ಮಧುರ ಮಕರಂದದಿಂದಾದರನು ಮಧುಕರನು
ಮಧುರವಾಗಿಸಿ ಬದುಕ ಮಧುರನೈ ಮಧುಪ
ಬದುಕಿನುದ್ದಕು ಮಧುವನೆತ್ತಿ ನೀಡುವ ಜಗಕೆ
ಅದಕೆ ಬದುಕೇ ಮಧುರ ಜಾಣಮೂರ್ಖ //
ಮಧುಕರ ಎಂದರೆ ಜೇನ್ನೊಣ. ಹುಟ್ಟಿದಂದಿನಿಂದ ಕೊನೆಯ ಉಸಿರಿರುವ ವರೆಗೂ ಹೂವುಗಳ ಜೊತೆಯೇ ಅದರ ಜೀವನ. ಅದರ ಬದುಕೇ ಮಧುರಾತಿ ಮಧುರ. ಹೂವಿನ ಮಕರಂದವನ್ನು ಸವಿದು ತನ್ನ ಬದುಕಿನುದ್ದಕ್ಕೂ ಅದನ್ನು ಸಂಗ್ರಹಿಸಿ ಜಗತ್ತಿಗೆ ನೀಡುತ್ತಲೇ ಬಂದಿದೆ. ಇದು ನಿನ್ನೆ ಮೊನ್ನೆಯಿಂದಲ್ಲ. ಅದರ ಬದುಕೇ ಹಾಗೆಂದು ಭಗವಂತ ನೇಮಿಸಿಬಿಟ್ಟಿದ್ದಾನೆ. ಸಹಸ್ರ ಸಹಸ್ರ ವರ್ಷಗಳಿಂದಲೂ ಅದು ಹೀಗೇ ಬದುಕುತ್ತಿದೆ. ಮಕರಂದವನ್ನು ಮಧುವಾಗಿಸಿ ತನ್ನ ಬದುಕನ್ನೇ ಮಧುರವಾಗಿಸಿಕೊಂಡಿದೆ. ತಾನಷ್ಟೇ ಮಧುರಗೊಳ್ಳದೆ ಜಗತ್ತನ್ನೂ ಸಹ ಮಧುರಗೊಳಿಸಿದೆ. ಎಂತಹಾ ಸುಂದರ, ಸಾರ್ಥಕ ಅರ್ಥಪೂರ್ಣ ಮತ್ತೆ ತ್ಯಾಗಮಯ ಬದುಕಲ್ಲವೇ ಅದರದ್ದು !? ಗೆಳೆಯರೇ ಇದರಿಂದ ನಾವು ಕಲಿಯಬೇಕಾದುದು ಬಹಳಷ್ಟಿದೆ ! ಏಕೆಂದರೆ ನಾವು ಪಶು ಪಕ್ಷಿ ಕ್ರಿಮಿ ಕೀಟಾದಿಗಳಿಗಿಂತಲೂ ತುಂಬಾ ಸುಂದರವಾದ ಬದುಕನ್ನು ಪಡೆದಿರೋ ಮನುಷ್ಯರು ! (ಹೌದುತಾನೆ ?!!! ಏನಾದರೂ ಅನುಮಾನವಿದ್ದರೆ ಯೋಚಿಸಿರಿ !! ) ಇಂತಹಾ ಉತ್ತಮ ತ್ಯಾಗಮಯ ಬದುಕಿನ ಪರಿಯನ್ನು ಅಳವಡಿಸಿಕೊಳ್ಳಬೇಕಲ್ಲವೇ ? ವಿಪರ್ಯಾಸವೆಂದರೆ ನಾವು ಬರೀ ಮಾತನಾಡುವವರು ! ಆದರೆ ಆಚರಿಸುವವರಲ್ಲ !! ಏನಂತೀರಿ !!?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021