬ್ಬೊಬ್ಬರಾಗಿ ಹೋಗಿ ನೋಡಿಕೊಂಡು ಬಂದೆವು.
ಚರ್ಚಿನ ಹೊರಬಾಗದ ಬಾಗಿಲನ್ನು ತೆಗೆದು ಮುಚ್ಚಿ, ಹೋಗಿಬರುತ್ತಿದ್ದ ಪ್ರವಾಸಿಗರು ಏನಾದರೂ ಕೊಡುತ್ತಾರೋ ಎಂದು ಕಾಯುತ್ತಿದ್ದ ಹರಿದ ಬಟ್ಟೆಯನ್ನು ಹಾಕಿಕೊಂಡಿದ್ದ ವೃದ್ಧ ಕೈ ಚಾಚಿದಾಗ, ಇರು ಹೊರಹೋಗಿ ಮಕ್ಕಳ ಬಳಿ ಕೊಟ್ಟಿದ್ದ ಬ್ಯಾಗಿನಲ್ಲಿದ್ದ ದುಡ್ಡು ತೆಗೆದು ನಾಲ್ಕು ಕಾಸು ಕೊಟ್ಟಾಗ, ಬಾಯಿ ತುಂಬಾ ಹರಸಿ, ಎಲ್ಲಿಂದ ಬಂದಿದ್ದು ಎಂದೆಲ್ಲಾ ಜರ್ಮನ್ ಭಾಷೆಯಲ್ಲಿ ಮಾತನಾಡಿಸಿದಾಗ ಏನೋ ಮನಸ್ತೃಪ್ತಿ.
ಕ್ರಿಸ್ಮಸ್ ಮಾರ್ಕೆಟ್ಟೂ ಕಾಲಿ ಕಾಲಿ. ಅಲ್ಲೇ ಪಕ್ಕದಲ್ಲಿದ್ದ ಟವರಿನ ಮೇಲೆ ಹೋಗಲು ಸುಮಾರು ೪೯ ಯುರೋ ಕೊಟ್ಟು ಸುಮಾರು ೨೦ ನಿಮಿಷ ಕಾದು, ಎಲಿವೇಟರ್ ಹತ್ತಿಕೊಂಡು ಹೋಗಿ ಮೇಲ್ಚಾವಣಿ ತಲುಪಿದರೆ ಅಲ್ಲೂ ನೂಕುನುಗ್ಗಲು. ಇದ್ದಷ್ಟು ಜಾಗದಲ್ಲೇ ತೂರಿಕೊಂಡು ಎಲ್ಲಾ ಕಡೆಯಿಂದಲೂ ಕಣ್ಣು ಹಾಯಿಸುವಷ್ಟು ದೂರವೂ ಕೆಂಪು ಹಂಚುಗಳನ್ನು ಹಾಸಿದ ಮಹಡಿಗಳ ಫೋಟೋ ತೆಗೆದುಕೊಂಡು ಇಳಿಯುವಷ್ಟರಲ್ಲಿ ಸುಸ್ತಾಗಿತ್ತು.
ನಂತರ ವೀಕ್ಷಿಸಬೇಕೆಂದು ನಿರ್ಧರಿಸಿದ್ದ ಚಾರ್ಲ್ಸ್ ಸೇತುವೆ ಹತ್ತಿರ ನೆಡೆದುಕೊಂಡು ಹೋಗುತ್ತಿದ್ದಂತೆಯೇ, ಪುನಃ ಜನಜಂಗುಳಿ ಜಾಸ್ತಿಯಾಗಿದ್ದು ಗೊತ್ತಾಗುತ್ತಿತ್ತು. ಆ ಜನಜಂಗುಳಿಯ ಮಧ್ಯದಲ್ಲಿಯೇ ಕುಳಿತು ಹ್ಯಾಂಡ್ ಪ್ಯಾನ್ ಎನ್ನುವ ಮಣ್ಣು ಹೊರುವ ಕಬ್ಬಿಣದ ತಪ್ಪಲೆಯಂತೆ ಕಾಣುತ್ತಿದ್ದ ಹೆಡಗೆಗಳನ್ನು ಕಾಲ ಮಧ್ಯದಲ್ಲಿಟ್ಟುಕೊಂಡು ಮನದಾಳಕ್ಕೆ ಇಳಿಯುವಂತಹ ಸಂಗೀತ ಬಾರಿಸುತ್ತಿದ್ದ ಇಬ್ಬರನ್ನು ನೋಡುತ್ತಾ ಸಮಯ ಕಳೆದದ್ದೇ ತಿಳಿಯಲಿಲ್ಲ.
