ಬೆಳಗುವಾ ಸೊಡರಿರಲು
ಬೆಳಗು ಜಗವನು ಬಿಡದೆ
ಸುಡಲೇಕೆ ಬಳಸುವದ ?
ಬೆಳಗಲರಿಯದಲೆ ?
ನೂರು ಬರಿಸಂಗಳೊಳ್
ತೊಳಗಿ ಬೆಳಗುವುದೆ ಬಾಳ್
ಪಾಳ್ಗಯ್ಯೆ! ಕೇಡಾರ್ಗೆ ?
ಜಾಣಮೂರ್ಖ //
ಓ, ಗೆಳೆಯ ನಿನ್ನ ಕೈಲಿ ಬೆಳಗುತ್ತಿರೋ ಸುಂದರವಾದ ಒಂದು ಸೊಡರಿದೆ. ನಿನ್ನ ಮನೆಯನ್ನು ಬೆಳಗು. ನಿನ್ನ ಜಗತ್ತನ್ನೇ ಬೆಳಗು. ನಿನ್ನ ಬದುಕೂ ಸಾರ್ಥಕ. ಆ ಸೊಡರಿನ ಬದುಕೂ ಸಾರ್ಥಕ ! ಆದರೆ ಬೆಳಗುವ ರೀತಿಯನ್ನರಿಯದೆ ಆ ಸೊಡರನ್ನು ಜಗವ ಸುಡಲು ಬಳಸಿದರೆ ! ಯಾರಿಗೆ ಕೇಡು ? ನೀನೇ ಹೇಳಯ್ಯ ಗೆಳೆಯ ! ಅಂತೆಯೇ ಭಗವಂತ ನೂರು ವರ್ಷಗಳ ದೀರ್ಘ ಆಯುಷ್ಯವನ್ನು ನಮಗೆ ಕೊಟ್ಟು , ಜೊತೆಗೆ ಜಗವನ್ನು ಬೆಳಗಲು ದಿವ್ಯವಾದ ಜ್ಞಾನಜ್ಯೋತಿಯನ್ನೇ ಕರುಣಿಸಿದ. ಅದರ ಸಹಾಯದಿಂದ ಬದುಕ ಬೆಳಗೆಂದು ಹರಸಿದ. ಆದರೆ ನಾವು ಮಾಡುತ್ತಿರುವುದೇನು ? ಆ ಜ್ಞಾನದ ಬಲದಿಂದ ಅಜ್ಞಾನದ ಕೇಡ ಕಳೆದು ಬಾಳಬೇಕಾದ ನಾವೇ ಅಜ್ಞಾನಿಗಳಾಗಿ ಅಪೂರ್ವವಾದ ಈ ಜಗದ ಸೌಂದರ್ಯವನ್ನು ಹಾಳ್ಗೈದರೆ ಯಾರಿಗೆ ಹಾನಿ ನೀನೇ ಹೇಳಯ್ಯ ಗೆಳೆಯ !? ಈ ಸುಂದರ ಸೃಷ್ಟಿಯನ್ನು ಆಸ್ವಾದಿಸಿ, ಆನಂದದ ಅನುಭೂತಿಯನ್ನು ಪಡೆದು , ಅನುಭಾವಿಗಳಾಗಬೇಕು ನಾವು ! ಒಂದು ವೇಳೆ ಈ ಅಗಾಧ ಸೃಷ್ಟಿಯಲ್ಲಿ ಸೂರ್ಯನಿಲ್ಲದಿದ್ದರೆ ಈ ಕತ್ತಲೊಡಲಿನ ಬದುಕು ಹೇಗಿರುತ್ತಿತ್ತು ! ಕಲ್ಪಿಸಿಕೊಳ್ಳಯ್ಯ ! ಅಂತಹಾ ಸುಂದರ ಬದುಕನ್ನಿತ್ತ ಅಗಾಧ ಶಕ್ತಿಗೆ ಕೃತಜ್ಞತೆಯಿಂದ ಮಣಿದು ಬದುಕಬೇಕು ನಾವು. ಹಾಳ್ಗಯ್ಯಬಾರದು. ಅಲ್ಲವೇ ಗೆಳೆಯರೇ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021