ಹಣದ ಬೇಂಟೆಯಲಿಂದು
ಗುಣವ ಮರೆತಿಹರಯ್ಯೊ !
ತೃಪ್ತಿಗಾಣದು ಮನವು
ಬೇಕು ಬೇಕೆಂದು !
ನಾಳೆ ಯಾರದೊ ಏನೊ
ತಿಳಿದವರು ಯಾರಿಲ್ಲಿ
ಒಡೆತನದ ಬೆಮೆಯ ಬಿಡು
ಜಾಣಮೂರ್ಖ //
ಇಂದು ಎಲ್ಲರೂ ಹಣದ ಬೇಟೆಯಲ್ಲಿರುವವರೇ ! ಪ್ರಮಾದವೇನೆಂದರೆ ಎಲ್ಲರೂ ಗುಣವನ್ನೇ ಮರೆಯುತ್ತಿರುವುದು ! ಎಷ್ಟು ಸಂಪಾದಿಸಿದರೂ ಸಾಕು ಎನ್ನುವುದೇ ಇಲ್ಲ. ತೃಪ್ತಿಗಾಣದು ಏಕೋ ಈ ಮನಸ್ಸು. ನಾಳೆಗೆ , ನಾಡಿದ್ದಿಗೆ , ತಿಂಗಳಿಗೆ ಎಂದು ತಲೆಮಾರಿಗಾಗುವಷ್ಟು ಸಂಗ್ರಹಿ ಬಿಡುತ್ತೇವೆ. ಮಿತಿಯರಿತು ಸಂಗ್ರಹಿಸಿದರೆ ಚಿಂತೆಯಿಲ್ಲ ! ಆಸೆಗೆ ಮಿತಿಯೇ ಇಲ್ಲ. ಎಲ್ಲಕ್ಕೂ ನಾನೇ ಒಡೆಯನು , ಎಲ್ಲವೂ ತನ್ನದಾಗಬೇಕೆಂಬುದು ಎಂತಹಾ ಭ್ರಮೆ ! ನಾಳೆಯೆಂಬುದು ಖಂಡಿತವಾಗಿಯೂ ನನ್ನದಲ್ಲ! ಅಂತೆಯೇ ನಾಳೆ ಏನಾಗುವುದೆಂಬುದನ್ನು ತಿಳಿದವರೂ ಸಹ ಯಾರೂ ಇಲ್ಲ. ಒಂದಂತೂ ನಿಶ್ಚಿತ ನಾವು ಏನೇ ಆಗಿರಲಿ. ತತ್ಕಾಲದ ಒಡೆಯರಷ್ಟೆ ! ಶಾಶ್ವತ ಒಡೆಯರಂತೂ ಅಲ್ಲವೇ ಅಲ್ಲ. ನನ್ನದೆಂಬುದು ಒಂದು ಭ್ರಮೆ ! ಇದನ್ನರಿತು ವ್ಯಾಮೋಹವನ್ನು ತೊರೆದು ನಿಜವಾಗಿ ಏನನ್ನು ಸಂಪಾದಿಸಬೇಕು ? ಯಾವುದರ ಒಡೆಯರಾದರೆ ಜನ್ಮ ಸಾರ್ಥಕವಾಗುತ್ತದೆ ! ಎಂಬುದರ ಕಡೆಗೆ ಮನಸ್ಸನ್ನು ಕೇಂದ್ರೀಕರಿಸೋಣ. ಬದುಕನ್ನು ಶಾಂತಿಯಿಂದ ಕಳೆಯೋಣ. ಅಲ್ಲವೇ ಗೆಳೆಯರೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021