ಕಸಪೊರಕೆ ಕೆರವೆಲ್ಲ
ಕಾಯಕವ ಪೂರೈಸಿ
ತಮ್ಮೆಡೆಗೆ ತಾವೈದು
ಮೌನದೊಳಗಿಹವು !
ನಿಷ್ಠೆಯಿಂ ತವಸಿ ತಾ
ವೆಂಬ ಪಾಠವು ಜಗಕೆ
ಋಣದೊಳಿರ್ಪುದೆ ಧರ್ಮ
ಜಾಣಮೂರ್ಖ //
ಪೊರಕೆಯಿಂದ ಕಸ ಗುಡಿಸಿ ಅದನ್ನು ಮೂಲೆಯೊಳಗೆ ಅಡಗಿಸಿ ಬಿಡುತ್ತೇವೆ. ಹಾಗೇ ಚಪ್ಪಲಿ ಧರಿಸಿ ಊರೆಲ್ಲ ತಿರುಗಾಡಿ ಬಂದು ಮೂಲೆಯಲ್ಲಿ ಬಿಟ್ಟು ನೆಮ್ಮದಿಯಿಂದಿರುತ್ತೇವೆ. ಅವುಗಳಾದರೋ ತಮ್ಮ ಕಾಯಕವನ್ನು ನಿಷ್ಠೆಯಿಂದ ಪೂರೈಸಿ ಮೌನವಾಗಿ ಮೂಲೆ ಸೇರಿಬಿಡುತ್ತವೆ. ಅದೆಂತಹಾ ನಿಷ್ಠೆ ! ಅದೆಂತಹಾ ಕಾಯಕ ತತ್ತ್ವವನ್ನು ಅವುಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿವೆ ಅವು ! ಮೌನವಾಗಿ ಶ್ರದ್ಧೆ , ನಿಷ್ಠೆ , ಕಾಯಕಗಳ ಮಹತ್ವವನ್ನು ಜಗತ್ತಿಗೆ ಸಾರುತ್ತಿವೆ ಅವು. ಸದಾ ನಾವು ಅವುಗಳಿಗೆ ಋಣಿಯಾಗಿರಬೇಕು . ಅದೇ ಧರ್ಮವು. ಏಕೆಂದರೆ ನಾವು ಅಡಿಗಡಿಗೂ ಅವುಗಳಿಂದ ಕಲಿಯುತ್ತಲೇ ಇದ್ದೇವೆ. ಎಂತಹಾ ಅದ್ಭುತ ಮತ್ತು ವಿಲಕ್ಷಣ ಕೆಲಸ ಮಾಡುತ್ತವೆ ಇವು ! ಶ್ರದ್ಧಾ ನಿಷ್ಠೆಗಳಿಂದ ಕಾಯಕವ ಗೈವವರೇ ನಿಜವಾದ ತಪಸ್ವಿಗಳು. ಇದರಲ್ಲೇ ಬದುಕಿನ ಆನಂದವು ಅಡಗಿದೆ. ಅಂತೆಯೇ ಬೇಡವಾದ ಕಸವನ್ನು ತೆಗೆದು ಒಗೆಯಬೇಕೆಂಬ ಪಾಠವನ್ನು ಪೊರಕೆಯೂ , ನಿಸ್ವಾರ್ಥತೆಯ ಪಾಠವನ್ನೂ ಕೆರವೂ ಎಷ್ಟು ಅದ್ಭುತವಾಗಿ ಕ್ಷಣಕ್ಷಣಕ್ಕೂ ನಮಗೆ ಹೇಳಿಕೊಡುತ್ತಿವೆ !? ಕಲಿಯುವ ಒಳ್ಳೆಯ ವಿದ್ಯಾರ್ಥಿಗಳು ನಾವಾಗಬೇಕಿದೆ ಅಷ್ಟೆ. ಅಲ್ಲವೇ ಗೆಳೆಯರೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021