ಅಂತರಂಗದ ಬನದೊ
ಳಾತ್ಮದಾ ಹೂವರಳೆ
ಚಿತ್ಕಳೆಯ ಸೌಗಂಧ
ಸತ್ವವೇ ಬೀಜ !
ಮನದ ಮಕರಂದ ಅನು
ಭಾವವಾಗುತ ಚಲ್ಲೆ
ಅನುಭವಿಪನೊಂದು ಹೂ
ಜಾಣಮೂರ್ಖ //
ಇದೊಂದು ಅತಿ ಸುಂದರ ಕಲ್ಪನೆ ! ಅನುಭವಿಸಿದವರು ಅನುಭಾವಿಗಳಾಗಿಬಿಡುತ್ತಾರೆ. ನಿಮ್ಮ ಅಂತರಂಗವೇ ಒಂದು ಸುಂದರ ಬನ ! ಅದರಲ್ಲಿ ಆತ್ಮವೆಂಬ ಹೂವು ಅರಳಿದೆ ! ಆಗ ಮೂಡುವ ಚಿತ್ಕಳೆ ಇದೆಯಲ್ಲಾ ! ಅದರಿಂದ ಹೊಮ್ಮುತ್ತದೆ ದಿವ್ಯ ಸೌಗಂಧ ! ಅದರ ಸತ್ವವೆಂದರೆ ಆಂತರ್ಯದ ಬೀಜ. ಸಾವಿರ ಸಾವಿರ ಹೂಗಳನ್ನು ಸೃಷ್ಟಿಸೋ ಶಕ್ತಿ!
ಮನಸ್ಸೆಂಬ ಮಕರಂದ ! ಅಬ್ಬಾ ! ಇದು ಅನುಭಾವ ರಸವಾಗಿ ಚಲ್ಲಲು ಇದರ ಸಂಪರ್ಕಕ್ಕೆ ಬರುವ ಪ್ರತಿಯೊಬ್ಬರೂ ಹೂವಾಗಿ ಅರಳುತ್ತಾರೆ ! ಮತ್ತದೇ ಚಿತ್ಕಳೆ ! ಮತ್ತೆ ಸೌಗಂಧ , ಸೌರಭ ! ಮತ್ತೆ ಸತ್ವದ ಬೀಜ ! ಮತ್ತದೇ ಮಕರಂದ ! ಎಲ್ಲರ ಬದುಕೂ ಸಹ ಹೀಗೆ ಹೂವಾಗಿ ಅರಳಿದರೆ ಬಾಳ ಹೂದೋಟ ನಂದನವನವಾಗಿ ಅರಳುತ್ತದೆ. ಸಗ್ಗವೇ ಧರೆಗಿಳಿಯುತ್ತದೆ. ಮತ್ತೆ ಆ ದೇವನೂ ಸಹ ಸುಂದರ ಸತ್ವಯುತ ಚಿತ್ಕಳೆಯನ್ನು ಪಡೆದು ಅನುಭವಿಸಿ ಧನ್ಯನಾಗಲು ಇಳೆಗೆ ಇಳಿದು ಓಡೋಡಿ ಬರುತ್ತಾನೆ. ಈ ಬಾಳ ನಂದನದಲ್ಲಿ ತಾನೂ ಒಂದಾಗಿ ಹೂವಾಗಿಬಿಡುತ್ತಾನೆ . ಎಲ್ಲರ ಬದುಕೂ ಸಹ ಹೀಗೆ ಹೂವಾಗಿ ಅರಳಿದೊಡೆ ಎಷ್ಟು ಚಂದ ಅಲ್ಲವೇ ಗೆಳೆಯರೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021