ಬೆಲೆಯೆಂತದೀ ಮಣ್ಣಿಗೀ
ಗೀ ನೀರಿಗೀ ಗಾಳಿ
ಗೀ ಬೆಂಕಿಗಾಗಸಕೆ
ಕಲಿಗಾಲವಯ್ಯೊ !
ಪಂಚಭೂತಂಗಳಿಗು
ಬೆಲೆಯೆ ! ವಿಪರೀತಮಿದು !
ಕಲಿಯುಗದ ಮಹಿಮೆಯೇನ್ ?
ಜಾಣಮೂರ್ಖ //
ಕಲಿಯುಗದ ವಿಪರೀತಗಳನ್ನು ನಾವಿಂದು ಕಣ್ಣಾರೆ ಕಾಣುತ್ತಿದ್ದೇವೆ. ಇದು ಯಾವ ಮಟ್ಟದ್ದಾಗಿದೆ ಎಂದರೆ ಪಂಚಭೂತಗಳಿಗೂ ಬೆಲೆ ಕಟ್ಟುವ ಮಟ್ಟಿಗೆ ಬೆಳೆದಿದೆ. ಬೆಳೆಯುತ್ತಿದೆ. ಕೋಟ್ಯಂತರ ವರ್ಷಗಳಿಂದಲೂ ಬದುಕಿಗೆ ಆಸರೆಯಿತ್ತ ಭೂ ಮಾತೆಯು ಅಡಿ , ಚ.ಅಡಿಗೆ ಇಷ್ಟು ಸಾವಿರ ರೂಗಳೆಂಬಂತೆ ವಿಕ್ರಯಗೊಳ್ಳುತ್ತಿದ್ದಾಳೆ ( ಪಾಪ ಆ ತಾಯಿ ಇನ್ನೂ ಏನೇನು ತಾಳಬೇಕೋ ! ) ಹೋಗಲಿ ನೀರನ್ನೂ ಲೀಟರಿಗಿಷ್ಟು ಎಂದು ಮಾರುವ ಸ್ಥಿತಿಯನ್ನು ಕಂಡು ಬದುಕು ಏಕೆ ಹೀಗಾಯಿತು ಎನಿಸುತ್ತಿದೆ. ಹೋಗಲಿ ಗಾಳಿಯ ಕತೆಗೆ ಬಂದರೆ ಇಂದಿನ ಆಸ್ಪತ್ರೆಗಳಲ್ಲಿ ಅದನ್ನೂ ವಿಕ್ರಯಿಸುತ್ತಿರುವುದು ವಿಪರ್ಯಾಸ ! ಆದರೂ ಸತ್ಯ ! ತಿಂಗತಿಂಗಳಿಗೂ ಬೆಂಕಿಗೂ ಬೆಲೆ ಕಟ್ಟುವ ಶೋಚನೀಯ ಸ್ಥಿತಿ ನಮ್ಮದು ! ಇನ್ನು ಭೂಮಿಯ ಮೇಲಿನ ಆಕಾಶ ! ಎಂದರೆ ಅವಕಾಶ , ಸುಂದರ ವಾತಾವರಣ ! ಅದಕ್ಕೂ ಜಗಳ , ಕಿತ್ತಾಟ. ಓ ಗೆಳೆಯ ಕೋಟ್ಯಂತರ ವರ್ಷಗಳಿಂದ ಪ್ರಕೃತಿ ಮಾತೆಯು ನಮಗೆ ಎಲ್ಲವನ್ನೂ ಸಮೃದ್ಧವಾಗಿ ಕೊಟ್ಟಿದ್ದಾಳೆ. ಪಂಚಭೂತಗಳ ರೂಪದಲ್ಲಿ ಭಗವಂತನೇ ನಮ್ಮೊಡನಿದ್ದಾನೆ. ಈ ಸೃಷ್ಟಿಸತ್ಯವನ್ನರಿಯದೇ ನಾವು ಎಲ್ಲವನ್ನೂ ಮಲಿನ ಮಾಡಿಬಿಟ್ಟೆವು ! ಮೂರು ದಿನದ ಬಾಳಲ್ಲಿ ಪಂಚಭೂತಂಗಳಿಗೂ ಬೆಲೆಕಟ್ಟಿ ಮಾರಾಟಗೈವ ನಮ್ಮ ಈ ಬಗೆ ವಿಪರ್ಯಾಸವಲ್ಲವೇ ವಿಚಿತ್ರವಲ್ಲವೇ ಗೆಳೆಯರೇ !? ಶಾಂತವಾಗಿ ಯೋಚಿಸಿ. ಇಲ್ಲಿ ಎಲ್ಲರಿಗೂ ಅವರದ್ದೇ ಆದ ಬದುಕಿದೆ. ತಿನ್ನುವುದು ಒಂದು ತುತ್ತು ಅನ್ನಕ್ಕೆ ಈ ಪರಿಯ ಹೋರಾಟವೇ!? ಈ ಪರಿಯ ಸ್ಪರ್ಧೆಯೇ !? ಇದು ಸರಿಯೇ !? ಇದೇನು ಕಲಿಯುಗದ ಮಹಿಮೆ ? ಇನ್ನೂ ಏನೇನು ನೋಡಬೇಕಿದೆಯೋ ಈ ಕಣ್ಣುಗಳಿಂದ !? ನೋಡಿ ಕೃತಾರ್ಥರಾಗಬೇಕಿದೆಯೋ ನಾವು. ಅಲ್ಲವೇ ಗೆಳೆಯರೇ !
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021