ಮನಸಿನುದ್ಯಾನದೊಳಗಾಸೆಯಾ ಬೆಳಸೇಕೆ ?
ಕನಸುಗಳ ಬಿತ್ತೇಳು ನೋವಕಳೆ ಕೀಳು !
ನನಸಗೈವಾಸೆ ಬಿಡು ಕಾಯಕದಿ ನೆಲೆಸು ನೀ
ಹನಿಸೀವನೈ ದೇವ ಜಾಣಮೂರ್ಖ//
ಈಗ ನೀವೇ ನೋಡಿ ನಮಗೆ ಭಗವಂತ ಸಕಲವನ್ನು ನೀಡಿದರೂ ಆಸೆ ಮಾತ್ರ ಕಡಿಮೆಯಾಗುವುದೇ ಇಲ್ಲ. ಬೇಕೆ ಬೇಕೆಂಬಾಸೆ , ಕಡು ಸುಖವ ಕಾಂಬಾಸೆ ಇನ್ನೂ ಏನೇನೋ! ಈ ಮನಸ್ಸಿಗೆ ತೃಪ್ತಿಯೇ ಇಲ್ಲ. ಅದಕ್ಕೆ ನಾವೇನು ಮಾಡಬೇಕೆಂದರೆ ಕನಸುಗಳನ್ನು ಕಟ್ಟಿಕೊಳ್ಳಬೇಕು. ನನಸಿಗಾಗಿ ಪರಿತಪಿಸಬಾರದು. ಮನಸ್ಸಿನ ಈ ಉದ್ಯಾನದಲ್ಲಿರುವ ನೋವೆಂಬ ಕಳೆಕಿತ್ತು , ಕಾಯಕದಿ ನಿರತರಾಗಬೇಕು. ಮನಸಿನ ಬೆಳೆಸುಗಳಿಗೆ ನೀರ ಹನಿಸಿ ತಂಪಾಗಿಸಿ ಸದಾ ಶಾಂತಸ್ಥಿತಿಯಲ್ಲಿರಬೇಕು. ಆಗ ಕೊಡುವುದನ್ನು ಭಗವಂತನೇ ಕೊಡುತ್ತಾನೆ. ಅವನಿಗೆ ಗೊತ್ತುಂಟು. ಎಷ್ಟು ಕೊಡಬೇಕೆಂದು. ನಿಷ್ಠೆಯಿಂದ ಕಾಯಕವೆಸಗು , ಫಲಾಫಲಗಳನ್ನು ದೇವನಿಗೆ ಬಿಟ್ಟು ನಿಶ್ಚಿಂತೆಯಿಂದಿರಯ್ಯಾ ಗೆಳೆಯ. ಏಕೆಂದರೆ ಆ ಭಗವಂತನಲ್ಲಿ ನಿಷ್ಠೆಗೆ ಬೆಲೆಯಿದ್ದೇ ಇದೆ. ಮತ್ತೆ ಚಿಂತೆಯೇಕೆ ? ಅಲ್ಲವೇ ಗೆಳೆಯರೇ ?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021