ಬಾಲ್ಯದಾ ಘನವೆಲ್ಲ
ಪ್ರೌಢನಾಗಲುವಘನ
ಪ್ರೌಢ ಮಾಗಲು ಮತ್ತೆ
ಘನವೆಲ್ಲವಘನ !
ಕಳೆದುದೆಲ್ಲವು ಹಳೆಯ
ಹೊತ್ತಗೆಯ ವೊಲು ತೋರ್ದು
ದೊಣಕೊರಡು ಕೊನರೀತೆ !
ಜಾಣಮೂರ್ಖ !?
ಕಳೆದಿರುವ ಬದುಕನ್ನು ಹಾಗೇ ಸುಮ್ಮನೇ ನೋಡಿ. ಬಾಲ್ಯದಲ್ಲಿ ಯಃಕಶ್ಚಿತ್ ಆದುದೆಲ್ಲಾ ತುಂಬಾ ಘನವಾಗಿ ಕಂಡಿರುತ್ತೆ. ಅಂದಿಗೆ ಅದು ಘನವೇ. ಸ್ವಲ್ಪ ದೊಡ್ಡವರಾದ ಮೇಲೆ ಅಯ್ಯೋ ಇದಕ್ಕಾಗಿ ಇಷ್ಟೊಂದು ಹಾರಾಡಿದೆನಾ ನಾನು ಅನ್ನಿಸುತ್ತೆ. ಈ ಪ್ರೌಢತ್ವ ವಯಸ್ಸು ಕಳೆದಂತೆ ಮತ್ತೆ ಮಾಗುತ್ತದೆ. ಬಾಳ ಲೌಕಿಕವನ್ನೆಲ್ಲಾ ಮನದ ಅನುಭವದ ಜೊತೆ ನಾದಿದಾಗ ಮುಂದಿನದೆಲ್ಲಾ ತೀರಾ ಕನಿಷ್ಠವೆನಿಸುತ್ತಾ ಹೋಗುತ್ತವೆ. ಕಳೆದ ಬದುಕು ಓದಿದ ಹಳೆಯ ಪುಸ್ತಕದಂತೆ ಗೋಚರವಾಗುತ್ತವೆ. ಅಷ್ಟು ಹೊತ್ತಿಗೆ ಮನದ ಮೋಹಗಳೆಲ್ಲಾ ಅಳಿದು ಕೊನರದ ಕೊರಡಿನಂತಾಗಿರುತ್ತೇವೆ. ಒಣಕೊರಡು ಚಿಗುರುವುದೆಂತು ? ಹೀಗೆ ಬದುಕು ಹಣ್ಣಾದಂತೆ ಮೋಹವಳಿಯಬೇಕು. ಮನಸ್ಸು ಹಣ್ಣಾಗಿ ಮಾಗಿ ಮಧುರವಾಗಿ ಕಡೆಗೆ ಪೂರ್ಣತ್ವದಲ್ಲಿ ಸೇರಿ , ಪೂರ್ಣವೇ ಆಗಿ ಶೂನ್ಯದಲ್ಲಿ ಸೇರಿ ಹೋಗಬೇಕು. ಇರಿ, ಇರಿ ಈ ಸ್ಥಿತಿ ಇನ್ನೂ ಕೊನೆಗೆ. ಈಗ ಬದುಕನ್ನು ಪ್ರೀತಿಸಿ , ಅನುಭವಿಸಿ. ಅನುಭವಿಯಾಗಿ ! ಬರೀ ಅನುಭವಿಯಾಗೇ ಉಳಿಯದೇ ಅನುಭಾವಿಯಾಗಿ. ಆ ನಂತರ ಇನ್ನಾವ ಉಪಾಧಿಗಳೂ ನಮ್ಮನ್ನು ಬಂಧಿಸಲಾರವು ! ಏನಂತೀರಿ !?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021