ನೇಕಾರನರ್ತಿಯಿಂ
ನೂಲಿನೆಳೆಗಳ ಪಿಡಿದು
ಅಡ್ಡದೆಳೆಯುದ್ದದೆಳೆ
ಹೊಂದಿಸುವನಲ್ತೆ !
ನೋವ್ನಲಿವಿನೆಳೆಗಳಿಂ
ನೇಕಾರ ಹೊಂದಿಸಿದ
ಬಾಳ ಬಟ್ಟೆಯ ನೋಡೊ
ಜಾಣಮೂರ್ಖ //
ನಾವೆಲ್ಲಾ ತರಾವರಿ ಬಣ್ಣ ಬಣ್ಣದ ಬಟ್ಟೆಗಳನ್ನು ಧರಿಸುತ್ತೇವೆ ! ಚಂದವಾಗಿ ಕಾಣಬೇಕೆಂದು ಅಲ್ಲವೇ ಗೆಳೆಯರೇ ? ಅದರ ಹಿಂದೆ ಬಟ್ಟೆ ನೆಯ್ದವನ ತುಂಬುಶ್ರಮವಿರುತ್ತದೆ. ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿ ನೂಲಿನ ಎಳೆಗಳು ಅಡ್ಡವಾಗಿಯೂ , ಉದ್ದುದ್ದವಾಗಿಯೂ ಜೋಡಿಸಲ್ಪಟ್ಟು ನೆಯ್ದ ಸುಂದರ ವಸ್ತ್ರವದು ! ಈ ಬದುಕೂ ಕೂಡ ಹಾಗೆಯೇ ಗೆಳೆಯರೇ ! ದೇವನೆಂಬ ನೇಕಾರನು ನೋವು ನಲಿವುಗಳೆಂಬ ಎಳೆಗಳನ್ನು ಅಡ್ಡಡ್ಡ ಉದ್ದುದ್ದವಾಗಿ ಸಮಾನವಾಗಿ ಜೋಡಿಸಿ ನೆಯ್ದಂತಹಾ ಬಾಳಬಟ್ಟೆ ಇದು. ಬರೀ ಉದ್ದವಾಗಿಯೋ ಅಥವಾ ಅಡ್ಡವಾಗಿಯೋ ಎಳೆಗಳನ್ನು ಜೋಡಿಸಿ ವಸ್ತ್ರವನ್ನು ನೇಯಲಾದೀತೆ ಗೆಳೆಯರೇ ? ಕಷ್ಟ ಸುಖ ನೋವು ನಲಿವುಗಳು ಬಾಳಬಟ್ಟೆಗೆ ಅಗತ್ಯವಾದವುಗಳು ತಾನೆ. ಕಷ್ಟದಲ್ಲಿ ಸುಖದ ಮಹತ್ವ ! ಸುಖದ ದೆಸೆಯಿಂದ ಕಷ್ಟದ ಮಹತ್ವಗಳು ತಿಳಿಯುವಂತೆ ರೂಪುಗೊಂಡ ಸುಂದರ ನೇಯ್ಗೆ ಈ ಜೀವನ ! ಅಲ್ಲವೇ ಗೆಳೆಯರೇ !?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021