ಹೂವು ಕಾಣ್ವುದುಮದರ
ಗಂಧ ಕಂಡೀತೇನು ?
ಹಣ್ಣು ಕಾಣ್ವುದುಮದರ
ಸವಿಯು ಕಾಣುವುದೆ ?
ಜಗವು ಕಂಡೊಡೆಯಾಯ್ತೆ
ಭಾವ ಕಾಣ್ವುದೆ ಪೇಳು
ಅಂತೆ ದೇಹದೊಳಾತ್ಮ
ಜಾಣಮೂರ್ಖ //
ಈಗ ನೋಡಿ ಗೆಳೆಯರೇ ಇದೆಲ್ಲಾ ಜಗತ್ತಿನ ವಿಸ್ಮಯಗಳೆಂದರೆ ತಪ್ಪಾಗಲಾರದು. ಭೌತಿಕವಾದ ಹೂವು ನಮ್ಮ ಕಣ್ಣಿಗೆ ಕಾಣುತ್ತದೆಯಾದರೂ ಅದರ ಪರಿಮಳ ಮಾತ್ರ ಕಾಣುವುದಿಲ್ಲ. ಹಾಗೆಯೇ ಹಣ್ಣು ಕಣ್ಣಿಗೆ ಕಾಣುತ್ತದೆ. ಆದರೆ ಅದರ ಸವಿಯು ಕಾಣುವುದೇನು ? ಅಂತೆಯೇ ಎಲ್ಲರಿಗೂ ಭೌತಿಕ ಜಗತ್ತು ಗೋಚರಿಸುತ್ತದೆ. ಆದರೆ ಅದನ್ನು ನೋಡುವ ಅವರ ಮನಸ್ಸಿನಲ್ಲಿ ಏನು ನಡೆಯುತ್ತಿದೆ ಎಂಬುದು ಮಾತ್ರ ಕಾಣದು ! ಕೇಳದು ! ಹಾಗಿಯೇ ಭೌತಿಕವಾದದು ಈ ಶರೀರ ಕಾಣುತ್ತದೆ. ಆದರೆ ಕಾಣದಂತಿದ್ದು ಚೈತನ್ಯದಾಯಕವಾಗಿರುವ ಶಕ್ತಿಯೇ ಆತ್ಮ. ಅದು ಮಾತ್ರ ಕಾಣದು. ಈ ಕಾಣದಂತೆ ಕೆಲಸ ಮಾಡುತ್ತಿರುವ ಸುಪ್ತ ಚೈತನ್ಯ ಯಾವುದಿರಬಹುದು? ಏನಿದರ ರಹಸ್ಯ ? ಇವನ್ನೆಲ್ಲಾ ಅನುಭವದಿಂದ ಮಾತ್ರ ಗುರುತಿಸಲು ಸಾಧ್ಯ. ಕೆಲವರು ಆಸ್ವಾದಿಸಿ ಆನಂದಿಸಿದರೆ, ಕೆಲವರು ಗಮನಿಸಿ ಸುಮ್ಮನಾಗುತ್ತಾರೆ ಮತ್ತೆ ಕೆಲವರಂತೂ ತಲೆಕೆಡಿಸಿಕೊಳ್ಳುವುದೇ ಇಲ್ಲ. ಆದರೆ ಕೆಲವರು ಮಾತ್ರ ಆಸ್ವಾದಿಸಿ, ಅನುಭವಿಸಿ , ಆನಂದಿಸಿ , ಅನುಭಾವಿಗಳಾಗಿ ಮೋಕ್ಷಕ್ಕೆ ಭಾಜನರಾಗುತ್ತಾರೆ. ನಂತರದ ಸ್ಥಿತಿ !! ರಹಸ್ಯ ! ಪರಮ ರಹಸ್ಯ ! ಬನ್ನಿ ಗೆಳೆಯರೇ ಇದೆಲ್ಲದರ ನಡೆಗೆ ಕಾರಣವಾದ ಆ ದಿವ್ಯ ಶಕ್ತಿಗೆ ಭಕ್ತಿಯಿಂದ ನಮಿಸಿ ಶರಣೆನ್ನೋಣ !
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021