೫ ದಿನಕ್ಕೆಂದು ಬಂದವರಿಗೆ ೪ ದಿನ ಕಳೆಯುವಷ್ಟರಲ್ಲಿ ಮಕ್ಕಳು ಶುರುಮಾಡಿದ್ದರು “ಇನ್ನು ಯಾವತ್ತೋ ಪಟ್ಟಣಕ್ಕೆ ಪ್ರವಾಸ ಹೋಗುವುದು ಬೇಡ. ಯಾವಾಗಲೂ ಹೋಗುವಂತೆ ಯಾವುದಾದರೂ ಬೆಟ್ಟದ ಬಳಿಯೋ, ರೈತರ ಮನೆಗೋ ಹೋಗೋಣ. ದನಕರುಗಳ ಜೊತೆ ಇರಲು ಸಂತೋಷವಾಗುತ್ತದೆ. ಇಲ್ಲವಾದರೆ ಮನೆಯಲ್ಲಿಯೇ ಇರೋಣ. ಪಟ್ಟಣ ಬೇಡ.” ಎಲ್ಲಾ ಕಡೆ ಚಿಕ್ಕ ಚಿಕ್ಕ ಕಲ್ಲಿನ ಹಾಸಿನಿಂದ ಮಾಡಿದ ನೆಡೆಯುವ ಪಥಗಳು. ಚಳಿಗಾಲದಲ್ಲಿ ಹಾಕುವ ಬೂಟುಗಳನ್ನು ಹಾಕಿಕೊಂಡು ಅದರ ಮೇಲೆ ೧೦-೧೨ ನೆಡೆಯುವುದು ಸ್ವಲ್ಪ ಕಷ್ಟವೆನಿಸುತ್ತಿತ್ತು. ಬಹಳ ಬೇಗ ಸುಸ್ತಾಗುತ್ತಿತ್ತು. ಜೊತೆಯಲ್ಲಿ ಮಳೆ ಮತ್ತು ಮೈ ಕೊರೆಯುವ ಚಳಿ ಬೇರೆ. ಇಷ್ಟರ ಜೊತೆಗೆ ಚಿಕ್ಕ ಮಕ್ಕಳನ್ನು ಎತ್ತುಕೊಂಡು ಹೋಗುವಂತೆ ಎತ್ತುಕೊಂಡು ಹೋಗಬೇಕಾಗುವ ನಾಯಿಮರಿ. ಇದ್ದ ನಾಲ್ಕು ದಿನಗಳೂ ಮಾಡಿದ್ದಿಷ್ಟೇ. ಬೆಳಿಗ್ಗೆ ಎದ್ದು ಗಲ್ಲಿಗಲ್ಲಿಗಳಲ್ಲಿ ಸುತ್ತಿ ಕ್ರಿಸ್ಮಸ್ ಮಾರ್ಕೆಟ್ಟಿನಲ್ಲಿ ಏನಾದರೂ ತಿಂದು ಅಪಾರ್ಟ್ಮೆಂಟಿಗೆ ಹೋಗಿ ಮಧ್ಯಾಹ್ನ ಒಂದು ಗಂಟೆ ವಿರಾಮ ತೆಗೆದುಕೊಳ್ಳುವುದು. ಸಂಜೆ ಪುನಃ ಒಂದೆರಡು ಗಂಟೆ ಓಡಾಡಿ ಎಲ್ಲಾದರೂ ಊಟ ಮಾಡಿ ಅಪಾರ್ಟ್ಮೆಂಟಿಗೆ ಹೋಗಿ ಮಲಗುವುದು. ನಾಲ್ಕನೇ ದಿನದ ಹೊತ್ತಿಗೆ ಪ್ರಾಗಿನ ಜನಜಂಗುಳಿ ಇಷ್ಟವಾಗತೊಡಗಿತ್ತು. ಅಷ್ಟು ಜನರಿದ್ದರೂ ಗಲಾಟೆ, ನೂಕು ನುಗ್ಗಲು ಇರದೇ, ನಿಧಾನವಾಗಿ ಚಲಿಸುತ್ತಾ ಮುಂದೆ ಸಾಗುವುದು ಹಿತವೆನ್ನಿಸತೊಡಗಿತ್ತು. ಚಾರ್ಲ್ಸ್ ಸೇತುವೆಯ ಆಚೆಕಡೆಯಿರುವ ಕ್ಯಾಸೆಲ್ ಒಳಗೆ ಹೋಗಲು ಆಗದಿದ್ದರೂ, ಅಲ್ಲಿಯ ಸುತ್ತಮುತ್ತಲಿನ ಸ್ಥಳಗಳನ್ನು ನೋಡಿಕೊಂಡು ಬಂದೆವು. ಚಾರ್ಲ್ಸ್ ಸೇತುವೆಯ ಪಕ್ಕದಲ್ಲಿರುವ ಟವರಿನ ಮೇಲೆ ಹತ್ತಿ, ಸೇತುವೆ ಮೇಲೆ ಇರುವೆಗಳಂತೆ ಕಾಣುವ ಜನಜಂಗುಳಿಯನ್ನು ನೋಡಿ ಸಂತೋಷಪಟ್ಟೆವು. ವಾಪಸು ಹೋಗುವ ದಿನ ಬಂದಾಗ ಪುನಃ ಬರಬೇಕು. ಇನ್ನಷ್ಟು ನೋಡಬೇಕು ಎನ್ನುವ ಆಸೆ. ಆ ಆಶಾವಾದದೊಂದಿಗೇ ಪ್ರಾಗಿನ ಪ್ರವಾಸ ಮುಗಿಸಿದ್ದೆವು.
- ಸಂಸ್ಕಾರ ಮನದಲ್ಲಿಚಿಗುರಲು ಸಮಯ ಬೇಕು - December 12, 2020
- ಮೋಡ ಮುಚ್ಚಿದ ಆಕಾಶದಲ್ಲಿ ಸೂರ್ಯನನ್ನು ಕಾಣುವುದ್ಹೇಗೆ? - December 12, 2020
- ಮೆರ್ವಾ ಮತ್ತು ಬಣ್ಣದ ಸ್ಕ್ಯಾರ್ಫ್ - December 12, 2020