ಬಳಿದು ಬಳಿ ಬಳಿದು ಬಿಳಿ
ಗಂಧ ಕಸ್ತೂರಿ ಕೆನೆ
ಚಂದವಾಯಿತೆ ಮೊಗವು
ಅಂದದೊಳಗೊಪ್ಪಿ !
ಮನದೊಳಾವಿರ್ಭವಿಸೆ
ಜ್ಞಾನಗಂಧದ್ರವ್ಯ
ವದು ಸಾಜ ಸೌಂದರ್ಯ
ಜಾಣಮೂರ್ಖ//
ಚಂದವಾಗಿ ಕಾಣಬೇಕೆಂಬ ಭ್ರಮೆಯಲ್ಲಿ ಸುಗಂಧ ದ್ರವ್ಯಗಳ ಲೇಪನ ಇಂದು ಜನರಲ್ಲಿ ಒಂದು ವಿಲಕ್ಷಣ ರೀತಿಯಾಗಿಬಿಟ್ಟಿದೆ. ಅದನ್ನು ಲೇಪಿಸಿಕೊಳ್ಳುವುದರ ನಂತರದ ಪರಿಣಾಮಗಳ ಬಗ್ಗೆ ನಾವು ಯೋಚಿಸುತ್ತಲೇ ಇಲ್ಲ. ತತ್ಕಾಲಕ್ಕೆ ಚಂದವಾಗಿ , ಅಂದವಾಗಿ ಕಂಡರಾಯ್ತು ! ಈ ನಿಟ್ಟಿನಲ್ಲಿ ಯಾರು ಯಾವ ಸುಗಂಧದ್ರವ್ಯವನ್ನು ಲೇಪಿಸಿಕೊಂಡರೂ ನಮ್ಮ ಯಾವ ಅಭ್ಯಂತರವೂ ಇಲ್ಲ. ಆದರೆ ಸಹಜ ಸೌಂದರ್ಯದ ಬಗ್ಗೆ ಸ್ವಲ್ಪ ಯೋಚಿಸೋಣ. ಯಾವ ಸುಗಂಧ ದ್ರವ್ಯಗಳ ಲೇಪನವಿಲ್ಲದೆಯೂ ನಾವು ತೇಜೋಮಯರಾಗಿ , ಕಾಂತಿವಂತರಾಗಿ ಕಾಣಬಹುದು. ಹೇಗೆ ಗೊತ್ತೆ !? ಸತತ ಅಧ್ಯಯನದಿಂದ ! ಈ ದ್ರವ್ಯವನ್ನು ಎಲ್ಲೂ ಕೊಂಡು ತರಬೇಕಿಲ್ಲ. ಜ್ಞಾನಾರ್ಜನೆಯ ಫಲವಾಗಿ ಸ್ವಯಂ ಆವಿರ್ಭವಿಸುವ ತೇಜಸ್ಸು ಇದು. ಜ್ಞಾನಗಂಧದ್ರವ್ಯ ! ಇದು ನಮ್ಮ ಮನದಲ್ಲಿ ಉತ್ಪತ್ತಿಗೊಂಡರಾಯ್ತು ! ಯಾವ ಸುಗಂಧ ದ್ರವ್ಯವೂ ಬೇಡ. ಒಂದು ರೀತಿಯ ದೈವೀಕಾಂತಿಯು ಮೊಗದಲ್ಲಿ ಹುಟ್ಟುತ್ತದೆ. ಆಗ ನಮ್ಮ ಮೊಗಕ್ಕೆ ಸಹಜ ಕಾಂತಿ , ಪ್ರಖರತೆ , ತೇಜಸ್ಸು , ಓಜಸ್ಸುಗಳು ಸ್ವಯಂ ಮೂಡುತ್ತವೆ. ಅದಕ್ಕೆ ಪ್ರಾಜ್ಞರು
ನರಸ್ಯ ಭೂಷಣಂ ರೂಪಃ
ರೂಪಸ್ಯ ಭೂಷಣಂ ಗುಣಃ
ಗುಣಸ್ಯ ಭೂಷಣಂ ಜ್ಞಾನಂ
ಜ್ಞಾನಸ್ಯ ಭೂಷಣಂ ಕ್ಷಮಾ . ಎಂದಿದ್ದಾರೆ. ಅಂದರೆ ಮಾನವರಿಗೆ ರೂಪವೂ, ರೂಪಕ್ಕೆ ಗುಣವೂ , ಗುಣಕ್ಕೆ ಜ್ಞಾನವೂ , ಜ್ಞಾನಕ್ಕೆ ಕ್ಷಮಾಗುಣವೂ ಭೂಷಣ ಎಂದರ್ಥ.
ಅದೆಷ್ಟು ಸುಂದರ ! ಅರ್ಥಪೂರ್ಣ! ನಮ್ಮ ಹಿರಿಯರ ನುಡಿ ! ಅಲ್ಲವೇ ಗೆಳೆಯರೇ ?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021