ಜ್ಞಾನದಿಂ ವೀಕ್ಷಿಸಲು ಕಾಣ್ವುದೈ ಶಕ್ತಿಯ
ಜ್ಞಾನದೊಳಗಿಲ್ಲೆನಲು ಸತ್ಯಕೇಂ ನಷ್ಟ ವಿ
ಜ್ಞಾನ ತಾ ಸತ್ಯ ಸೋದರನಂತೆ ಕಾಣು ಸು
ಜ್ಞಾನದಿಂ ಮೋಕ್ಷ ಕಾಣ್ ಜಾಣಮೂರ್ಖ //
ಈ ಅಖಂಡ ಸೃಷ್ಟಿ ಹಾಗೂ ಜೀವರಾಶಿಗಳ ಇರುವಿಕೆಗೆ ಕಾರಣವಾದ ದಿವ್ಯ ಶಕ್ತಿಯನ್ನು ನಮ್ಮಲ್ಲಿರುವ ಜ್ಞಾನದ ಬಲದಿಂದ ನೋಡಿದಾಗ ಖಂಡಿತವಾಗಿ ಕಾಣುತ್ತದೆ. ಅಜ್ಞಾನದಿಂದ ಇಲ್ಲ ಎಂದು ನಾಸ್ತಿಕನಂತೆ ವರ್ತಿಸಿದರೆ ಸತ್ಯಕ್ಕೆ ಯಾವ ನಷ್ಟವೂ ಇಲ್ಲ. ವಿಜ್ಞಾನವು ಸತ್ಯದ ಸೋದರನಂತೆ ! ಜ್ಞಾನವೃಕ್ಷದ ಒಂದು ಶಾಖೆ ! ಅದೂ ಜ್ಞಾನವೇ ಅಲ್ಲವೇ ! ಸತ್ಯವನ್ನು ಹೇಳುತ್ತದೆಯಲ್ಲವೇ ? ಏಕೆಂದರೆ ಅದು ಸತ್ಯವನ್ನೇ ಹೇಳುತ್ತದೆ ಮತ್ತು ಪುಷ್ಠೀಕರಿಸುತ್ತದೆ. ಅಂತಹಾ ಸುಜ್ಞಾನದಿಂದಲೇ ಮೋಕ್ಷಪ್ರಾಪ್ತಿಯಾಗುತ್ತದೆ ಕಣಯ್ಯ ಗೆಳೆಯ. ಆದರೆ ಅಲ್ಪಜ್ಞಾನಿಯು ಅತಿಬುದ್ಧಿವಂತನಂತೆ ವರ್ತಿಸಿ , ಅಹಂಕಾರಿಯಾಗಿ ಸತ್ಯವನ್ನು ಕ್ಷುಲ್ಲಕವೆಂಬಂತೆ ಮನಬಂದ ರೀತಿಯಲ್ಲಿ ನುಡಿದು ಜರಿದರೆ ಸತ್ಯಕ್ಕೆ ನಷ್ಟವೇನೂ ಇಲ್ಲ. ಅದೇನೋ ಅನ್ನುವರಲ್ಲ ಆನೆಯನ್ನು ಕಂಡು ನಾಯಿ ಬೊಗುಳಿದರೆ ಆನೆಗೆ ಯಾವ ನಷ್ಟವೂ ಇಲ್ಲ ! ಅಲ್ಲವೇ ಗೆಳೆಯರೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021