ತನುವ ದೇಗುಲದಲ್ಲಿ
ಮನವ ಹೂವಾಗಿಸಲು
ದೇವ ಬಹ ದಿಟದಿ ಕೇಳ್
ಸಂದಯಮದೇಕೆ ?
ಕಲ್ಮನದಿ ಕಲ್ಲಾಗ
ಲೆಂತು ಬಹನವ ಕೆಳೆಯ
ಅದಕೆ ಕಲ್ಲಾದನವ
ಜಾಣಮೂರ್ಖ//
ಓ, ಗೆಳೆಯ ನಮ್ಮ ಈ ಶರೀರವು ಒಂದು ಸುಂದರವಾದ ದೇವಾಲಯ. ನಿನ್ನ ಮನವನ್ನು ಹೂವಾಗಿಸು. ಸಂದೇಹವೇ ಬೇಡ. ಅಲ್ಲಿ ಭಗವಂತನು ಸ್ವಯಂ ಬರುತ್ತಾನೆ. ಆದರೆ ನಾವೇನು ಮಾಡಿದೆವು !? ಸ್ವಲ್ಪ ಯೋಚಿಸಿ. ಮನವ ಬರಿದಾಗಿಸಿದೆವು ! ಕಲ್ಲಾಗಿಸಿದೆವು ! ಕಲ್ಲಿನ ನಾಕು ಗೋಡೆಯ ಗುಡಿಯೊಳಗೆ ಅವನನ್ನೂ ಬಂಧಿಸಿ , ಅಬಂಧಿತನನ್ನು ಬಂಧಿತನನ್ನಾಗಿಸಿದೆವು. ನಮ್ಮದೇ ವಿಕೃತಿಗಳಿಂದ ನಾವೂ ಕಲ್ಲಾದೆವು. ಪ್ರೇಮಮಯನೂ , ಬಯಲೊಳಗೆ ಬಯಲಾದವನೂ , ಪ್ರೇಮಕೊಲಿಯುವವನೂ ಆದ ಭಗವಂತನು ಕಲ್ಮನದ ನಮ್ಮ ಬಳಿ ಎಂತು ಸುಳಿವನಯ್ಯಾ ಗೆಳೆಯ !? ಅದಕ್ಕೇ ಅವನೂ ಕಲ್ಲಾಗಿಬಿಟ್ಟ ! ಕೆಲವರು ಮಹಾನುಭಾವರು ಹೃದಯ ಹೂವಾಗಿಸಿ , ತಮ್ಮಂತರಂಗದೊಳು ಆರಾಧಿಸಿ ತಾವೂ ದೈವಸ್ವರೂಪರೇ ಆಗಿಬಿಟ್ಟರು ! ಆದರೆ ನಾವು ! ಸ್ವಲ್ಪ ಯೋಚಿಸಯ್ಯಾ ಗೆಳೆಯ.
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021