ಕೆಸರೊಳರಳಿದರೇನು
ಹಸನು ಕಮಲದ ಬದುಕು
ಮಾಸುವುದೆ ಮೋಹಕತೆ
ಕೆಸರಿನೊಡಲಿನಲಿ ?
ಹೊರಗಿನೈಹಿಕವಳಿದು
ಒಳಗಿನಾತ್ಮವು ಬೆಳಗೆ
ಕೆಸರೊಡಲ ಕಮಲ ನೀ
ಜಾಣಮೂರ್ಖ //
ಕೆಸರಿನ ಮಧ್ಯೆ ಇದ್ದರೂ ಸಹ ಕಮಲದ ಹೂವಿನ ಬದುಕು ಸಾರ್ಥಕ.ಅದರ ಚೆಲುವು , ಕಂಪು, ಮೋಹಕತೆಯು ಕಿಂಚಿತ್ತೂ ಮಾಸುವುದಿಲ್ಲ. ಕಮಲವು ಸಹಜವಾಗೇ ಸುಂದರವಾಗಿದೆ. ಕೃತಕವಾದುದು ಏನೂ ಇಲ್ಲ. ಯಾರೂ ಶೃಂಗಾರ ಮಾಡಿಲ್ಲ ಅದಕ್ಕೆ. ತನ್ನಷ್ಟಕ್ಕೆ ತಾನೇ ಸುಂದರವಾಗಿದೆ. ನಮ್ಮ ಬದುಕೂ ಸಹ ಹಾಗೆಯೇ ಇದ್ದರೆಷ್ಟು ಚಂದವಲ್ಲವೇ ಗೆಳೆಯರೇ ? ಐಹಿಕ ಭೋಗ ಭಾಗ್ಯಗಳ ಆಸೆಯನ್ನು ತೊರೆದು ಅಂದರೆ ಪ್ರಾಪಂಚಿಕವಾದುದು ನಶ್ವರವೆಂಬುದನ್ನು ಅರಿತು ನಮ್ಮೊಳಗಿನ ಆತ್ಮವು ಬೆಳಗಬೇಕು. ಆತ್ಮಶುದ್ಧಿ , ಅಂತರಂಗ ಶುದ್ಧಿಯಾಗಬೇಕು. ಐಹಿಕವೇ ಕೆಸರು. ಆ ಕೆಸರಿನೊಡಲಿನ ಕಮಲ ನಾವಾಗಬೇಕು. ಆತ್ಮಜ್ಞಾನವು ನಮ್ಮೊಳಗಿನಿಂದ ಸಹಜವಾಗೇ ಮೂಡಿ ಬಂದು, ಬದುಕು ಸುಂದರವೂ , ಅರ್ಥಪೂರ್ಣವೂ ಆಗಬೇಕು. ಅಲ್ಲವೇ ಗೆಳೆಯರೇ ?
Latest posts by ಶ್ರೀ ಮುರಳೀಧರ ಹೆಚ್ ಆರ್ (see all)
- ಭವ ಕಳೆವ ಶಿವ ಸತ್ಯ - September 6, 2021
- ಬಾಳಿನಾಹವ - September 4, 2021
- ಪಿಡಿದರಿವಿನೊಳ್ಮಾಗು - September 3, 2021