ಆನೆಗಾನೆಯ ನೋವು
ಆಡಿಗಾಡಿನ ದುಃಖ
ಆನೆಯೇನಾಡೇನು
ವಿಧಿಗಾರು ಲೆಕ್ಕ ?
ನರನಾಗಿ ಜನಿಸಲೇನ್ !
ಕನಿಕರಿಸಿ ಬಾಳದಿರೆ
ಮಾನದಾ ಮಾತೇಕೊ
ಜಾಣಮೂರ್ಖ //
ಇದು ಈ ಜಗತ್ತಿನ ಒಂದು ದೊಡ್ಡ ವಿಸ್ಮಯ ! ವೈಚಿತ್ರ್ಯ ! ವಿಪರ್ಯಾಸ ! ದುರಂತ ! ಎಲ್ಲವೂ ! ನೀವು ಹೇಗೆ ಬೇಕಾದರೂ ಅರ್ಥೈಸಿ. ಈಗ ನೀವೇ ನೋಡಿ. ಆನೆಗೆ ಆನೆಯದೇ ದುಃಖವಾದರೆ. ಆಡಿಗೆ ಅದರದ್ದೇ ನೋವಿರುತ್ತೆ. ಅಂದರೆ ನೋವು ಯಾರನ್ನೂ ಬಿಟ್ಟಿಲ್ಲ. ವಿಧಿಗೆ ಯಾರೂ ಲೆಕ್ಕ ಅಲ್ಲ !! ಮನುಷ್ಯನಾಗಿ ಹುಟ್ಟಿ ಇನ್ನೊಬ್ಬರ ನೋವಿನೊಡನೆ ಆಟವಾಡಿದರೆ ಅದು ಮನುಷ್ಯತ್ವವೇನು ? ಮನುಷ್ಯನಾಗಿ ಹುಟ್ಟಿದರೆ ಮುಗಿಯಲಿಲ್ಲ ! ಮನುಷ್ಯನಾಗಿ ಬಾಳುವುದನ್ನು ಕಲಿಯಬೇಕು. ನರನಾಗಿ ಹುಟ್ಟಿ ಕಷ್ಟದಲ್ಲಿರುವವರನ್ನು ಕಂಡು ಕನಿಕರಿಸಿ ಬಾಳದಿದ್ದರೆ ಬೆಂಕಿಯಿಡಿ ಈ ಬಾಳಿಗೆ ! ಈ ಜನ್ಮಕ್ಕೆ ! ಪ್ರಯೋಜನವಿಲ್ಲದ ಮೇಲೆ ಮಾನ ಮರ್ಯಾದೆಗಳ ಮಾತೇಕೆ ? ಘನತೆಯಿಲ್ಲದ ಮೇಲೆ ಅದರ ಮಾತೇಕೆ !? ನೋವು ಹೆಪ್ಪುಗಟ್ಟಿ ಬಾಳು ಕೊನೆಯಾಗುವ ಮುನ್ನ ಏಳಿ ! ಎಚ್ಚೆತ್ತು ಬದುಕನ್ನು ಸಾರ್ಥಕಪಡಿಸಿಕೊಳ್ಳಿ. ವಿಧಿಯ ಹೊಡೆತದ ಎದಿರು ಎಲ್ಲರೂ ಕುಬ್ಜರೇ ! ಎದೆಯುಬ್ಬಿಸಿ ಅಹಂಕಾರದಿಂದ ಹೂಂಕರಿಸಿದವರೆಲ್ಲರೂ ವಿಧಿಯೆದಿರು ಮಣ್ಣಲ್ಲಿ ಮಣ್ಣಾಗಿ ಹೋದರು ! ಇನ್ನು ನಾವೆಲ್ಲಾ ಯಾವ ಲೆಕ್ಕ ! ಅಲ್ಲವೇ ಸ್ನೇಹಿತರೇ !!
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021