ಬಾಳಿಲ್ಲದಾ ಸುಳ್ಳ
ಮೇಲೇಕೆ ಈ ಪ್ರೀತಿ ?
ಸಾವಿಲ್ಲದಾ ಸತ್ಯ
ಕಿಲ್ಲದಾ ಸೆಳೆತ ?
ಸುಳ್ಳ ತೆರೆಗಳು ತುಂಬಿ
ಬಾಳ ವಾಹಿನಿ ಮೊರೆಯೆ
ಸತ್ಯ ಶಾಂತಿಯೊಳಿಹುದೊ
ಜಾಣಮೂರ್ಖ //
ಸುಳ್ಳಿಗೆ ಬದುಕೇ ಇಲ್ಲ. ಆದರೂ ಅದರ ಮೇಲೆ ಅದೆಂತಹಾ ಪ್ರೀತಿ ? ಸತ್ಯ ಸುಂದರ ! ಸಾಕ್ಷಾತ್ ಶಿವಸ್ವರೂಪಿಯಾದರೂ ಅತ್ತ ಕಡೆ ಯಾರೂ ಬರರು. ಅದರ ಕಡೆ ಕಿಂಚಿತ್ ಸೆಳೆತವೂ ಇಲ್ಲ ! ಗೀತೆಯ ಪ್ರಮಾಣದೊಂದಿಗೆ ಸುಳ್ಳು ಹೇಳುವುದಕ್ಕೆ ಏನೆನ್ನ ಬೇಕು !? ಈ ಬಾಳ ವಾಹಿನಿಯ ತುಂಬ ಸುಳ್ಳಿನ ಪ್ರವಾಹವೇ ಭೋರ್ಗರೆದು ತನ್ನ ಹರವನ್ನು ಚಾಚಿದೆ. ಸತ್ಯವು ಶಾಂತಿಯೊಳಿದೆ. ಬೂದಿ ಮುಚ್ಚಿದ ಕೆಂಡದಂತೆ ! ಈ ಬಾಳ ನಾಟಕವನ್ನು ಸುಮ್ಮನೆ ನೋಡುತ್ತಿದೆ. ಏರಿದುದು ಇಳಿಯಲೇ ಬೇಕು ! ತೀರ ಉದ್ದವಾದದ್ದು ಬಗ್ಗಲೇ ಬೇಕು ! ಅಲ್ಲವೇ ! ಮಿಥ್ಯವು ಈ ಸತ್ಯವನ್ನರಿಯದು. ಪ್ರಾಜ್ಞರೂ , ಚಿಂತನಶೀಲರೂ ಆದ ಮಾನವರು ಈ ಸತ್ಯವನ್ನರಿಯಬೇಕಲ್ಲವೇ ?
ಮಿಥ್ಯಪ್ರಪಂಚದಾ
ತತ್ತ್ವವ ತಿಳಿಯದೇ
ಕತ್ತೆಯ ತೆರದಿ ಬದುಕಲೇನು ಫಲ?
ಸತ್ಯ ಸ್ವರೂಪನ
ಸಾಕ್ಷಾತ್ಕಾರನಾ
ನಿತ್ಯ ಧ್ಯಾನ ಮಾಡಲಾಗ ಫಲ !
ಎಂದಿದ್ದಾರೆ ಸಂತರು !
ಇಂದಿಗೆ ಈ ಮಾತು ಎಷ್ಟು ಪ್ರಸ್ತುತ ಅಲ್ಲವೇ ಗೆಳೆಯರೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021