ಧರಣಿಗೊಡೆಯನ ಪದವಿ
ಬರಿದೆ ಬಯಸಿದೊಡೆಂತು
ಗುರಿಯನರಿಯದೆ ಬರಿದೆ
ಬಯಸಲೇಂ ಘನವೆ ?
ಬೆರಳೈದು ಸಮವಿರ್ದೊ
ಡೆಂತು ಬಿಗಿ ಬಂತೀತು ?
ಮಿತಿಯರಿತು ಬಯಸೇಳು
ಜಾಣಮೂರ್ಖ //
ಎಲ್ಲರೂ ರಾಜರಾದರೆ ರಾಜ್ಯವಾಳುವರಾರು ? ಅದಕ್ಕೂ ಅರ್ಹತೆ ಬೇಕಲ್ಲವೇ ? ಆಸೆ ಎಲ್ಲರಿಗೂ ಇರುತ್ತದೆಯಾದರೂ ಬರೀ ಬಯಸಿದರೆ ಸಾಧ್ಯವಿಲ್ಲ. ಅದಕ್ಕೆ ತಕ್ಕ ನೈಪುಣ್ಯತೆಯೂ ಬೇಕು. ಯೋಗ್ಯತೆಯರಿಯದ ದೊರೆತನವೂ ರೋಗವರಿಯದ ವೈದ್ಯನೂ ಒಂದೇ ಎಂಬ ಮಾತಿದೆ. ಒಂದು ಪದವಿ ಬೇಕೆಂದರೆ ಅದರ ಗುರಿ ಮತ್ತು ಉದ್ದೇಶಗಳು ಏನೆಂಬುದನ್ನು ಅರಿತಿರಬೇಕು. ಸಾಧಕರಾಗಬೇಕು. ಅದು ಕೆಲವರಿಗೆ ಮಾತ್ರ ಸಾಧ್ಯ. ಪದವೀ ಪೂರ್ವ ಪುಣ್ಯಾನಾಂ ಎನ್ನುವರಲ್ಲಾ ಹಾಗೆ. ಐದೂ ಬೆರಳುಗಳೂ ಒಂದೇ ಸಮವಿರುವವೇನು ? ಒಂದುವೇಳೆ ಸಮವಿದ್ದರೆ ಒಂದು ವಸ್ತುವನ್ನು ಬಿಗಿಯಾಗಿ ಹಿಡಿಯಲಾದೀತೆ ? ಅದಕ್ಕೇನೇ ಜಗತ್ತೂ ಸಹ ಘನತರವಾಗಿ ಸಾಗಲೂ ಸಾಮರ್ಥ್ಯಕ್ಕನುಗುಣವಾಗಿ ವ್ಯವಸ್ಥೆ ರೂಪುಗೊಂಡಿದೆ. ಅದರಲ್ಲಿ ನಾವು ನಮ್ಮ ಮಿತಿಯನ್ನರಿತು ನಡೆಯಬೇಕು. ಇಲ್ಲದಿದ್ದರೆ ನೋವು, ನಿರಾಸೆಗಳು ನಿಶ್ಚಿತ. ಜಗದ ನಾಟಕರಂಗದಲ್ಲಿ ಒಬ್ಬೊಬ್ಬರಿಗೆ ಒಂದೊಂದು ಪಾತ್ರ ! ಆ ಪಾತ್ರವನ್ನಷ್ಟೇ ಅರ್ಥಪೂರ್ಣವಾಗಿ ನಿರ್ವಹಿಸಬೇಕು. ಪದೋನ್ನತಿಗಳು ತಾನಾಗೇ ಬರುತ್ತವೆ, ಚಿಂತೆ ಬೇಡ. ಆಗಲೇ ಒಂದು ಸುಂದರ ಸಮಾಜದ ನಿರ್ಮಾಣ ಸಾಧ್ಯ ಅಲ್ಲವೇ ಗೆಳೆಯರೇ ?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021