ಸುಧಾಮನಿಗೆ ರಾತ್ರಿ ಊಟ ಆದ ಮೇಲೆ ವಾಕಿಂಗ್ ಹೋಗುವ ಅಭ್ಯಾಸವಿತ್ತು. ಕೆಲವೊಮ್ಮೆ ಹೊರಗಡೆ ವಾಕಿಂಗ್ ಗೆ ಹೋದರೆ ಮತ್ತೊಮ್ಮೆ ಅಪಾರ್ಟ್ಮೆಂಟಿನ ಟೆರೇಸ್ ಮೇಲೆ ವಾಕಿಂಗ್ ಗೆ ಹೋಗುತ್ತಿದ್ದ. ಅವತ್ತು ಫಸ್ಟ್ ಶೋ ಸಿನಿಮಾ ನೋಡಿ ಬರುವದೊರಳಗೆ ತುಂಬಾ ಲೇಟ್ ಆಗಿ ಹೋಗಿತ್ತು. ಹಾಗಾಗಿ ರಾತ್ರಿ ಊಟ ಮಾಡಿ ಮುಗಿಸುವಾಗ ಸರಿ ಸುಮಾರು ೧೧ ಗಂಟೆ ಆಗಿತ್ತು. ಊಟ ಮಾಡಿ ಸ್ವಲ್ಪ ಹೊತ್ತು ಕುಳಿತು ಸಮಯ ನೋಡಿದ, ಸುಮಾರು ೧೧. ೩೦ ಆಗುತ್ತಾ ಬಂದಿತ್ತು. ರಾತ್ರಿ ತುಂಬಾ ಹೊತ್ತು ಆಗುತ್ತಾ ಬಂದಿದ್ದರಿಂದ ಹೊರಗಡೆ ವಾಕಿಂಗ್ ಹೋಗುವುದು ಬೇಡ, ಅಪಾರ್ಟ್ಮೆಂಟಿನ ಟೆರೇಸ್ ಗೆ ಹೋಗಿದರಾಯಿತು, ಅಂದುಕೊಂಡು ಟೆರೇಸ್ ಮೇಲೆ ವಾಕಿಂಗ್ ಗೆ ಬಂದ. ನಿಧಾನವಾಗಿ ಟೆರೇಸ್ ಮೇಲೆ ಅತ್ತಿಂದಿತ್ತ ಓಡಾಡಲು ಶುರು ಮಾಡಿದ. ಓಡಾಡುತ್ತ ಅವನಿಗೆ ಅವತ್ತು ನೋಡಿದ ಸಿನೆಮಾದ ಬಗ್ಗೆ ಒಂದೊಂದೇ ನೆನಪುಗಳು ಬರಲಾರಂಭಿಸಿದವು. ಸಿನೆಮಾದ ಹೀರೋಯಿನ್ ತನ್ನ ಮೇಲೆ ಆದ ಅನ್ಯಾಯಕ್ಕೆ ಸತ್ತು, ದೆವ್ವ ಆಗಿ ಬಂದು ಎಲ್ಲ ವಿಲ್ಲನ್ ಗಳನ್ನು ಸಾಯಿಸುವ ಸೀನ್ ಗಳು ಒಂದೊಂದಾಗಿ ಕಣ್ಣ ಮುಂದೆ ಬರತೊಡಗಿದವು. ಹೀರೋಯಿನ್ ಳ ಭೀಕರ ಮುಖ, ಕೊಲ್ಲುವಾಗ ಆಗುವ ರಕ್ತ ಪಾತ ಎಲ್ಲವು ಮತ್ತೊಮ್ಮೆ ಸಿನಿಮಾ ಸ್ಕ್ರೀನ್ ಮೇಲೆ ಬರುವಂತೆ ಮನಸ್ಸಿನಲ್ಲಿ ಚಿತ್ರಗಳು ಮೂಡತೊಡಗಿತು. ಯಾಕೋ ಸ್ವಲ್ಪ ಭಯ ಆಯಿತು. ಅವತ್ತಿನವರೆಗೂ ಟೆರೇಸ್ ಮೇಲಿನ ಕತ್ತಲು ಅವನಿಗೆ ಏನು ಅನ್ನಿಸಿರಲಿಲ್ಲ ಮತ್ತು ಭಯ ಹುಟ್ಟಿಸರಲಿಲ್ಲ. ಆದರೆ ಯಾಕೋ ಅಂದು ಕತ್ತಲು ಸ್ವಲ್ಪ ಕಿರಿ ಕಿರಿ ಅನಿಸತೊಡಗಿತು.
