ಹೆಬ್ಬುಲಿಯು ತಾನೆಂದು
ಅಬ್ಬರಿಸಿ ಬೊಬ್ಬಿರಿದು
ಕೊಬ್ಬಿನಿಂ ಕೂಗೆ ತಾ
ತಬ್ಬುವುದೆ ಬೇಂಟೆ !?
ಹಬ್ಬದೂಟವೆ ಇರಲಿ
ಕೊಬ್ಬು ತಾ ದಣಿಯದಿರೆ
ಮಬ್ಬುದುವೆ ಬಾಳ್ಗೆ ಕಾಣ್
ಜಾಣಮೂರ್ಖ //
ದೇಹದಂಡನೆಯಿರದೆ ಕೂತು ತಿಂದರೆ ಆಹಾರದಲ್ಲಿ ರುಚಿ ಬರುವುದೇನು ? ದೇಹವನ್ನು ದಣಿಸಬೇಕು, ದಂಡಿಸಬೇಕು, ಕಾಯಕವೇ ಬಾಳ ಉಸಿರಾಗಬೇಕಯ್ಯ ಗೆಳೆಯ. ಆಗ ತಿನ್ನುವ ಅನ್ನದಲ್ಲಿ ಬರುತ್ತದೆ ನಿಜವಾದ ರುಚಿ. ತಾನು ಹೆಬ್ಬುಲಿ ಅಂತ ಅಬ್ಬರಿಸಿ , ಬೊಬ್ಬಿರಿದರೆ, ಕೊಬ್ಬಿನಿಂದ ಕೂಗಿದ ಮಾತ್ರಕ್ಕೆ ಬೇಟೆಯು ಓಡೋಡಿ ಬಂದು ಬೀಳುವುದಿಲ್ಲ ಅಲ್ಲವೇ !? ತಾನು ಪರಿಶ್ರಮ ಪಟ್ಟರೇನೇ ಹುಲಿಗೂ ಆಹಾರ. ನಾವು ಶ್ರೀಮಂತರೇ ಇರಬಹುದು ! ಕೂತು ತಿಂದರೆಂತು ? ಬದುಕಿನಲ್ಲಿ ಅದು ರೀತಿಯ ಮಂಕಿಗೆ , ಮಬ್ಬಿಗೆ ಕಾರಣವಾಗುತ್ತದೆ. ನಮ್ಮ ಹೃದಯವು ಕಾಯಕ ತತ್ತ್ವವನ್ನು ಸಾರುವ, ಸಾರುತ್ತಿರುವ ಒಂದು ಸುಂದರ ದೃಷ್ಟಾಂತ. ಅದರ ಬಡಿತ ನಿಲ್ಲುವುದೇ ಇಲ್ಲ. ನಿಂತರೆ ಮುಗಿಯಿತು ! ದುಡಿಮೆಯೇ ಭಗವಂತನ ಪೂಜೆ. ಅದರಿಂದ ಬಂದ ಫಲವನ್ನು ಪ್ರಸಾದವೆಂಬಂತೆ ಉಂಡು ತೃಪ್ತಿಯಿಂದ ಬದುಕಬೇಕು. ಆಗಲೇ ತಿನ್ನುವ ಆಹಾರಕ್ಕೊಂದು ರುಚಿ ! ಅಲ್ಲವೇ ಗೆಳೆಯರೇ ?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021