ಅರಿವುದನು ಅರಿ ಮತ್ತೆ
ಮರೆವುದನು ಮರೆ ಮನವೆ
ಅರಿನಿನ್ನ ಕೆಡುಕುಗಳ
ನೆನೆ ಲೋಗರೊಳಿತ !
ಮರೆ ಗೈದ ಒಳಿತ ಮೇಣ್
ಲೋಗರನ್ಯಾಯ ಮರೆ
ಶುದ್ಧತೆಯ ಸೂತ್ರಮಿದು
ಜಾಣಮೂರ್ಖ //
ಓ ಗೆಳೆಯಾ , ಭಗವಂತ ಕೊಟ್ಟ ಈ ಬದುಕಿನಲ್ಲಿ ನಾವು ಕೆಲವನ್ನು ಅರಿಯಬೇಕು ಮತ್ತೆ ಕೆಲವನ್ನು ಮರೆಯಬೇಕು. ನಾವು ಗೈದ ಕೆಡುಕುಗಳನ್ನು ಅರಿಯಬೇಕು. ಅರಿತು ಮತ್ತೆ ಆ ತಪ್ಪು ಘಟಿಸದಂತೆ ಎಚ್ಚರ ವಹಿಸಬೇಕು. ಮತ್ತೆ ಇತರರ ಒಳಿತುಗಳನ್ನು ನೋಡಿ, ಅರಿತು ಅಳವಡಿಸಿಕೊಳ್ಳಬೇಕು. ಅವರಿಂದಾಗೋ ತಪ್ಪುಗಳನ್ನು ಲೆಕ್ಕ ಹಾಕುತ್ತಾ ಕುಳಿತರೆ ನಷ್ಟ ಯಾರಿಗೆ !? ಯಾರಾದರೂ ಮನೆಯಲ್ಲಿ ಕಸವನ್ನು ಇಟ್ಟುಕೊಳ್ಳುವರೇನು ? ಅಂತೆಯೇ ಕಸದೋಪಾದಿಯಲ್ಲಿರುವ ಚಿಂತನೆಗಳನ್ನು ಬಿಸುಟು ಮನವ ಶುದ್ಧಿಗೈಯಬೇಕು ತಾನೆ ?! ಹಾಗೆಯೇ ನಾವು ಗೈದ ಒಳ್ಳೆಯ ಕೆಲಸಗಳನ್ನು ಮರೆತು ನಿರ್ಲಿಪ್ತರಾಗೋಣ. ಸೂರ್ಯ ಚಂದ್ರಾದಿ ದೇವತೆಗಳಾಗಲಿ ! ಪಂಚಭೂತಗಳಾಗಲಿ ! ಸೃಷ್ಟಿ , ಸ್ಥಿತಿ ,ಲಯಕಾರಕರುಗಳು ತಾವು ಜಗತ್ತಿಗೆ ಮಾಡುತ್ತಿರುವ ಉಪಕಾರವನ್ನು ಎಲ್ಲಿಯಾದರೂ ಹೇಳಿ, ಡಂಗುರ ಸಾರುತ್ತಿರುವರೇನು ? ಇಲ್ಲ. ಅಲ್ಲವೇ ? ಮತ್ತೆ ನಾವೇಕೆ ಹೇಳಿಕೊಳ್ಳಬೇಕು !? ಎಲ್ಲರ, ಎಲ್ಲದರ ಒಳಿತಿಗೆ ನಮ್ಮ ಉಪಕೃತಿಯು ಮೌನವಾಗಿ ನಡೆಯುತ್ತಿದ್ದರೆ ಅದಕ್ಕಿಂತ ಧರ್ಮ ಯಾವುದಿದೆ !? ಬೇರೆಲ್ಲವೂ ಬಂದು ಹೋಗುತ್ತವೆ ಅಷ್ಟೆ. ಆದರೆ ಇದೇ ಅಂತರಂಗ ಶುದ್ಧತೆಯ ಸೂತ್ರ ! ಅಲ್ಲವೇ ಗೆಳೆಯರೇ ?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021