ನೆಲನ ಕೊಟ್ಟವನಾರೊ
ನೀರನಿಟ್ಟವನಾರೊ
ಗಾಳಿ ಬಯಲಗ್ನಿಗಳ
ಕೊಟ್ಟವನು ಯಾರೊ
ಕೊಟ್ಟ ದೇವನು ಮೌನಿ
ಮರೆತೆವೇತಕೆ ನಾವು ?
ನಮ್ಮದೇನಿಹುದಿಲ್ಲಿ
ಜಾಣಮೂರ್ಖ //
ನಾನು , ನನ್ನದೆಂಬ ವ್ಯಾಮೋಹಕ್ಕೆ ಬಿದ್ದು ನಾವು ಸುಮ್ಮನೆ ಉದ್ವೇಗಕ್ಕೆ ಒಳಗಾಗುತ್ತಿದ್ದೇವೆ. ಲೌಕಿಕ ಬದುಕಿಗೆ ಇವೆಲ್ಲಾ ಉಪಾಧಿಗಳು ಬೇಕು ನಿಜ. (ಅಧ್ಯಾತ್ಮಿಕ ಬದುಕಿಗೆ ಬೇಡವಾದ ಎಲ್ಲವೂ ಉಪಾಧಿಗಳೇ. ಹಣ, ಆಸ್ತಿ, ಒಡವೆ, ಬಿರುದುಬಾವಲಿಗಳು ಇತ್ಯಾದಿಗಳೆಲ್ಲವೂ) ಆದರೆ ಇವುಗಳ ವ್ಯಾಮೋಹ ಅತಿಯಾಗಬಾರದು. ಅತಿಯಾದ ವ್ಯಾಮೋಹಿಗಳ ಅಂತರಂಗದ ಬದುಕು ಹೇಗಿರುತ್ತೆ ಎಂದರೆ ಅವರು ತುಂಬಾ ಬಡವರು ಮತ್ತು ಅತೃಪ್ತರಾಗಿರುತ್ತಾರೆ. ನೆಲ , ನೀರು, ಬೆಂಕಿ , ಬಯಲು , ಗಾಳಿ ಇದನ್ನೆಲ್ಲಾ ಮಾನವನಿಗೆ ನೀಡಿದ ಭಗವಂತನು ಮೌನವಾಗಿದ್ದಾನೆ. ಆದರೆ ಇದನ್ನೇ ಬಳಸಿಕೊಂಡು ಕೆರೆ ಕಟ್ಟಿಸಿ , ಬಾವಿ ತೋಡಿಸಿ, ದೇವಾಲಯ ಕಟ್ಟಿಸಿ ನಾನು ಮಾಡಿದ್ದು ಎಂದು ಹೆಸರು ಕೆತ್ತಿಸೋ ನಾವೆಷ್ಟು ಚಿಕ್ಕವರಲ್ಲವೇ ? ವಿಪರ್ಯಾಸವೆಂದರೆ ಇದಕ್ಕೆಲ್ಲಾ ಮೂಲದ್ರವ್ಯಸ್ವರೂಪನಾದ ಭಗವಂತನನ್ನೇ ಮರೆತಿರುವುದು ಮತ್ತೆ ತಾನೇ ಭಗವತ್ಸ್ವರೂಪಿ ಎಂಬ ಹುಚ್ಚು ಭ್ರಮೆ ಮತ್ತು ಅಹಂಕಾರದಲ್ಲಿ ಮೆರೆಯುತ್ತಿರುವುದು ! ದೈವಾಂಶ ಸಂಭೂತರಾದವರು ಇಂತಹಾ ಭ್ರಮೆ ಮತ್ತು ಅಹಂಕಾರಗಳಿಗೆ ಒಳಗಾಗುವುದೇ ಇಲ್ಲ. ಸ್ವಲ್ಪ ಚಿಂತಿಸಲೇ ಬೇಕು. ಅಲ್ಲವೇ ಗೆಳೆಯರೇ ?
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021