ಮಲಿನಗನ್ನಡಿಯೊಳಗೆ
ಮುಖವೆಂತು ಕಾಣ್ವುದೈ ?
ಕನ್ನಡಿಯನೊಡೆಯುವುದು
ಪರಿಹಾರವೇನು ?
ಮಲಿನವರಿವಿನ ಮುಕುರ
ಮೆಂತು ನೋಳ್ಪೆಯೊ ನಿನ್ನ !?
ತೊಳೆ ಕಾಣ್ವ ದೇವ ದಿಟ
ಜಾಣಮೂರ್ಖ //
ಈಗ ನೀವೇ ನೋಡಿ ! ನಿಮ್ಮ ಮುಖವನ್ನು ನೋಡಿಕೊಳ್ಳೋ ಕನ್ನಡಿಯೇ ಕೊಳೆಯಾಗಿದ್ದರೆ ನಿಮ್ಮ ಮುಖ ಸ್ಪಷ್ಟವಾಗಿ ಹೇಗೆ ತಾನೇ ಕಂಡೀತು ? ನನ್ನ ಮುಖ ಸರಿಯಾಗಿ ಕಾಣುತ್ತಿಲ್ಲ ಅಂತ ಕನ್ನಡಿಯನ್ನೇ ಒಡೆದು ಹಾಕುವುದು ಅದಕ್ಕೆ ಪರಿಹಾರವೇನಯ್ಯಾ ಗೆಳೆಯಾ !? ಕನ್ನಡಿಯನ್ನು ಸ್ವಚ್ಛಗೊಳಿಸಿದರಾಯ್ತು ! ಆಗ ಎಲ್ಲವೂ ಸುಸ್ಪಷ್ಟ ! ಹಾಗೆಯೇ ನಮ್ಮ ಅಂತರಂಗದ ಅರಿವಿನ ಕನ್ನಡಿಯೇ ಕೊಳೆಯಾಗಿದೆ. ಮತ್ತೆ ನಮ್ಮನ್ನು ನಾವು ನೋಡಿಕೊಳ್ಳುವುದೆಂತು ? ಆ ಅರಿವಿನ ಕನ್ನಡಿಯನ್ನು ಮೊದಲು ಶುದ್ಧಿಗೊಳಿಸಯ್ಯಾ ಗೆಳೆಯ. ಅಲ್ಲಿ ನಿಜವಾಗಿ ಭಗವಂತನೇ ಕಾಣುತ್ತಾನೆ. ಅರಿವಿನ ಮುಕುರವು ನಿರ್ಮಲವೂ, ನಿಶ್ಚಲವೂ ಆಗಿದ್ದಾಗ ಭಗವಂತನ ದರ್ಶನವು ಹೆಚ್ಚು ಸ್ಪಷ್ಟ ಮತ್ತು ನಿಶ್ಚಿತ ! ತಿಳಿಯಿತೇ ದೇವನು ಹೇಗಿರುತ್ತಾನೆ ಎಂದು !? ಖಂಡಿತವಾಗಿಯೂ ತಿಳಿಯುತ್ತದೆ. ನಮ್ಮ ಅರಿವಿನ ಕನ್ನಡಿಯನ್ನು ಸ್ವಚ್ಛಗೊಳಸಿದಾಗ ! ಅಲ್ಲವೇ ಗೆಳೆಯರೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021