ಷಡ್ರಸಂಗಳ ಕೊಟ್ಟು
ರುಚಿಯನಿತ್ತವರಾರು ?
ಒಂದಕೊಂದರ ಮೇಳ
ಹೊಂದಿಸಿದರಾರು ?
ಪಂಚಭೂತಂಗಳನು
ಅಣಿಗೈದರಾರೆರಗು
ಆ ದಿವ್ಯ ಶಕ್ತಿಗೆಲೊ
ಜಾಣಮೂರ್ಖ //
ಈ ಶರೀರದ ರಚನೆಯೇ ಒಂದು ಸೋಜಿಗ. ಒಂದೊಂದು ಅಂಗದ್ದೂ ಒಂದೊಂದು ವೈಶಿಷ್ಟ್ಯ. ನಾಲಿಗೆ ! ಅದು ಗ್ರಹಿಸೋ ರುಚಿ ! ರುಚಿಗೆ ತಕ್ಕಂತೆ ಪ್ರಕೃತಿಯಲ್ಲಿ ರೂಪುಗೊಂಡಿರೋ ಷಡ್ರಸಗಳು ! ಅವುಗಳ ಪ್ರಮಾಣಬದ್ಧ ಹೊಂದಾಣಿಕೆಯ ಅರಿವು ! ಲಕ್ಷ ಲಕ್ಷ ಜೀವರಾಶಿಗಳು ! ಅವುಗಳ ಬದುಕಿಗಾಗಿಯೇ ಅಣಿಗೊಳಿಸಿದಂತಿರುವ ಈ ಅಪೂರ್ವ ಸೃಷ್ಟಿ ! ಆಹಾರ ವ್ಯವಸ್ಥೆ ! ಪಂಚಭೂತಗಳು! ಇವುಗಳನ್ನೆಲ್ಲಾ ಅಣಿಮಾಡಿ , ಒಂದು ವ್ಯವಸ್ಥಿತ ರೀತಿಯಲ್ಲಿ ಸ್ವಲ್ಪವೂ ಚ್ಯುತಿ ಬಾರದಂತೆ ನಡೆಸುತ್ತಿರುವ ಶಕ್ತಿ ಯಾವುದು !? ಆ ದಿವ್ಯ ಶಕ್ತಿಗೆ ನಮಿಸಲೇಬೇಕು. ಅದಾವ ಶಕ್ತಿ ಬರೆಯುವ , ಓದುವ ಶಕ್ತಿಯನ್ನಿತ್ತಿದೆ !? ಅದಾವ ಶಕ್ತಿಯ ಕಿಡಿ ನಮ್ಮಲ್ಲಿನ ವಿಧ ವಿಧದ ಭಾವಗಳಿಗೆ ಕಾರಣವಾಗಿದೆ !? ನಮ್ಮೊಳಗಿನ ಆ ಶಕ್ತಿಯನ್ನು ಎಂದಾದರೂ ನೋಡುವ ಪ್ರಯತ್ನ ಮಾಡಿದ್ದೇವೆಯೇ ನಾವು ? ಬರೀ ಸಂಪಾದನೆಯ ಕಸರತ್ತೇ ಆಗಿ ಹೋಯ್ತಲ್ಲಾ ಜೀವನ ಪೂರ್ತಿ ! ನಮ್ಮ ಆತ್ಮಸಂಸ್ಕಾರಕ್ಕಾಗಿ ಏನು ಮಾಡುತ್ತಿದ್ದೇವೆ ನಾವು !? ಅಲ್ಲವೇ ? ಹಾಗಾದರೆ ಬನ್ನಿ ಶಾಂತವಾಗಿ ಕುಳಿತು ಆ ಶಕ್ತಿಯ ಕಡೆ ಸ್ವಲ್ಪ ಚಿಂತಿಸಿ , ಮನಸ್ಸನ್ನು ಅತ್ತ ಕಡೆ ಕೇಂದ್ರೀಕರಿಸಿ ನಮಿಸೋಣ. ನಮ್ಮ ಬದುಕಿನ ಕಾರಣವನ್ನು ಚಿಂತಿಸೋಣ ! ಆ ಸತ್ ಚಿತ್ ಆನಂದವನ್ನೂ , ನಿಜ ಶಾಂತಿಯನ್ನೂ ಪಡೆಯೋಣ.
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021