ಹೀಗೆ ಯೋಚನೆ ಮಾಡುತ್ತಾ ಸುಧಾಮನಿಗೆ ತನ್ನ ಮೇಲೆ ತನಗೆ ನಗು ಬಂತು. ಸಿನಿಮಾ ನೋಡಿ ಬಂದು ಏನೇನೋ ಯೋಚನೆ ಮಾಡಿ ಕತ್ತಲು ಕೂಡ ಇವತ್ತು ಕಿರಿ ಕಿರಿ ತರುತ್ತಿದೆಯಲ್ಲ, ಎಲ್ಲ ಮನಸ್ಸಿನ ಭ್ರಮೆ ಅಷ್ಟೇ, ಯೋಚನೆಗಳೇ ನಮ್ಮ ಶತ್ರು, ದೆವ್ವ ಭೂತಗಳೆಲ್ಲ ಪರಿ ಕಲ್ಪನೆ ಅಂದುಕೊಂಡು, ತನ್ನ ಕೆಲಸದ ಬಗ್ಗೆ ಯೋಚನೆ ಶುರು ಹಚ್ಚಿಕೊಂಡ. ನಾಳೆ ಮಾಡುವ ಕೆಲಸಗಳ ಪಟ್ಟಿ ಮನಸ್ಸಿನಲ್ಲಿ ಮಾಡುತ್ತಾ, ಪಟ್ಟಿಯೇ ದೆವ್ವ ಭೂತಗಳಿಗಿಂತ ಜಾಸ್ತಿ ಹೆದರಿಗೆ ತರುವಂತಿದೆ ಅಂತ ಅಂದುಕೊಂಡ. ಹಾಗೆ ಅಡ್ಡಾಡುತ್ತ , ೨೫ ನಿಮಿಷಗಳ ನಂತರ ಹೋಗಿ ಮಲಗಿದರಾಯಿತು ಅಂತ ಅಂದುಕೊಂಡು, ಕೆಳಕ್ಕೆ ಇಳಿಯಲು ಇರುವ ಟೆರೇಸ್ ಬಾಗಿಲ ಕಡೆ ಹೋಗಲು ತಿರುಗಿದನು. ಆಗ ಬಾಗಿಲ ಪಕ್ಕದಲ್ಲಿ ಯಾರೋ ನಿಂತಿರುವ ಹಾಗೆ ಕಾಣಿಸಿತು. ಯಾಕೋ ಅಂದು ಸಲ ಎದೆ ದಸಕ್ಕಂದಿತು. ಹಾಗೆ ಅಲ್ಲಿಯೇ ನಿಂತು ಬಿಟ್ಟ.
ಅವನ ಬಿಟ್ಟರೆ ಟೆರೇಸ್ ಮೇಲೆ ವಾಕಿಂಗ್ ಗೆ ಅಪಾರ್ಟ್ಮೆಂಟ್ ನಿಂದ ಯಾರು ಬರುತ್ತಿರಲಿಲ್ಲ. ಇಷ್ಟು ರಾತ್ರಿಯಲ್ಲಿ ಯಾರಿರಬಹುದು ಅಂತ ೧೦ ಕ್ಷಣ ಹಾಗೆಯೇ ನಿಂತು ನೋಡಿದ, ಯಾರೋ ನಿಂತು ತನ್ನ ಕೈಯಿಂದ ತಲೆಯನ್ನು ನೇವರಿಸಿಕೊಳ್ಳುತ್ತಾ ನಿಂತಿದ್ದರು. ಆದರೆ ಮುಖ ಮಾತ್ರ ಕಾಣುತ್ತಿರಲಿಲ್ಲ. ಯಾರದು ಅಂತ ಜೋರಾಗಿ ಕೂಗಲು ಪ್ರಯತ್ನ ಮಾಡಿದರು ಧ್ವನಿ ಯಾಕೋ ಅಷ್ಟು ಜೋರಾಗಿ ಬರಲಿಲ್ಲ. ನಿಧಾವಾಗಿ ಹಣೆಯ ಮೇಲೆ ಬೆವರ ಹನಿ ಮೂಡ ತೊಡಗಿತು. ಮನಸ್ಸಿನಲ್ಲಿ ದೆವ್ವ ಭೂತ ಎಲ್ಲ ಇಲ್ಲ ಅಂದುಕೊಂಡರು, ಹೃದಯದ ಬಡಿತ ಜೋರಾಯಿತು. ಇದ್ದ ಬದ್ದ ಧೈರ್ಯ ಒಟ್ಟುಗೂಡಿಸಿ ಯಾರ್ರೀ ಅದು ಅಂತ ಜೋರಾಗಿ ಕೂಗಿದ. ತಣ್ಣನೆ ಗಾಳಿ ಆ ಕಡೆಯಿಂದ ಬಂದಂತಾಯಿತು ಬಿಟ್ಟರೆ ಯಾವುದೇ ಉತ್ತರ ಬರಲಿಲ್ಲ. ಆಕೃತಿ ನಿಧಾನವಾಗಿ ಮೇಲೆ ಕೆಳಗೆ ಹಾರಲು ಶುರು ಮಾಡಿತು. ಸುಧಾಮನಿಗೆ ಇದ್ದ ಧೈರ್ಯವೂ ಕಾಲಿಯಾಗಿ , ಗಂಟಲು ಒಣಗಿ, ಅವನ ಕೈ ಕಾಲುಗಳು ಅದುರತೊಡಗಿತು. ಕೆಳಗಡೆ ಹೋಗಲು ಅದೊಂದು ದಾರಿ ಬಿಟ್ಟರೆ ಬೇರೆ ಇಲ್ಲ, ಅಲ್ಲಿಂದಲೇ ಹೋಗಬೇಕು. ಏನು ಮಾಡಲು ತೋಚದೆ ಭಯದಿಂದ ನಡುಗಿಹೋದ.
ಕೊನೆಗೆ ಹೆದರಿ ಸಾಯುವ ಬದಲು ಎದುರಿಸಿ ಸಾಯೋಣ ಅಂತ ಆ ಕಡೆ ಈ ಕಡೆ ಏನಾದರೂ ಕೋಲು ಸಿಗುತ್ತದಾ ಎಂದು ನೋಡಿದ. ಒಂದು ಮೂಲೆಯಲ್ಲಿ ಒಂದು ದೊಡ್ಡ ಪ್ಲಾಸ್ಟಿಕ್ ಪೈಪು ಕಾಣಿಸಿತು. ಅದನ್ನು ಎತ್ತಿಕೊಂಡು ಆ ಆಕೃತಿಯ ಕಡೆಗೆ ಹೊರಟ. ಹತ್ತಿರ ಹೋದಂತೆ ಆಕೃತಿ ಜೋರಾಗಿ ಅಲ್ಲಾಡತೊಡಗಿತು. ಅದರ ಹತ್ತಿರಕ್ಕೆ ಹೋಗಿ ಜೋರಾಗಿ ಹೊಡೆಯಲು ಪೈಪನ್ನು ಎತ್ತಿ ಹಾಗೆ ನಿಂತುಬಿಟ್ಟ. ಬಟ್ಟೆ ಒಣಗಿಸುವ ತಂತಿಗೆ, ಹ್ಯಾಂಗರಿಗೆ ಹಾಕಿದ ಕಪ್ಪು ಬಣ್ಣದ ಉದ್ದನೆಯ ಕೈಯ ಟಿ ಶರ್ಟ್ ಅವನನ್ನು ಅಣಕಿಸುತ್ತಿರುವ ಹಾಗೆ ಗಾಳಿಗೆ ಹಾರಾಡುತ್ತಿತ್ತು. ದೂರದಿಂದ ಎಲ್ಲಿಂದಲೋ ಅವಾಗವಾಗ ಅದರ ಮೇಲೆ ಬೀಳುತ್ತಿದ್ದ ಬೆಳಕು ಹಾಗು ಅವನ ಮನಸ್ಸಿನಲ್ಲಿದ್ದ ಸಿನೆಮಾದ ನೆನಪುಗಳು ಅದಕ್ಕೆ ಆಕೃತಿಯ ರೂಪ ಕೊಟ್ಟಿತ್ತು.
- ಕ್ಷಮಿಸಿ ಬಿಡು ಅಮ್ಮ… ವಯಸ್ಸಾಗಿದ್ದುಗೊತ್ತೇ ಆಗಲಿಲ್ಲ. - September 29, 2020
- ನೈಟ್ ವಾಕ್…. - September 20, 2020