ಜೀವವಾಹಿನಿ ತಾನು
ಕಾಲವಾಹಿನಿಯೊಡನೆ
ಮೋಕ್ಷಸಾಗರದೆಡಗೆ
ಸಾಗುವೆಡೆಯಲ್ಲಿ !
ಬರುವುವುಬ್ಬರವಿಳಿತ
ಶಾಂತಿಯಿಂ ಸಾರ್ ಮನವೆ
ಸಾಜಮಿದು ಜೀವನದಿ !
ಜಾಣಮೂರ್ಖ //
ಓ ಗೆಳೆಯ , ಬದುಕೊಂದು ಸುಂದರ ನದಿ ! ಜೀವನದಿ ! ಮೋಕ್ಷವೆಂಬ ಸಾಗರವನ್ನು ಸೇರುವುದು ಈ ಜೀವವಾಹಿನಿಯ ಗುರಿ. ಇದರೊಟ್ಟಿಗೆ ಕಾಲವಾಹಿನಿಯೆಂಬ ಮತ್ತೊಂದು ನದಿಯೂ ಜೊತೆಯಾಗಿ ಹರಿಯುತ್ತಿವೆ ! ಕಾಲಪ್ರವಾಹದೊಡನೆ ಜೀವಪ್ರವಾಹ ! ಈ ಪ್ರವಾಹದ ಹಾದಿಯೇ ಜೀವನ, ಬದುಕು. ಹೀಗೆ ಹರಿಯುವಾಗ ಉಬ್ಬರವಿಳಿತಗಳು ಬರುತ್ತವೆ. ಹಿಗ್ಗು ಕುಗ್ಗುಗಳು , ಏರಿಳಿತಗಳು ಬರುತ್ತವೆ. ಬರಲಿ! ಅವು ಬರಲೇಬೇಕು. ಇಲ್ಲದಿದ್ದರೆ ಜೀವವಾಹಿನಿಗೆ ಸೌಂದರ್ಯವೆಲ್ಲಿಯದು !? ಕೊರಕಲು ಜಲಪಾತಗಳಲ್ಲಿ ನದಿಯು ದುಮ್ಮಿಕ್ಕಿ ಹರಿದರೇನೇ ಸುಂದರ ಅಲ್ಲವೆ !? ಹಾಗೇ ಇಲ್ಲೂ ಸಹ ಅಷ್ಟೆ! ಆದರೆ ರಾಡಿಯಾಗೋದು ಬೇಡ ಅಷ್ಟೆ. ಕಾಲವಾಹಿನಿಯೊಡನೆ ಬರುವ ಏರಿಳಿತಗಳನ್ನೆಲ್ಲಾ ಶಾಂತವಾಗಿ ಸಹಿಸಿ ಸಹಿಸಿ ಮೌನವಾಗಿ ಸಾಗರ ಸೇರುವುದಷ್ಟೇ ಗುರಿಯಾಗಬೇಕು. ಬದುಕಿನ ದಿನಗಳು ಸುಂದರ ಶಾಂತವಾಗಿದ್ದರೆ ಮನಸ್ಸು ಕೂಡ ಶಾಂತವಾಗಿರುತ್ತದೆ. ಹಾರಾಟ ಹೋರಾಟಗಳಿದ್ದರೆ ರಾಡಿಯಾಗಿ ಅಶಾಂತತೆ ಇರುತ್ತದೆ. ಎರಡೂ ನಮ್ಮ ಕೈಯ್ಯಲ್ಲೇ ಇದೆ. ತಿನ್ನೋದು ಹಿಡಿಯನ್ನಕ್ಕೆ ಯಾಕಿಷ್ಟೊಂದು ಉದ್ವೇಗ ! ಹೋರಾಟ ! ಸ್ಪರ್ಧೆ ! ಸಂಘರ್ಷ ! ಅಲ್ಲವೇ ಗೆಳೆಯರೇ ?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021