ಏನು ದೈವದ ಭಕ್ತಿಯೇನು ಕಾವ್ಯಾಸಕ್ತಿ
ಏನು ಗೀತಾ ಪಠಣವೇನು ಸಾಧನೆಯೊ !
ಏನು ವೇದಾಧ್ಯಯನವೇನು ಮಡಿವಂತಿಕೆಯೊ
ತಾನೆ ಪಾಲಿಸದಿರಲು ಜಾಣಮೂರ್ಖ//
ಎಷ್ಟು ದೈವದ ಭಕ್ತಿಯನ್ನು ತೋರ್ಪಡಿಸಿದರೇನು !? ದೈವವನ್ನು ಅರಿಯದಿದ್ದರೆ ! ಎಷ್ಟು ಕಾವ್ಯಾಸಕ್ತಿಯಿಂದ ಕಾವ್ಯಗಳನ್ನು ಓದಿ ವಿಮರ್ಶಿಸಿದರೇನು ! ಗೀತಾ ಪಠಣ ಪಾರಾಯಣಗಳನ್ನು ಮಾಡಿದರೇನು !? ವೇದಾಧ್ಯಯನ ಮಾಡಿ ಮಡಿವಂತಿಕೆಯಿಂದ ಬದುಕಿದರೇನು !? ಇವುಗಳೆಲ್ಲದರ ಅಂತರಾರ್ಥವನ್ನರಿತು ಬದುಕದಿದ್ದರೆ !? ಮಾನವೀಯ ಮೌಲ್ಯಗಳನ್ನು ಗಾಳಿಗೆ ತೂರಿ ಬದುಕಿದೆವಾದೊಡೆ ಏನೇ ಓದಿದರೂ ಎಲ್ಲಾ ವ್ಯರ್ಥ ಕಣಯ್ಯ ಗೆಳೆಯ. ! ಜೀವನ ಮೌಲ್ಯಗಳು ಬೇಕು. ಇಲ್ಲದಿದ್ದರೆ ನಾವು ಎಷ್ಟು ಕಾಲ ಬದುಕಿದರೇನು ! ಎಷ್ಟು ಕೋಟಿಗಳಿಗೆ ಬದುಕಿದರೇನು ! ಗೀತೆಯನ್ನು ಓದುತ್ತಿದ್ದೇವೆ ! ಸರಿ. ಎಷ್ಟು ಆಳಕ್ಕೆ ಇಳಿದೆವು ? ಏನು ಅರಿತೆವು ಬದುಕಿನ ಬಗ್ಗೆ ! ಸುಮ್ಮನೆ ಹಾಗೇ ಓದಿ ಬಿಡಲು ಅದೇನು ಕತೆಯೇ ! ಕಾದಂಬರಿಯೇ !! ಕಾವ್ಯಗಳನ್ನು ಓದಿದೆವು ನಿಜ, ಕವಿ ನೀಡಿದ ಸಂದೇಶವನ್ನು ಅರಿತೆವೇನು ! ಕತೆ ಅರಿತರೆ ಯಾವ ಪ್ರಯೋಜನವೂ ಇಲ್ಲ. ಚಿಕ್ಕ ಮಕ್ಕಳಹಾಗೆ ! ಹಾಗೆಯೇ ವೇದಾಧ್ಯಯನ ಮಾಡಿ ಅಂತೆಯೇ ಅಳವಡಿಸಿಕೊಂಡು ಬದುಕಬೇಕು ! ಇವೆಲ್ಲವೂ ಮಾತಿನಂತೆಯೇ ಕೃತಿಯಲ್ಲೂ ಇರಬೇಕು.ಆಗಲೇ ಇವುಗಳೆಲ್ಲದರ ಉದ್ದೇಶ ಈಡೇರಿ ಬದುಕು ಸಾರ್ಥಕವಾಗುತ್ತದೆ. ಅಲ್ಲವೇ ಗೆಳೆಯರೆ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021