ನವಿಲ ನಾಟ್ಯವ ಕಂಡು
ನೊಂದುಕೊಳ್ವುದೆ ಕಾಕ ?
ಕೋಗಿಲೆಯ ಘೂಕ ತಾಂ
ಮಚ್ಚರಿಪುದೇನು ?
ಎಮ್ಮ ಬಾಳೆಮಗಿರಲು
ಲೋಗರೊಡೆ ಹೋಲಿಸುತ
ನರಳುವುದು ತರವೆ ಪೇಳ್
ಜಾಣಮೂರ್ಖ //
ಪ್ರಾಣಿ ಪಕ್ಷಿಗಳ ಬದುಕು ಬಹು ಸುಂದರ ! ಅವು ಎಂದೂ ಇತರರೊಂದಿಗೆ ತಮ್ಮನ್ನು ಹೋಲಿಸಿಕೊಳ್ಳುವುದಿಲ್ಲ. ತಾವಾಯಿತು , ತಮ್ಮ ಬದುಕಾಯಿತೆಂದು ಇದ್ದುಬಿಡುತ್ತವೆ. ನವಿಲ ನಾಟ್ಯವ ಕಂಡು ಕಾಗೆ ಎಂದೂ ನೊಂದುಕೊಂಡಿಲ್ಲ ! ಕೋಗಿಲೆಯ ಇಂಪಾದ ಕೂಗಿಗೆ ಗೂಬೆ ಎಂದಾದರೂ ಅಸೂಯೆ ಪಟ್ಟಿದ್ದುಂಟೆ ? ಇದ್ದರೂ ! ಅದು ಮಾನವ ನಿರ್ಮಿತ ಕಥೆಗಳಲ್ಲಿ ಮಾತ್ರ ! ಏಕೆಂದರೆ ಅವು ಮನುಷ್ಯನಿಂದ ಹುಟ್ಟಿದ ಕಥೆಗಳು ! ಯದ್ಭಾವಂ ತದ್ಭವತಿ ! ನಾವು ಹೇಗೋ ನಮ್ಮಿಂದ ಹುಟ್ಟಿದ ಕಥೆಗಳಲ್ಲೂ ಅದೇ ಭಾವ ! ಇತರರೊಂದಿಗೆ ಹೋಲಿಸಿಕೊಳ್ಳದೇ ಸುಂದರವಾಗಿ ಬದುಕುವ ಅವುಗಳನ್ನು ನೋಡಿ ನಾವು ಕಲಿಯಬೇಕಿದೆ. ನಮ್ಮ ಬಾಳು ನಮಗಿದೆ. ಅದನ್ನು ಸ್ವೀಕರಿಸೋಣ. ಅದುಬಿಟ್ಟು ಇತರರೊಂದಿಗೆ ಹೋಲಿಸಿಕೊಳ್ಳುತ್ತಾ , ನರಳುತ್ತಲೇ ಬದುಕೋದು ಎಷ್ಟು ಮಾತ್ರ ಸರಿ ? ಹೀಗೆ ಹೋಲಿಸಿಕೊಳ್ಳುವುದನ್ನು ಬಿಟ್ಟು ನಿಮ್ಮ ಬದುಕನ್ನೊಮ್ಮೆ ಒಳಹೊಕ್ಕು ನೋಡಿ ! ನಿಜಕ್ಕೂ ತುಂಬಾ ಸುಂದರವಾಗಿರುತ್ತದೆ. ಲೋಗರ ಗೊಡವೆ ಬಿಡಿ. ಭಗವಂತ ಕೊಟ್ಟ ಬದುಕನ್ನು ಸಂತೋಷವಾಗಿ ಕಳೆಯೋಣ. ಅಲ್ಲವೇ ಗೆಳೆಯರೇ ?!
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021