ಮರುಭೂಮಿ ಬರಹದೊಲು
ಚಿರಮಲ್ಲಮೀ ಬಾಳು
ಬಿರುಗಾಳಿ ಮೊರೆವುದೈ
ಚರಮಗೀತೆಯನು !
ಮರಳಿನಲಿ ಮನೆಯೇನು ?
ಮರುಳೆ ಇದು ತರವೇನು ?
ಧರಣಿಗೊಡೆಯನ ಭಜಿಸೊ
ಜಾಣಮೂರ್ಖ//
ಓ , ಗೆಳೆಯ ! ನಮ್ಮ ಬದುಕು ಹೇಗಿದೆ ಎಂದರೆ ಮರಳುಗಾಡಿನಲ್ಲಿ , ಮರಳಿನಲ್ಲಿ ಮನೆಯೊಂದನ್ನು ಕಟ್ಟಿ ಆಶಾ ಗೋಪುರವನ್ನು ಕಟ್ಟಿ ಬದುಕಲೆಳೆಸುವಂತಿದೆ. ಆದರೆ ಮರಳುಗಾಡಿನ ಮರಳಿನ ಮನೆ ಚಿರವೆ !? ಬಿರುಗಾಳಿಯ ಮೋರೆತ ಚರಮಗೀತೆಯಂತೆ ಬಂದು ಅದನ್ನು ಕೆಡವಿ ಮರಳಿನಲ್ಲಿ ಮರಳಾಗಿಸಿಬಿಡುತ್ತದೆ. ಮನೆ ಯಾವುದು ! ಮರಳು ಯಾವುದು ಒಂದೂ ತಿಳಿಯದಂತಾಗುತ್ತದಲ್ಲವೇ ! ಹಾಗೇ ನಮ್ಮ ಬದುಕೂ ಕೂಡ. ಪಂಚಭೂತಗಳಿಂದಾದ ಶರೀರ ! ಕಾಲ ಪುರುಷನ ಹೊಡೆತಕ್ಕೆ ಕ್ಷಣಕ್ಷಣಕ್ಕೂ ತುತ್ತಾಗುತ್ತಿರುವ ಪ್ರಪಂಚ ! ಶರೀರವು ಕೊನೆಗೆ ಪಂಚಭೂತಗಳಲ್ಲೇ ಸರಿ ಹೋಗುವ ಸತ್ಯ ಯಾರಿಗೆ ಗೊತ್ತಿಲ್ಲ !? ಇದರ ನಡುವೆ ಶಾಶ್ವತ ಸಂತೋಷ ಮತ್ತು ಸುಖವೀವ ಬದುಕನ್ನು ಬಿಟ್ಟು ಸ್ವಾರ್ಥ ಲೋಭಾದಿ ಮಾಯಾಪಾಶದಲ್ಲಿ ಬಿದ್ದ ಬದುಕು ಮರಳುಗಾಡಿನಲ್ಲಿನ ಮರಳ ಮನೆಯಲ್ಲದೇ ಮತ್ತೇನು !? ಇದು ಸರಿಯೇ ? ನಾವು ಮಾಡುತ್ತಿರುವುದೇನು ? ನೋವಿನ ಬಾಣಗಳು ತಾಗುವ ಗುರಿ ಹಲಗೆಯೇನು ಈ ಹೃದಯ !? ಇದರಿಂದ ಚಣಚಣವೂ ನೊಂದು ಘಾಸಿಗೊಳ್ಳುವುದಕ್ಕಿಂತ ಇದು ಸಹಜ ಸತ್ಯವೆಂದರಿತು ಹೊರಗೆ ಬಾರಯ್ಯ ಗೆಳೆಯ. ಇಂತಹಾ ಸಹಜ ಸತ್ಯದ ಅರಿವಿನ ಬೆಳಕು ಜಗತ್ತಿನೆಲ್ಲೆಡೆ ಹರಡಿ , ಜಗದೊಡೆಯ ಭಗವಂತನ ದಿವ್ಯ ಸ್ಮರಣೆಗೈಯ್ಯುತ್ತಾ ಇನ್ನಾದರೂ ಜಾಗೃತರಾಗೋಣ.ಇದು ಇಹಕ್ಕೂ ಪರಕ್ಕೂ ಸಾಧನವು ! ಅಲ್ಲವೇ ಗೆಳೆಯರೇ !!?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021