ಸಗ್ಗವಿರಲೆದೆಯೊಳಗೆ
ಸಗ್ಗವೇ ಜಗವೆಲ್ಲ !
ನರಕವಿರೆ ನರಕವೈ
ನಾಕ ಬಹುದೆಂತು ?!
ಹೂವ ಪಿಡಿದರೆ ಹೂವು
ಮುಳ್ಳ ಪಿಡಿದರೆ ಮುಳ್ಳು
ಹೂ ಮುಳ್ಳ ತತ್ತ್ವ ಬಾಳ್
ಜಾಣಮೂರ್ಖ //
ಈಗ ಈ ವಿಚಾರ ಅದೆಷ್ಟು ಸತ್ಯ ನೋಡಿ ! ನಮ್ಮ ಹೃದಯದಲ್ಲಿ ಸ್ವರ್ಗ ಸದೃಶವಾದ ಭಾವನೆಗಳಿದ್ದರೆ ಜಗವೆಲ್ಲವೂ ಸ್ವರ್ಗದೋಪಾದಿಯಲ್ಲೇ ಕಾಣುತ್ತದೆ. ನರಕ ಸದೃಶವಾದ ಭಾವನೆಗಳಿದ್ದರೆ ನರಕವಾಗೇ ಕಾಣುತ್ತದೆ. ಒಳಿತಿದ್ದರೆ ಒಳಿತು , ಕೆಡುಕಿದ್ದರೆ ಕೆಡುಕು ಅಷ್ಟೆ. ನರಕ ಸದೃಶ ಭಾವನೆಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಸ್ವರ್ಗವನ್ನು ಬಯಸಿದರೆ ಹೇಗೆ ಬರುತ್ತದೆ ? ಅಲ್ಲವೇ ? ಅದೇನೋ ಎನ್ನುವರಲ್ಲ ಬೆಲ್ಲದ ಕಟ್ಟೆಯ ಕಟ್ಟಿ , ಬೇವಿನ ಬೀಜ ಬಿತ್ತಿದರೆ ಬಂದ ಬೆಳೆ ಕಹಿಯಲ್ಲದೇ ಸಿಹಿಯಾದೀತೆ ? ಒಂದು ಗುಲಾಬಿ ಹೂವಿನ ಗಿಡದಲ್ಲಿ ಹೂವೂ ಇದೆ. ಮುಳ್ಳೂ ಇದೆ. ಹೂವ ಹಿಡಿದರೆ ಹೂವು , ಮುಳ್ಳ ಹಿಡಿದರೆ ಮುಳ್ಳು ! ಹೂವಿನಂತಹಾ ಭಾವನೆಗಳನ್ನು ತಳೆದರೆ ಜಗತ್ತು ನಮ್ಮ ಪಾಲಿಗೆ ಹೂವಿನಂತಿರುತ್ತದೆ. ಮುಳ್ಳಿನಂತಹಾ ಪ್ರವೃತ್ತಿ ನಮ್ಮಲ್ಲಿದ್ದರೆ ಜಗತ್ತೂ ಸಹ ನಮ್ಮ ಪಾಲಿಗೆ ಮುಳ್ಳಿನಂತೆಯೇ ಆಗುತ್ತದೆ. ಬದುಕು ಈ ಹೂವು ಮತ್ತು ಮುಳ್ಳಿನ ತತ್ತ್ವದ ಆಧಾರದ ಮೇಲೆಯೇ ಇದೆ. ದೃಷ್ಟಿಯಂತೆ ಸೃಷ್ಟಿ ! ಅಲ್ಲವೇ ಗೆಳೆಯರೇ ?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021