ಬೆಸುಗೆಯೊಂದೊಂದರಲು
ಹೊಸೆದಿಹನು ಬೊಮ್ಮ ತಾ
ಕಸುವ ಕೊಡಲೀ ಬಾಳ್ಗೆ
ಹಸನುಗೊಳಿಸಲ್ಕೆ !
ಬುದ್ಧಿಗುಂ ಭಾವಕುಂ
ಬೆಸುಗೆ ಮರೆತನು ಏಕೊ !?
ಹೃದಯದಿಂ ಬೆಸೆ ಏಳು
ಜಾಣಮೂರ್ಖ //
ಈ ಸೃಷ್ಟಿಯಲ್ಲಿ ಎಲ್ಲವೂ ಒಂದಕ್ಕೊಂದು ಹೊಂದಿಕೊಂಡು ನಡೆಯುತ್ತಿವೆ. ಅದಕ್ಕೇ ಈ ಅನಂತ ಸೃಷ್ಟಿಯು ಸ್ವಲ್ಪವೂ ಏರುಪೇರಾಗದಂತೆ ನಡೆಯುತ್ತಿದೆ. ಈ ಬದುಕಿಗೊಂದು ಕಸುವು ಕೊಡಲು , ಶಕ್ತಿ ನೀಡಲು ಭಗವಂತನೇ ಹೊಂದಿಸಿದ ಬೆಸುಗೆ ಈ ಬಾಳ ಬೆಸುಗೆ. ಇದರಿಂದಲೇ ಎಲ್ಲರ ಬಾಳೂ ಸಹ ಹಸನಾಗಿದೆ. ಆದರೂ ಸ್ವಲ್ಪ ಅಸಮತೋಲನ , ಏರುಪೇರುಗಳನ್ನು ನೋಡುತ್ತಿದ್ದೇವೆ. ಅಲ್ಲವೇ ? ಏಕೆ ಹೀಗಾಯ್ತು ? ಭಗವಂತನು ಬುದ್ಧಿ ಹಾಗೂ ಭಾವಗಳನ್ನು ಬೆಸೆಯುವುದನ್ನೇ ಮರೆತುಬಿಟ್ಟಿದ್ದಾನೆಯೋ ! ಅಥವಾ ಈ ಬೆಸುಗೆಯು ಅತ್ಯಂತ ಸೂಕ್ಷ್ಮಬೆಸುಗೆಯಾದುದರಿಂದ ಅದರ ಎತ್ತರಕ್ಕೆ ನಾವು ಏರಲಾಗುತ್ತಿಲ್ಲವೋ ಏನೋ ತಿಳಿಯುತ್ತಿಲ್ಲ. ಅಖಿಲಾಂಡಕೋಟಿ ಬ್ರಹ್ಮಾಂಡ ನಾಯಕನಾದ ಅವನಿಗೆ ಬುದ್ಧಿ ಭಾವಗಳನ್ನು ಬೆಸೆಯುವುದೇನೂ ಕಷ್ಟವಲ್ಲ. ಆದರೆ ನಮ್ಮ ದೃಷ್ಟಿಕೋನ ಆ ನಿಟ್ಟಿನಲ್ಲಿ ಸಾಗುತ್ತಿಲ್ಲ ಅಷ್ಟೆ. ಓ ಗೆಳೆಯ ಬುದ್ಧಿಬಲ ಇರಲಿ. ಆದರೆ ಎಲ್ಲವನ್ನೂ ಬುದ್ಧಿಬಲದಿಂದಲೇ ನೋಡದೆ ಹೃದಯದಿಂದ ನೋಡಿದರೆ ಸುಂದರ. ಆಗ ಅಂತಃಕರಣದ ಸೌಂದರ್ಯ ಮತ್ತಷ್ಟು ಹೆಚ್ಚುತ್ತದೆ. ಬುದ್ಧಿಗೆ ಹೃದಯದ ಬೆಸುಗೆ ಇದ್ದರೆ ಜಗತ್ತು ರಾಮರಾಜ್ಯವೇ ಆದೀತು. ಏನಂತೀರಿ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021