ಮಿತ್ತುವಿನ ಕತ್ತಿ ತಾ
ನೆತ್ತಿಯೊಳು ತೂಗಿರಲು
ಕತ್ತು ವಿತ್ತದ ಕಡೆಗೆ
ಚಿತ್ತಕ್ಕೆ ಮಾಯೆ !
ಎಚ್ಚೆತ್ತು ಇತ್ತ ಬಾ
ಹೊತ್ತು ಮೀರುವುದಯ್ಯೊ
ಸತ್ತಮೇಲೊಂಟಿ ನೀ
ಜಾಣಮೂರ್ಖ//
ಸತ್ಯವು ಸಹಿಸಿಕೊಳ್ಳಲು ತುಂಬಾ ಕಷ್ಟ. ಆದರೂ ಹೇಳಿಬಿಡುತ್ತೇನೆ.ಇವತ್ತಿನ ಪರಿಸ್ಥಿತಿಯನ್ನೊಮ್ಮೆ ಹಾಗೇ ನೋಡಿದರೆ ಮೃತ್ಯು ಯಾವಾಗ ಹೇಗೆ ಬರುತ್ತದೋ ಹೇಳಲಿಕ್ಕಾಗದು ! ನಮ್ಮನ್ನು ನೋಡಿ ಅದು ನಿಜಕ್ಕೂ ನಗುತ್ತಿದೆ ! ನೆತ್ತಿಯ ಮೇಲೇಯೇ ನಾನಿದ್ದರೂ ಇವನ ಕತ್ತು ಮಾತ್ರ ವಾಲಬೇಕಾದ ಕಡೆಗೆ ವಾಲದೆ ಹಣದ ಕಡೆಗೇ ವಾಲುತ್ತಿದೆಯಲ್ಲಾ ಎಂದು ಪರಿಹಾಸ್ಯಗೈಯ್ಯುತ್ತಿದೆ ! ಆದರೂ ಚಿತ್ತವನ್ನು ಮುತ್ತಿರುವ ಮಾಯೆಯ ಗಾಢಾಂಧಕಾರದಲ್ಲಿ ಆ ಪರಿಹಾಸ್ಯವು ಕಾಣುತ್ತಲೂ ಇಲ್ಲ ! ಕೇಳುತ್ತಲೂ ಇಲ್ಲ ! ಹೀಗೆಯೇ ಸಾಗಿದರೆಂತು ಹೇಳಯ್ಯ ಗೆಳೆಯ ! ಇನ್ನಾದರೂ ಎಚ್ಚೆತ್ತುಕೋ. ಆಡಾಡುತ್ತಾ ಬದುಕಿನ ಸಂಧ್ಯಾಕಾಲ ಬಂದೇ ಬಿಡುತ್ತದೆ. ಸತ್ತ ಮೇಲಂತೂ ಹೇಳುವುದೇನಿದೆ ನಾವು ಒಂಟಿಯೇ ! ನಂಬಿದವರು ಯಾರೇ ಆಗಿರಲಿ ಜೊತೆಗೆ ಬಾರರು . ಅದು ಸಾಧ್ಯವೂ ಇಲ್ಲ. ಇನ್ನಾದರೂ ಅರಿತು ನಡೆಯಯ್ಯಾ ಗೆಳೆಯ
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021